ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ (ಅಂದರೆ ಈ ಬಾರಿ ೧೩-ಡಿಸೆಂಬರ್ ೨೦೧೪), ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ.
ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ.ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನೆಡೆದದ್ದೆಂದು ಸಾಧಿಸುತ್ತಾರೆ. ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು. ಎಂದ. ಶ್ರೀ ಕೃಷ್ಣನನ್ನು ಈ ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಅದರಿಂದಲೇ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.
ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.
ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗ ವನ್ಮ್ನ ಆರಿಸಿಕೊಳ್ಳಬಹ್ಮದು. ಸದ್ಧರ್ವ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನವಾಗಬಹುದೆಂದು ನನ್ನಭಾವನೆ. ಈ ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ.