ವಿಜಯ ದಶಮಿ ವಿಶೇಷಾಂಕ - ನಾಡಹಬ್ಬ

"ಓಂಕಾರದ ಎಲ್ಲ ಸದಸ್ಯರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು"

ಹಬ್ಬಗಳ ಆಚರಣೆ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಸಂಸ್ಕೃತಿ ಐಕ್ಯತೆಯನ್ನು ಮೂಡಿಸುವ ಒಂದು ಸರಳ ಸೂತ್ರವಾಗಿದೆ. ಶ್ರೀಮಾನ್ಯ ಬಾಲ ಗಂಗಾಧರ ತಿಲಕರು ನಮ್ಮ ಹಬ್ಬಗಳ ಆಚರಣೆಗೆ ಸಾರ್ವಜನಿಕ ರೂಪ ಕೊಟ್ಟು ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟರು. ಇಂತಹ ಸಂಸ್ಕೃತಿಯ ಪರಿಚಯ ತಮಗೆಲ್ಲರಿಗೂ ಮಾಡಿಕೊಡುವದು ಓಂಕಾರದ ಮುಖ್ಯ ಉದ್ದೇಶ. ಹಾಗಾಗಿ ಪ್ರತಿ ಹಬ್ಬದ ಮೂಲ, ಅಚಾರ ಮತ್ತು ಪದ್ಧತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಮಗಾಗಿ ಇಲ್ಲಿ ಕೊಡಲಾಗುತ್ತಿದೆ.
 
ವಿಜಯ ದಶಮಿಯು ಯಾವಾಗಲೂ ಮಂಗಳಕರವಾದುದು. ಇಂಥ ದಶಮಿ ದಿನ ಮಾಡಿದ ದಾನವು ಕೋಟಿ ಪಾಲು ಪುಣ್ಯವನ್ನು ಕೊಡುತ್ತದೆ. ಪುಣ್ಯವಾದ ದಶಮಿಯು ಮಾನವರಿಗೆ ಜಯ ಕೊಡುವುದರಿಂದ ವಿಜಯದಶಮಿ ಎಂದೇ ಪ್ರಸಿದ್ಧವಾಗಿದೆ.
 
ವಿಜಯ ದಶಮಿಯನ್ನು ಕರ್ನಾಟಕದಲ್ಲಿ ನಾಡಹಬ್ಬ ಎಂದೂ ಕರೆಯುತ್ತಾರೆ, ಇದರರ್ಥ ವಿಜಯದಶಮಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಆದ ಕಾರಣ ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಹಬ್ಬದ ಸಾಂಸ್ಕೃತಿಕ ಪರಂಪರೆ ಮತ್ತು ಜನಪದ ಸಾಹಿತ್ಯವನ್ನು ಅರ್ಥ ಮಾಡಿಕೊಂಡರೆ ಈ ನಾಡಹಬ್ಬದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.  

 

ಜಾನಪದ ಸಾಹಿತ್ಯ ದರ್ಶನ :  

ಬನ್ನಿಯ ಹಬ್ಬ ಹಬ್ಬ ಹರಿದಿನಗಳಲ್ಲಿಯೇಬನ್ನಿ ಹಬ್ಬ’ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದುದು. ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಿಂದ ಆಚರಿಸಲ್ಪಡುವ ಹಬ್ಬವನ್ನು ನವರಾತ್ರಿ, ಮಹಾನವಮಿ, ದಸರಾ, ವಿಜಯದಶಮಿ, ನಾಡಹಬ್ಬವೆಂದೂ, ಉತ್ತರ ಭಾರತದ ಕೆಲವೆಡೆ ಶ್ರೀ ರಾಮ ನವರಾತ್ರಿಯೆಂದೂ ಕರೆಯುತ್ತಾರೆ. ಕರ್ನಾಟಕದಲ್ಲಂತೂ ಹಬ್ಬ ವಿಶೇಷ ಮಹತ್ವ ಪಡೆದಿದೆ. ಬನ್ನಿ ಹಬ್ಬವನ್ನಾಚರಿಸದ ಕನ್ನಡಿಗನಿಲ್ಲವೆಂದೂ ನಡೆದೀತು. ಅರಮನೆಗುರುಮನೆಮಹಾಮನೆಗುಡಿ ಗುಡಿಸಲುಗಳಲ್ಲೆಲ್ಲಾ ಸಡಗರದಿಂದ ಇದನ್ನು ಆಚರಿಸುತ್ತಾರೆ. ಈಗಲೂ ಬನ್ನಿ ಮುಡಿಯಲು ಊರೂರಿಗೊಂದುಬನ್ನಿಗಿಡದ ಕಟ್ಟೆ’ ಗಳಿರುವುದನ್ನು ಕಾಣಬಹುದಾಗಿದೆ. ವಿಜಯನಗರದ ಅರಸರ ಕಾಲಕ್ಕೆ ಇದು ರಾಷ್ಟ್ರೀಯ ಹಬ್ಬವಾಗಿದ್ದುದಕ್ಕೆ ಹಂಪೆಯಲ್ಲುಳಿದಿರುವಮಹಾನವಮಿ ದಿಬ್ಬ’ವೇ ಸಾಕ್ಷಿ. ಮೈಸೂರಿನ ಅರಸರು ಆಚರಿಸುತ್ತಿದ್ದದಸರಾ’ ಹಬ್ಬ ದೇಶವಿದೇಶಗಳಿಂದ ಜನರನ್ನು ಆಕರ್ಷಿಸುವಷ್ಟು ಅದ್ಭುತ ವೈಭವದಿಂದೊಡಗೂಡಿರುತ್ತಿತ್ತು. ಈಗಲೂ ಕರ್ನಾಟಕದಲ್ಲಿವಿಜಯದಶಮಿ’ ಯನ್ನು ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ.
 
ಪೌರಾಣಿಕ ಹಿನ್ನೆಲೆ :
ಯಾವುದೇ ಒಂದು ಹಬ್ಬದ ಆಚರಣೆಗೆ ಪೌರಾಣಿಕಐತಿಹಾಸಿಕ ಸಾಂಪ್ರದಾಯಿಕ ನಂಬಿಕೆಗಳೂ ಕಾರಣವಾಗಿದ್ದು ಅಲ್ಲೆಲ್ಲಾ ನಮ್ಮ ಸಾಂಸ್ಕೃತಿಕ ಪರಂಪರೆ ಅಡಕವಾಗಿರುತ್ತದೆ. ಬನ್ನಿ ಹಬ್ಬಕ್ಕಾದರೂ ಪೌರಾಣಿಕ ಹಿನ್ನಲೆಯಿದ್ದು ಅದನ್ನು ಜಾನಪದ ಬದುಕಿನ ನಿಟ್ಟಿನಲ್ಲಿ ನೋಡೋಣ.
 
