ಗಣೇಶ ಹಬ್ಬದ ವಿಶೇಷಾಂಕ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು. ಸಾಂಪ್ರದಾಯಿಕ ರೀತಿಯಲ್ಲಿ ಕುಟುಂಬದ ಆಚರಣೆಯಾಗಿದ್ದ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು. ಲೋಕಮಾನ್ಯ ತಿಲಕರು ಗಣೇಶ ಮ‌ೂರ್ತಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದರು. ಜನರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮ‌ೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ತಿಲಕರು ಮಾರ್ಪಡಿಸಿದರು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ. 

ಗಣೇಶನ ಪೂಜೆ 
ಗಣೇಶ ಚತುರ್ಥಿಯಂದು ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ ಮನೆಗಳಲ್ಲಿ ತಾತ್ಕಾಲಿಕ ಮಂಟಪಗಳಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶ ಚತುರ್ಥಿ ಆರಂಭವಾಗುತ್ತದೆ. ಗಣೇಶನ ಸಾರ್ವಜನಿಕ ಉತ್ಸವಕ್ಕೆ ದೇಣಿಗೆ ಮ‌ೂಲಕ ಹಣ ಸಂಗ್ರಹಿಸಿ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತದೆ. ಮಂಟಪಗಳು ಹೂವಿನ ಹಾರ, ಝಗಮಗಿಸುವ ದೀಪಗಳಿಂದ ಅಲಂಕೃತಗೊಳ್ಳುತ್ತವೆ. ಕೆಂಪು ರೇಷ್ಮೆ ದೋತಿ ಮತ್ತು ಶಾಲನ್ನು ಹೊದ್ದ ಅರ್ಚಕ ಮಂತ್ರಗಳ ಪಠಣದೊಂದಿಗೆ ನಿರ್ಜೀವ ಮ‌ೂರ್ತಿಗೆ ಜೀವ ತುಂಬುತ್ತಾರೆ.

ಈ ಆಚರಣೆಗೆ ಪ್ರಾಣಪ್ರತಿಷ್ಠ ಎನ್ನುತ್ತಾರೆ. ಇದಾದ ಬಳಿಕ ಶೋಡಶೋಪಚಾರ(16 ವಿಧಗಳ ಅರ್ಪಣೆ) ಆಚರಣೆ ಆರಂಭವಾಗುತ್ತದೆ. ತೆಂಗಿನಕಾಯಿ, ಬೆಲ್ಲ, 21 ಮೋದಕಗಳು, 21 ದುರ್ವ ಹುಲ್ಲು ಮತ್ತು ಕೆಂಪು ಹೂವುಗಳನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ಸಮಾರಂಭವುದ್ದಕ್ಕೂ ಋಗ್‌ವೇದ, ಗಣಪತಿ ಅಥರ್ವಾ ಶಿರ್ಶಾ ಉಪನಿಷದ್ ಮತ್ತು ನಾರದ ಪುರಾಣದ ಗಣೇಶ ಸ್ತೋತ್ರದಿಂದ ಆಯ್ದ ವೇದಮಂತ್ರಗಳನ್ನು ಪಠಣಮಾಡಲಾಗುತ್ತದೆ. 10 ದಿನಗಳವರೆಗೆ ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿವರೆಗೆ ಗಣೇಶನ ಪೂಜೆ ನೆರವೇರಿಸಲಾಗುತ್ತದೆ. ಆದರೆ ಕೆಲವರು ಅವರವರ ಸಂಪ್ರದಾಯದ ಪ್ರಕಾರ ಒಂದು ದಿನ, ಮೂರು ದಿನ, ಐದು ದಿನ, ಏಳು ದಿನ ಹಾಗೂ ಒಂಬತ್ತು ದಿನಗಳವರೆಗೆ ಗಣೇಶನನ್ನು ಕೂರಿಸುತ್ತಾರೆ.

11ನೇ ದಿನ ವಿಗ್ರಹವನ್ನು ಮೆರವಣಿಗೆ ಮ‌ೂಲಕ ನೃತ್ಯ, ಹಾಡು ಮತ್ತಿತರ ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಗಣೇಶ ವಿಸರ್ಜನೆಯು ಗಣೇಶನ ನೆಲೆವೀಡಾದ ಕೈಲಾಸದ ಪ್ರಯಾಣದಲ್ಲಿ ಭಕ್ತಜನಕೋಟಿಯ ದುರಾದೃಷ್ಟಗಳನ್ನು ತನ್ನ ಜತೆ ಒಯ್ಯುವುದರ ಸಂಕೇತವಾಗಿದೆ. ಗಣೇಶನಿಗೆ ಅರ್ಪಿಸುವ ಸಿಹಿತಿಂಡಿ ಮೋದಕ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿ, ಒಣತೆಂಗು, ಬೆಲ್ಲ, ಒಣಹಣ್ಣುಗಳು ಮತ್ತಿತರ ಪದಾರ್ಥಗಳನ್ನು ಬೆರೆಸಿ ಉಗಿಯಿಂದ ಬೇಯಿಸಲಾಗುತ್ತದೆ ಅಥವಾ ಕರಿಯಲಾಗುತ್ತದೆ. ಇನ್ನೊಂದು ಜನಪ್ರಿಯ ತಿಂಡಿ ಕರಂಜಿ ಅಥವಾ ಕನ್ನಡದಲ್ಲಿ ಕರ್ಜಿಕಾಯಿ ಎನ್ನಲಾಗುವ ಇದು ರುಚಿಯಲ್ಲಿ ಮೋದಕದಂತೆಯೇ ಇರುತ್ತದೆ.

ಶ್ರೀ ಗಣೇಶ ಸಹಸ್ರನಾಮಕ್ಕೆ ಇಲ್ಲಿ ಕ್ಲಿಕ್ ಮಾಡಿ
ಶ್ರೀ ಗಣೇಶ ಅಷ್ಟೋತ್ತರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀ ಗಣೇಶ ಭಜನೆಗಾಗಿ ಇಲ್ಲಿ ಕ್ಲಿಕ್ ಮಾಡಿ