) ಪಾಂಡವರು ಪಗಡ್ಯಾಡಿ ಧರ್ಮದಜೂಜಾಡಿ’ ಸೋತು ವನವಾಸಕ್ಕೆ ಹೋಗಬೇಕಾಗುವುದು. ಹೋಗುವ ಪೂರ್ವದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಗಿಡಕ್ಕೆ ತೂಗು ಹಾಕಿ ಹೋಗುವರು. ಬನ್ನಿಗಿಡದಲ್ಲಿ ಮಹಾಕಾಳಿ ವಾಸವಾಗಿದ್ದು ಆಕೆ ಅವುಗಳ ರಕ್ಷಕಗಳಾಗಿರುವಳು.
ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರೂ ಬಂದರೂ ಕೊಡಬೇಡ |
ಹಡದಮ್ಮ ಅರ್ಜುನ ಬಂದರ ಕೊಡಬೇಕ
 
ಹೀಗೆಬನ್ನಿಮಹಾಕಾಳಿ’ ಯನ್ನು ಪಾಂಡವರು ಪ್ರಾರ್ಥಿಸಿರುವರು. ಅವರು ವನವಾಸದಲ್ಲಿ ಕಷ್ಟವನ್ನು ಅನುಭವಿಸದರೆಂಬುದಕ್ಕೆ ಕೆಳಗಿನ ತ್ರಿಪದಿಯೇ ಸಾಕು.
 
ಕಲ್ಲ ಕಡಬ ಮಾಡಿ ಮುಳ್ಳ ಶ್ಯಾವಿಗಿ ಮಾಡಿ
ಬನ್ನಿಯ ಎಲಿಯ ಎಡಿಮಾಡಿ | ಪಾಂಡವರು
ಉಂಡು ಹೋಗ್ಯಾರೋ ವನವಾಸೊ.
 
ಕೇವಲ ಮೂರು ಶಬ್ದಗಳಲ್ಲಿ ಅವರ ವನವಾಸದ ತಾಪತ್ರಯ ಅರ್ಥಪೂರ್ಣವಾಗಿ ಚಿತ್ರಿತಗೊಂಡಿದೆ. ಹಾಗೆ ಊಟ ಮಾಡಿದ ಪಾಂಡವರು ಊಟದ ನಂತರ ತಲಬನ್ನು ಮಾಡಲು ಮರೆಯಲಿಲ್ಲ.
 
ಬನ್ನಿಯ ಗಿಡದಾಗ ಬೆಳ್ಳಿಯ ಗುಡಗಡಿ
ಬಂಗಾರ ಚಿಲುಮಿ ನವರತನೊ | ಪಾಂಡವರು
ಸೇದಿ ಹೋಗ್ಯಾರೋ ವನವಾಸೊ.
 
ಜಾನಪದ ಕವಿ ತಾನು ಅನುಭವಿಸುವ ನೈಜ ಬದುಕಿನಲ್ಲಿಯೇ ಪಾಂಡವರನು ಕಂಡಿದ್ದು ಸಮರ್ಥನೀಯವಾಗಿದೆ. ಮುಂದೆ ಪಾಂಡವರು ತಮ್ಮ ವನವಾಸ-ಅಜ್ಞಾತವಾಸಗಳನ್ನು ಹೆಚ್ಚಾಗಿ ವೀರಾಟರಾಜ್ಯದಲ್ಲಿಯೇ ಕಳೆದರಂತೆ, ಅಂದಿನ ವಿರಾಟನಗರವೇ ಇಂದಿನ ನಮ್ಮ ಹಾನಗಲ್, ಹಾವೇರಿ ಜಿಲ್ಲೆ " ಅವರು ಇದ್ದು ಹೋದ ಗುಹೆಗಳು ಮಿಂದು ಹೋದ ಕೊಳಗಳು ಕರ್ನಾಟಕದಲ್ಲಿಯೇ ಹೆಚ್ಚಾಗಿವೆ. ಆದುದರಿಂದಲೇ ಪಾಂಡವರು ಕನ್ನಡಿಗರಿಗೆ ಅಪರಿಚಿತರಲ್ಲ. ಅತಿಪರಿಚಿತರಾಗಿದ್ದು ಈಗಲೂ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಮುಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಮರಳಿ ತಾವು ತಮ್ಮ ಶಸ್ತ್ರಾಸ್ತ್ರವಿಟ್ಟಿದ್ದ ಬನ್ನಿಗಿಡಕ್ಕೆ ಬಂದು ಮಹಾಕಾಳಿಯನ್ನು ಪೂಜಿಸಿ ತಮ್ಮ ವಸ್ತುಗಳನ್ನು ಪಡೆದು ದಿಗ್ವಿಜಯ ಸಾಧಿಸಿದ ದಿನವೇವಿಜಯದಶಮಿ’ ದಿನವೆಂದು ಕರೆಯಲಾಗಿದೆ. ಅಂದಿನಿಂದಲೂ ಇಂದಿನ ತನಕ ಪಾಂಡವರ ವನವಾಸದ ಹಿನ್ನಲೆಯಲ್ಲಿವಿಜಯದಶಮಿ’ ಆಚರಣೆಗೊಳ್ಳುತ್ತ ಬಂದಿದೆ.
 
) ಶಮೀವೃಕ್ಷ ಎಂದರೆ ಬನ್ನಿಗಿಡ. ಬನ್ನಿಗಿಡದ ಎಲೆಗಳು ಬಂಗಾರಕ್ಕೆ ಸಮವೆಂದೂ, ವಿಜಯದ ಸಂಕೇತವೆಂದೂ, ಪುರಾಣಗಳು ಸಾರುವವಾದ್ದರಿಂದ ಬನ್ನಿ ಮರವನ್ನು ಪೂಜಿಸಿ ಅದರ ಎಲೆಗಳನ್ನು ಮುಡಿಯುವದು ಪವಿತ್ರಕಾರ್ಯವೆಂದು ಭಾವಿಸಿದುದರಿಂದ ಬನ್ನಿ ಹಬ್ಬದಾಚರಣೆ ರೂಢಿಯಲ್ಲಿ ಬಂದಿದೆ. ಪಾಂಡವರಂತೆ ಶ್ರೀರಾಮನು ರಾವಣನನ್ನು ಸಂಹರಿಸಿ ಬನ್ನಿಮರಕ್ಕೆ ಪೂಜೆಗೈದನಂತೆ, ಜಾನಪದರಂತೂ ಬನ್ನಿಗಿಡದ ಬಗೆಗೆ ವಿಶೇಷ ಗೌರವ ತಾಳಿದ್ದಾರೆ. ಅವರು ಬನ್ನಿಗಿಡವನ್ನು ಕಡಿಯುವದಿಲ್ಲ. ಕಡಿದರೂ ಉರುವಲನ್ನಾಗಿ ಉಪಯೋಗಿಸುವದಿಲ್ಲ. ಗಿಡದಿಂದ ಗೋದಲಿಗಂಬವನ್ನಾಗಿಯೋ, ದೇವರಕಂಬವನ್ನಾಗಿಯೋ ಹೊಲದಲ್ಲಿ ಕೂರಿಗೆಯನ್ನಾಗಿಯೊ, ಕಣದಲ್ಲಿ ಮೇಟಿಯನ್ನಾಗಿಯೋ, ಮಾಡುವರು. ಯಾಕೆಂದರೆ ವಸ್ತುಗಳನ್ನು ಯಾರೂ ಕಾಲುಮೆಟ್ಟಿ ಕಾರ್ಯ ನಡೆಸುವಂತಿಲ್ಲ.
 
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಹಾಸಿ
ಮಂಡಿ ಕಟ್ಟಿಸಿದೆ ಬಿಗಬಿಗದು | ಮುತ್ತೈದಿಯ
ಉಡಿಯ ತುಂಬಿಸಿದೆ ಕೂರಿಗ್ಯೊ
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಮಾಡಿ
ಸಣ್ಣ ಸೆಲ್ಲೆದಲೆ ಉಡಿತುಂಬಿ | ಪಾಂಡವರು
ಹೊನ್ನ ಬಿತ್ತ್ಯಾರೊ ಹೊಳಿಸಾಲ
ಬನ್ನಿ ಮೇಟಿಯ ಹೊಡೆದು ಮುನ್ನೂರು ಬಸವಾನೆಕಟ್ಟಿ
ಹಾಜ್ಯಾಡಿ ಹಂತಿ ಹೊಡದೇವೂ | ಬಸವಣ್ಣ
ಕಣದಾನ ಕಂಕಿ ಉಳದಾವ.
 
ಇದಲ್ಲದೇ ಬನ್ನಿಕಂಟಿ ಹೊಲದಲ್ಲಿ ಬೆಳದಿದ್ದರೆ ಹೊನ್ನು ಹುಟ್ಟಿತೆಂದು ಭಾವಿಸಿ ಅದನ್ನು ಸವರಿ ಸರಿಯಾಗಿ ಬೆಳೆಸುವರು. ಹಿರಿಯರ ಸಮಾಧಿ ಮೇಲೆಯೂ ಗಿಡವನ್ನು ಬೆಳೆಸುವರು. ಇಷ್ಟೊಂದು ಪೂಜ್ಯಭಾವನೆ ಬನ್ನಿಗಿಡದ ಬಗೆಗೆ ಅನಾದಿ ಕಾಲದಿಂದಲೂ ಬೆಳೆದು ಬಂದಿದ್ದು ಅದರ ಪತ್ರಿಯನ್ನು ವಿಜಯದಶಮಿಯ ದಿನ ಪರಸ್ಪರ ಮುಡಿಯುವರಾದ್ದರಿಂದಬನ್ನಿ ಹಬ್ಬ’ ಎಂದು ಹೆಸರು ಬಂದಿರುವದಲ್ಲದೆ ಹಬ್ಬದ ಆಚರಣೆಗೆ ಹಿನ್ನಲೆ ಇದೆಲ್ಲಾಗಿದೆ.
 
) ಉತ್ತು-ಬಿತ್ತುವ ಕೆಲಸ ಮುಗಿದು ಬೆಳೆದ ಬೆಳೆ ಮನೆ ಸೇರುವ ಶುಭ ಸಂದರ್ಭಕ್ಕೆ ಮುನ್ನ ರೈತನಿಗೆ ಸ್ವಲ್ಪಕಾಲ ಬಿಡುವಿದ್ದು ಆವಾಗ ಆಚರಿಸುವಮಾನೋಮಿ’ ಜಾನಪದರ ಬದುಕಿನಲ್ಲಿ ಪ್ರಕೃತಿ ಹಾಗೂ ದೈವ ಕುರಿತಾದ ನಂಬಿಕೆಯ ಸಂಪ್ರದಾಯ ಅನುಸರಿಸಿ ಬಂದದ್ದಾಗಿದೆ.
 
) "ದುಷ್ಟನಾದ ಮಹಿಷಾಸುರ ಹಾಗೂ ಅವನ ಕಡೆಯವರ ಚಂಡ ಮುಂಡ ರಕ್ತಬೀಜಾದಿ ದುರುಳ ರಾಕ್ಷಸರನ್ನೆಲ್ಲಾ ಜಗನ್ಮಾತೆಯು ಅಗತ್ಯಕ್ಕೆ ಅನುಸಾರವಾಗಿ ಮಹಾಕಾಳಿ, ದುರ್ಗಾದೇವಿ, ಚಾಮುಂಡೇಶ್ವರಿ ಎಂಬಿತ್ಯಾದಿ ರೂಪಗಳನ್ನು ತಳೆದು ಸಂಹಾರ ಮಾಡಿದ" ಕಾರಣಕ್ಕಾಗಿ ಜನರು ವಿಜಯ ಹೊಂದಿದಂತೆ ದೇವಿಯ ಆರಾಧನೆಯನ್ನು ವಿಜಯದಶಮಿ ಎಂದು ಮಾಡುವರು. ಸಂಗತಿ ಪುರಾಣೋಕ್ತವಾಗಿದೆ.
 
ಹೀಗೆ ಹಲವಾರು "ಹಿನ್ನಲೆಗಳಲ್ಲಿ" ವಿಜಯದಶಮಿಯನ್ನು ವಿವಿಧ ಕಾರಣಗಳಿಂದಾಗಿ ತಾವು ನಂಬಿದಂತೆ ಆಯಾ ಪ್ರಾದೇಶಿಕತೆಗನುಗುಣವಾಗಿ ಆಚರಿಸುವ ಸಂಪ್ರದಾಯ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
 
ಆಶಯ:
ಇಡೀ ಪ್ರಪಂಚವೇ ಶಕ್ತಿ ಪೂಜೆಯನ್ನು ಮಾಡುತ್ತದೆ. ಗ್ರೀಕ್, ರೋಮ, ಚೀನಾ, ಬೆಬಿಲೊನಿಯಾ, ಈಜಿಪ್ತ ಮುಂತಾದ ಹೊರದೇಶಗಳಲ್ಲಿಯೂ ಅವರದೇ ಆದ ಶಕ್ತಿ ದೇವತೆಯ ಪೂಜೆ ನಡೆಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಂತೂ ಶಕ್ತಿಯ ಆರಾಧನೆ ಆನಾದಿ ಕಾಲದಿಂದಲೂ ನಡೆದು ಬಂದಿದೆ. ವೇದ-ಉಪನಿಷತ್ತುಗಳು ಶಕ್ತಿಯ ಪೂಜೆಯನ್ನು ಸಾರುತ್ತವೆ. ಶಕ್ತಿದೇವತೆಯಲ್ಲಿ ಎರಡು ವಿಧ. ಒಂದು ದುಷ್ಟ ಶಕ್ತಿ: ಇನ್ನೊಂದು ಶಿಷ್ಟ ಶಕ್ತಿ. ದುಷ್ಟಶಕ್ತಿಯ ಕಾಟ ತಾಳಲಾರದೇ ಶಿಷ್ಟ ಶಕ್ತಿಯ ಮೊರೆ ಹೋಗುವದು ತೀರಾ ಅನಿವಾರ. ಅದಕ್ಕಾಗಿಯೇ ವಿಜಯದಶಮಿಯಂದು ಶಕ್ತಿದೇವತೆ ಪೂಜೆಗೊಳ್ಳುತ್ತಿದ್ದಾಳೆ "ವಿಜಯದಶಮಿಯು ದುಷ್ಟ ಶಕ್ತಿಯ ಸಂಹಾರ ಆರ್ಥಾತ್ ಶಿಷ್ಟ ಶಕ್ತಿಯ ವಿಜಯದ ಕುರಿತಾದ ಸಂಕೇತಾತ್ಮಕವಾದ ಹಾಗೂ ಸಂತೋಷಾತ್ಮಕವಾದ ಸಡಗರದ ಆಚರಣೆಗಳಿಂದ ಕೂಡಿರುವ ಹಬ್ಬವಾಗಿರುತ್ತದೆ." ಶಕ್ತಿದೇವತೆಯ ಪೂಜೆಯಿಂದ ಪಾಪ ಪರಿಹಾರ, ಕಾರ್ಯಸಿದ್ಧಿ, ಕಲ್ಯಾಣ ಪ್ರಾಪ್ತಿಯುಂಟಾಗುವ ನಂಬಿಕೆ ಹಾಗೂ ಪರಸ್ಪರವಾದ ಪ್ರೀತಿ-ವಿಶ್ವಾಸ ಸ್ನೇಹಗಳು ವೃದ್ಧಿಯಾಗಲೆಂಬಆಶಯ’ಗಳು ಹಬ್ಬದ ಆಚರಣೆಯಲ್ಲಿ ಅಡಕವಾಗಿವೆ.
 
ಆಚರಣೆಯ ವಿಧಿ-ವಿಧಾನಗಳು:
ಆಶ್ವಯುಜ ಶುಕ್ಲ ಪ್ರತಿಪದೆ (ಪಾಡ್ಯ) ಯಿಂದ ಹಿಡಿದು ದಶಮಿಯ ತನಕ ಆಚರಿಸುವ ಹಬ್ಬದಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದಾಗಿ ಮಹಾನವಮಿ ಅಮವಾಸ್ಯೆಯ ನಂತರ ಪ್ರತಿಪದೆ, ದ್ವಿತೀಯಾ, ತೃತೀಯಾಗಳೆಂದು ಮೂರು ದಿನ ರೋಗಾದಾರಿದ್ರ್ಯ-ದುಃಖ ದುಮ್ಮಾನಗಳ ನಿವಾರಣೆಗಾಗಿ ದುರ್ಗಾಪೂಜೆಯನ್ನು ಕೈಕೊಳ್ಳುವರು. ಎರಡನೆಯದಾಗಿ ಚತುರ್ಥಿ, ಪಂಚಮಿ, ಷಷ್ಠಿ ಮೂರು ದಿನ ಸುಖ-ಸಂಪತ್ತು ಅಭಿವೃದ್ಧಿಗೊಳ್ಳಲು ಮಹಾಲಕ್ಷ್ಮೀಯನ್ನು ಪೂಜಿಸುವರು. ಮೂರನೆಯದಾಗಿ ಸಪ್ತಮಿ, ಅಷ್ಟಮಿ, ನವಮಿ, ಮೂರು ದಿನ ವಿದ್ಯೆ-ಬುದ್ಧಿ ಜ್ಞಾನಗಳು ವೃದ್ಧಿಯಾಗಲೆಂದು ಸರಸ್ವತಿಯನ್ನು ಪೂಜಿಸುವರು. ಹೀಗೆ ಮೂರು ಹಂತಗಳಲ್ಲಿ ಶಕ್ತಿ ಪೂಜೆ ಒಂಬತ್ತು ದಿನಗಳವರೆಗೆ ನಡೆಯುವದರಿಂದ ಹಬ್ಬಕ್ಕೆ ನವರಾತ್ರಿ-ಮಹಾನವಮಿ ಎಂದೂ ಕರೆಯುವರು. ನಾಲ್ಕನೆಯದಾಗಿ ಹಬ್ಬದ ಪರಿಸಮಾಪ್ತಿಯೆಂಬಂತೆ ಬರುವ ಹತ್ತನೆಯ ದಿನವೇ ದಶಮಿ. ಅದೇವಿಜಯದಶಮಿ’ ದಿನ ದಶಹರ್ ಎಂದರೆ ಹತ್ತು ರಾತ್ರಿಗಳು ಹಬ್ಬದಾಚರಣೆಯಾಗಿದ್ದುದಸರಾ’ ಎಂಬ ಹೆಸರು ಇದರಿಂದಲೇ ಬಂದಿದೆ. ಅಂದು ದೇವಿಯ ಮೆರವಣೆಗೆ, ಉತ್ಸವ. ಬನ್ನಿಪೂಜೆ ಮುಂತಾದವುಗಳೂ ಜರುಗುವುದರೊಂದಿಗೆ ಹಬ್ಬ ಮುಕ್ತಾಯಗೊಳ್ಳುವುದು. ಕೆಲವು ಕಡೆ ಹತ್ತು ದಿನಗಳಂದು ಮನೆ-ಮಠ-ಮಂದಿರಗಳಲ್ಲಿ "ದೇವಿಯ ಮಹಾತ್ಮೆ" ಕುರಿತಾದ ಪುರಾಣ ಪಠಣ-ಪ್ರವಚನಗಳೂ, ಭಜನೆಗಳೂ ನಡೆಯುತ್ತವೆ.
 
ಹಣ ಇದ್ದುಳ್ಳವರು ಇದನ್ನು ದುಂದಾಗಿಯೂ, ಬಡವರು ಹಿಡಿತದಲ್ಲಿಯೂ, ಕೆಲವೆಡೆ ಸಾಮೂಹಿಕವಾಗಿಯೂ ನವರಾತ್ರಿ ಪೂಜೆಯನ್ನು ಏರ್ಪಡಿಸುವರು. ಪ್ರತಿ ಪದೆಯಿಂದ ದಶಮಿಯ ವರೆಗೂ ಕ್ರಮವಾಗಿ ಆಚರಿಸಲು ಸಾಧ್ಯವಿಲ್ಲದವರು ನವಮಿಯೆಂದು ದೇವಿಪೂಜೆಯನ್ನು, ದಶಮಿಯೆಂದು ಬನ್ನಿಪೂಜೆಯನ್ನು ಮಾಡಿ ಮುಗಿಸುವರು. ಇದನ್ನೆ ನಮ್ಮ ಹಳ್ಳಿಯ ಬದುಕಿನ ಹಿನ್ನೆಲೆಯಲ್ಲಿ ನೋಡೋಣ. " ವಿಜಯದಶಮಿ’ ಯನ್ನು ಹಳ್ಳಿಗರು ಹೆಚ್ಚಾಗಿಮನೋವಿ’ಬನ್ನಿ ಹಬ್ಬ’ ವೆಂದೇ ಕರೆಯುವರು. ಹಬ್ಬ ಬರುತ್ತಿದ್ದಂತೆ ಮಹಾನವಮಿ ಅಮವಾಸ್ಯೆಯ ಮುನ್ನವೇ ಹಬ್ಬದ ತಯಾರಿ ನಡೆದಿರುತ್ತದೆ. ಮನೆಯ ಹೆಣ್ಣುಮಕ್ಕಳನ್ನು ಗಂಡನ ಮನೆಯಿಂದ ಕರೆಸಿಕೊಳ್ಳುತ್ತಾರೆ.
 
ಮಾನೋವಿ ಬಂತಂತ ಹೇಳಿ ನಾ ಕಳಿವೇನಿ
ಕ್ಯಾದಿಗಿ ದಂಡಿ ಹೆಣದೀಣಿ | ಕಂದವ್ವ
ದಸರೇಕ ಹೊಂಟಾರ ಧನಿಯಾರು.
 
ತಂದೆ-ಅಣ್ಣ-ತಮ್ಮ ಯಾರಾಗಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆ ತರುವರು. ಮಗಳು ಮನೆ ತುಂಬಿದ ಮೇಲೆ ಮನೆಯ ಅಲಂಕಾರಕ್ಕೆ ತೊಡಗುವರು. ಇಡೀ ಮನೆಯನ್ನೆಲ್ಲಾ ಸುಣ್ಣ-ಕೆಮ್ಮಣ್ಣುಗಳಿಂದ ಸಾರಿಸಿ. ಎಣ್ಣೆ-ಬಣ್ಣಗಳನ್ನು ಬಳಿಯುವರು. ತಟ್ಟೆ-ಬುಟ್ಟಿಗಳನ್ನು ತೊಳೆದಿಡುವರು. ಹಾಸಿಗೆ-ಹೊದಿಕೆ-ಮೈಲಿಗೆ ಬಟ್ಟಿಗಳೆಲ್ಲಾ ಮಡಿಗೊಳಿಸುವರು.
 
ಮನೆಯ ದೇವರು ಮೈಲಾರಲಿಂಗವಾಗಿದ್ದ ಮನೆಯಲ್ಲಿ ಹೈನವಿದ್ದರೆ ಕೆಲವರು ಪಂಚಮಿಯಿಂದ ನವಮಿಯವರೆಗೆ, ಇನ್ನು ಕೆಲವರು ಸಪ್ತಮಿಯಿಂದ ನವಮಿಯವರೆಗೆ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ದೇವರ ಮುಂದೆ ಮೀಸಲಿಡುವರು. ನವಮಿಯ ದಿನ ಮೀಸಲಿಟ್ಟ ಮೊಸರನ್ನೆಲ್ಲಾ ಕಡಿದು ಬೆಣ್ಣೆಮಾಡಿ, ಅದನ್ನು ಕಾಯಿಸಿ, ತುಪ್ಪ ಬಂದ ಮೇಲೆ ಮೀಸಲು ತುಪ್ಪದಲ್ಲಿಯೇ ಮೈಲಾರ ದೇವರ ದೀವಟಿಗೆ ಉರಿಸುವರು. ದೀವಟಿಗೆ ಹಿಡಿಯುವ ವ್ಯಕ್ತಿ ವಿವಾಹಿತನಾಗಿರಬೇಕು. ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೆ ಮಡಿವಂತನಾಗಿ, ಮಡಿ ಅರಿವೆಯನ್ನು ದೀವಟಿಗೆಗೆ ಸುತ್ತಿ ಮೀಸಲು ತುಪ್ಪವನ್ನು ಉಣಿಸಿ ದೀಪ ಹೊತ್ತಿಸುವರು. ಮನೆಯ ಜಗುಲಿಯಿಂದ ಗ್ರಾಮದೇವರವರೆಗೂ ದೀವಟಿಗೆಯನ್ನು ಉರಿಸುತ್ತ ಹೋಗಿ ಬರುವರು. ದೀವಟಿಗೆ ಹಿಡಿದ ವ್ಯಕ್ತಿ"ಏಳಕೋಟಿ ಏಳಕೋಟಿ.. ಏಳಕೋಟಿಗೊ" ಎಂಬ ಮೈಲಾರ ದೇವರ ಗರ್ಜನೆ ಹೇಳುತ್ತಿರುವನು. ಮನೆ-ಮಂದಿ ನುಡಿಯನ್ನು ಮಾರ‍್ನುಡಿಯುವರು. ದೀವಟಿಗೆಯ ಹಿಂದೆ ಸುಮಂಗಲೆಯ ಕಳಸದಾರತಿ ಇದ್ದೇ ಇರುವದು. ಆಕೆಯೇ ದೀವಟಿಗೆಗೆ ದಾರಿಯಲ್ಲಿ ತುಪ್ಪ ಹಾಕಿ ಉರಿಸುವದಲ್ಲದೇ ದೀವಟಿಗೆ ಹಿಡಿದವರನ್ನು ದೇವರ ಸಮಾನವೆಂದು ಪೂಜಿಸುವಳು. ಇದಕ್ಕೆ " ದೇವರನ್ನು ಹೊರಡಿಸುವದು" ಎಂದೂ ಕರೆಯುತ್ತಾರೆ.
 
ಅದೇ ದಿನ ಮಹಾಲಕ್ಷ್ಮೀಯ ಪೂಜೆಯನ್ನು ಕೆಲವರು ಕೈಕೊಳ್ಳುವರು. ಪೂರ್ಣಕುಂಭ ಕಳಸವನ್ನು ಮಾಡಿ. ಮನೆಯಲ್ಲಿ ತಾವೇ ನಿರ್ಮಿಸಿರುವದೇವರಕಂಬ’ ಅಥವಾಲಕ್ಷ್ಮೀಕಂಬ’ ಕ್ಕೆ ಅದನ್ನಿಟ್ಟು ಹಿಂದಿನ ಹಿರಿಯರ ಹೆಸರಿನಲ್ಲಿ ಹೊಸ ಸೀರೆ-ಕಣವನ್ನೊ ಧೋತರ-ಶಲೈಯನ್ನೊ ತಂದು, ಮಡಿಚಿ ಕುಂಭದ ಮುಂದಿಟ್ಟು, ಆಭರಣಗಳಿಂದ ಅಲಂಕರಿಸಿ ಪೂಜೆಗೈಯ್ಯುವರು. ಐದು ಜನ ಮುತ್ತೈದೆಯರು ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೇ ಮಡಿಯಿಂದ ಬಂದು ಕೈಗೆ ಕಂಕಣಕಟ್ಟಿಕೊಂಡು, ಉಡಿತುಂಬಿ, ದೇವರಿಗೆ ಆರತಿ ಮಾಡಿದ ಮೇಲೆ ಪ್ರಸಾದವನ್ನು ಸ್ವೀಕರಿಸುವರು. ಇದಕ್ಕೆಹಿರೇರ ಹಬ್ಬ’ ವೆಂದೂ ಕರೆಯುವರು.
 
ಅದೇ ದಿನ ಆಯುಧ ಪೂಜೆ ನಡೆಯುವದು. ಕೊಡ್ಲಿ- ಕುಡಗೋಲು, ಬರ್ಚಿ-ಬಂದೂಕ, ಖಡ್ಗ-ಕತ್ತಿಗಳನ್ನೆಲ್ಲಾ ಸ್ವಚ್ಛ ಮಾಡಿ ಜಗುಲಿಯ ಮೇಲಿಟ್ಟು ಪೂಜಿಸುವರು. ಹಿಟ್ಟಿನಗಿರಣಿ, ಟ್ರ್ಯಾಕ್ಟರ್ ಟ್ರಕ್, ಇಂಜಿನ್, ಪಂಪಶೆಟ್, ಸ್ಟ್ರೇಯರುಗಳೇ ಆಗಿರಲಿ. ವೃತ್ತಿ ಸಾಧನಗಳಾದ ಹೊಲಿಯುವ ರಾಟಿ, ಬಡಿಗರ ಸಲಕರಣೆಗಳು. ಹಜಾಮರ ಸಾಧನಗಳು, ಒಡ್ಡರ ಆಯುಧಗಳು, ಹರಿಜನರ ಹರಿತಾಯುಧಗಳು, ವ್ಯಾಪಾರಸ್ಥರ ತೂಕಮಾಪಕಗಳು ವೃತ್ತಿಗಾಗಿ ಅದೇನೆ ವಸ್ತುವಿದ್ದರೂ, ಜಾತಿ ಮತಗಳ ಭಿನ್ನತೆಯಿಲ್ಲದೇ ಎಲ್ಲರೂ ತಂತಮ್ಮ ಆಯುಧಗಳನ್ನು ಪೂಜೆಗೈಯ್ಯುವರಾದ್ದರಿಂದ ಇದಕ್ಕೆಆಯುಧ ಪೂಜೆ’ ಎಂಬ ಹೆಸರೂ ಬಂದಿದೆ. ಇದನ್ನುಖಂಡೆಯ’ ಪೂಜೆಯೆಂದೂ ಕರೆಯುವರು. ಮಾಂಸಾಹಾರಿಗಳು ದಿನ ಖಂಡೆ(ಮಾಂಸ) ಪೂಜೆ ಮಾಡುವದರಿಂಧಖಂಡೆ ಪೂಜೆ’ ಎಂಬ ಹೆಸರು ಬಂದಿರಬಹುದಾಗಿದೆ. ಖಂಡೆ ಪೂಜೆ’ ಯನ್ನು ರಾಜ ಮನೆತನದವರು ಬಲು ವೈಭವದಿಂದ ಆಚರಿಸುತ್ತಿದ್ದು ಅದರಲ್ಲೂ ಮೈಸೂರಿನ ಮಹಾರಾಜರು ಆಚರಿಸುವದಸರಾ’ ಕುರಿತಾದ ಹಬ್ಬದ ವಿವರಣೆಗೆ ಪ್ರತ್ಯೇಕ ಲೇಖನವೇ ಬೇಕಾಗುತ್ತದೆ.
 
ನವಮಿಯ ನಂತರ ಬರುವದೇ ದಶಮಿ. ಬರೀ ದಶಮಿಯಲ್ಲ. ವಿಜಯದಶಮಿ, ದಿನ ಮಧ್ಯಾಹ್ನ ಹಿಂದಿನ ಪೂಜೆ ಪೂಜೆಗೊಂಡ ದೇವರುಗಳು-ಆಯುಧಗಳು ಮತ್ತೆ ಪೂಜೆಗೊಳ್ಳುವವು. ಕಾಲಕ್ಕೆ ಮುಂಗಾರು ಬೆಳೆ ಹೊಡೆ ತೆರೆದು ನಿಂತಿರುವದು. ಅವುಗಳಲ್ಲಿ ಐದು ದಂಟುಗಳನ್ನು ಕಿತ್ತು ತಂದು ಜಗುಲಿಗೇರಿಸಿ ಪೂಜಿಸುವರು. ಇದು ಸಾಂಕೇತಿಕವಾಗಿ ರೈತ ತಾನು ಬೆಳೆದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸುವುದಾಗಿದೆ. ಮನೆದೇವರ ಪೂಜೆಯಾದ ಮೇಲೆ ಊರದೇವರಿಗೆಲ್ಲಾ ತಾವು ಮಾಡಿದ ಅಡಿಗೆಯ ಎಡೆಯನ್ನು ಸಲ್ಲಿಸುವರು. ಹೊತ್ತು ಮುಳುಗಿದ ನಂತರ ಗ್ರಾಮ, ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂಡ್ರಿಸುವರು. ಪಲ್ಲಕ್ಕಿಯ ಹಿಂದೆ ಸುಮಂಗಲೆಯರು ಆರತಿ ಹಿಡಿದು ಹಾಡಲು ಸಿದ್ಧರಾಗಿರುವರು. ಊರು ಗೌಡರ ಹಿರಿತನದಲ್ಲಿ ವಾದ್ಯ-ವೈಭವಗಳೊಂದಿಗೆ ಬನ್ನಿ ಮುಡಿಯಲು ಜನ ಪಲ್ಲಕ್ಕಿಯನ್ನು ಹೊತ್ತು ಬನ್ನಿಮರದ ಕಟ್ಟೆಗೆ ಬರುವರು. ಇದರ ಜೊತೆಗೆ ತಮ್ಮ ಮನೆಯಲ್ಲಿ ಪೂಜಿಸಿದ್ದ ದಂಟುಗಳನ್ನು ಜನ ತಂದು ಬನ್ನಿಗಿಡದ ಸುತ್ತಲೂ ಏರಿಸಿಡುವರು. ವಾಲೀಕಾರರು ಆರಿಗಿಡದ ತಪ್ಪಲನ್ನು ತಂದು ಅಲ್ಲಿಯೇ ಇಟ್ಟಿರುವರು. ಗ್ರಾಮದೇವರ ಪೂಜಾರಿ ಬನ್ನಿ ಮಹಾಕಾಳಿಯನ್ನಲ್ಲದೇ ಉತ್ಸವ ಮೂರ್ತಿಯನ್ನು ಪೂಜಿಸುವನು. ಸುಮಂಗಲೆಯರು ಆರತಿ ಬೆಳಗುವರು. ಗೌಡರು ತಮ್ಮೂರಿನ ಸೌಖ್ಯ ಸಂಪತ್ತನ್ನು ಸಾರಿ ಅದು ಮುಂದಿನ ದಿನಗಳಲ್ಲಿಯೂ ನೆಲೆಸಿರುವಂತೆ ಅನುಗ್ರಹಿಸಲು ದೇವರನ್ನು ಪ್ರಾರ್ಥಿಸಿ, ದೈವದ ಪರವಾಗಿ ಮೊದಲು ದೇವರಿಗೆ ಬನ್ನಿ ಮುಡಿಸುವರು. ದೇವರು ಮರಳಿ ಅದೇ ವೈಭವದಿಂದ ಗುಡಿ ಸೇರುವದು. ನಂತರವೇ ಬನ್ನಿಕೊಡುವದು ವಿಧಿವತ್ತಾಗಿ ನಡೆಯುವದು.
 
ಇನ್ನು ಕೆಲಕಡೆ ಹೀಗೆ ದೇವರನ್ನು ಗುಡಿಯಿಂದ ಹೊರತಂದು ತಮ್ಮೂರಿನ ಸೀಮೆಯನ್ನು ನೆರೆಯೂರಿನ ಸೀಮೆಯನ್ನು ಪ್ರವೇಶಿಸಿ ಮರುಳುವ ಪದ್ದತಿಯೂ ಇದ್ದು ಇದಕ್ಕೆ "ಸೀಮೋಲ್ಲಂಘನ" ಎಂದು ಕರೆಯುವರು. ಹಿಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಕೌರವ ರಾಜ್ಯದ ಸೀಮೆಯನ್ನು ಉಲ್ಲಂಘಿಸಿ ಅವರೊಂದಿಗೆ ಕಾದಾಡಿ, ವಿಜಯಿಗಳಾಗಿ ರಾಜ್ಯಗಳಿಸಿದುದರ ಸಂಕೇತವಾಗಿ ರೀತಿಯ ಆಚರಣೆ ರೂಢಿಯಲ್ಲಿ ಬಂದಿದೆ. ಒಂದೂರಿನವರು ವಿಜಯದಶಮಿಯ ದಿನ ಮತ್ತೊಂದೂರಿನ ಸೀಮೆ ತಲುಪಿ ಊರವರಿಂದ ಪಾರಾಗಿ ಬರುವದು ಸಾಹಸದ ಮಾತಾಗಿದ್ದು ಒಂದು ರೀತಿಯಲ್ಲಿ ಇದು ರಾಜಕೀಯ ವಿಜಯವೂ ಆಗಿದೆ. ದಿನ ಸೀಮೆಯ ಉಲ್ಲಂಘನ ಬಲು ಕುತೂಹಲಕರವಾಗಿ ಜರಗುತ್ತದೆ.
 
ಬನ್ನಿಗಿಡದ ಸುತ್ತಲೂ ಇಟ್ಟಿರುವ ಆರಿತಪ್ಪಲು ಹಾಗೂ ದಂಟುಗಳಿಗಾಗಿ ಜನರ ನೂಕು ನುಗ್ಗಾಟ ಪ್ರಾರಂಭವಾಗುವದು. ಆರಿತಪ್ಪಲನ್ನು ಬನ್ನಿಯೊಂದಿಗೆ ಸೇರಿಸಿ ಮುಡಿಯುವರು. ಬನ್ನಿಗಿಡದಡಿ ಪೂಜೆಗೊಂಡ ದಂಟನ್ನು ತಂದು ಬರಡು ಆಕಳು-ಎಮ್ಮೆಗಳ ಮೇಲೆ ಬಡಿಯುವದಲ್ಲದೇ ಅದನ್ನು ಅವುಗಳಿಗೆ ತಿನ್ನಿಸುವರು. ಹೀಗೆ ಮಾಡುವದರಿಂದ ಅವು ಗಬ್ಬಾಗುವ (ಗರ್ಭಧರಿಸುವ) ವೆಂಬ ನಂಬಿಕೆಯಿದೆ.
 
ಬನ್ನಿ ಹಾಗೂ ಆರಿತಪ್ಪಲನ್ನು ಸಂಪಾದಿಸಿ ಅವು ಬಂಗಾರಕ್ಕೆ ಸಮವೆಂದು ಭಾವಿಸಿ ಅವುಗಳ ಒಂದೆಲೆ ಸಹ ಕೆಳಗೆ ಬೀಳದಂತೆ ಕಾಳಜಿವಹಿಸಿ, ಮೊದಲು ಊರಿನ ಹಿರಿ-ಕಿರಿ-ಗಂಡು-ಹೆಣ್ಣು ದೇವರುಗಳಿಗೆಲ್ಲಾ ಅರ್ಪಿಸುವರು. ನಂತರ ಮಠದ ಸ್ವಾಮಿಗಳಿಗೆ, ಜಂಗಮರ ಮನೆಗಳಿಗೆ ತಿರುಗಿ. ಬನ್ನಿಯೊಂದಿಗೆ ಕಾಸಿನ ಕಾಣಿಕೆಯನ್ನು ಸಲ್ಲಿಸುವರು. ನಂತರ ಮನೆ ಮಂದಿಗೆ ಬನ್ನಿ ಸಲ್ಲಿಸುವರು. ತವರಿಗೆ ಬಂದ ತಂಗಿಯೊಬ್ಬಳು ತನ್ನಣ್ಣ ಬನ್ನಿ ಕೊಡಲು ಬಂದಾಗ ಮಧುರ ಬಾಂಧವ್ಯ ಬೆಳೆಸುವ ಮಹಾದಾಸೆಯುಳ್ಳವಳಾಗಿ ಹಾಡುವ ನುಡಿ ಬಲು ಸೊಗಸಾಗಿದೆ.
 
ಬನ್ನಿ ಮುಡಿಯುದು ಬಂತು ಬಂಗಾರ ಕೊಡುವುದು ಬಂತು
ಬಂದ ನನಕಾಲ ಹಿಡದಾನ | ನನ್ನಣ್ಣ
ಬಂಗಾರ ಮಾಲ ನನಗಿರಲಿ
 
ಆಮೇಲೆ ಕಂಡಕಂಡವರು ಕಂಡಕಂಡವರಿಗೆಲ್ಲ ಜಾತಿ-ಮತ-ವಯಸ್ಸು-ಲಿಂಗ ಭೇದವಿಲ್ಲದೆಯೇ ಬನ್ನಿಕೊಡುವ ಕಾರ್ಯ ಎಡೆಬಿಡದೆ ಮಧ್ಯರಾತ್ರಿವರೆಗೂ ಸಾಗುವದುನಾವು-ನೀವು ಬಂಗಾರದಾಂಗಿರೂನ್ರಿ’ ಎಂಬ ಸಮವಯಸ್ಕರ ಸ್ನೇಹಭಾವ, ‘ದೌಡ ಹತ್ತ ಮಕ್ಳ ಹಡಿ’ ಎಂಬ ಹಿರಿಯರ ಆಶೀರ್ವಾದ, ‘ ಇರ್ಲಿ ಇರ್ಲಿ’ ಎಂದು ಬಾಗಿದವರಿಗೆ ಹೇಳುವ ಗಣ್ಯರ ಸೌಜನ್ಯತೆ-ಒಟ್ಟಿನಲ್ಲಿ ದಿನ ಹಳ್ಳಿಗೆ ಹಳ್ಳಿಯೇ ಒಳ್ಳೆಯದಲ್ಲಿ ಹಾಡು-ಆಟಗಳೂ ನಡೆಯುವವು. ಬನ್ನಿ ಹಬ್ಬದ ಮಹತ್ವ ಕುರಿತಾದ ಯುವತಿಯರ ಕೋಲಾಟದ ಪದವೊಂದು ಇಂತಿದೆ.
 
ಬನ್ನಿ ಮುಡಿಯುನ ಬಾರ ಕೋಲು ಕೋಲ |
ಚಿನ್ನ ತರವುನ ಬಾರ ಕೋಲು ಕೋಲ || ||
 
ಊರ ಸೀಮೆಯ ದಾಟಿಮ ಕಾಡ ಗಡಿಯನು ಸೇರಿ
ಕಾಡ ಸಂಪತ್ತ ತರಬನ್ನಿ || ಕೋಲು ಕೋಲ || ||
 
ಬೆಳೆದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ನಿನ್ನ
ನಾಡ ಸಂಪತ್ತ ಬೆರೆ ಬನ್ನಿ || ಕೋಲು ಕೋಲ || ||
 
ಅರಸನ ಅಂಗಳಕ, ಸರಸ ರಂಗ ಹೊಯ್ದು
ಹೊರಸಿ ತಂದಾರ ಸಿರಿ ಬನ್ನಿ || ಕೋಲು ಕೋಲ || ||
 
ದೇವ ದೇವರ ಬನ್ನಿ, ದೇವ ದೈವದ ಬನ್ನಿ
ನಾವು ಮುಡಿವೂದು ನಮ ಬನ್ನಿ || ಕೋಲು ಕೋಲ || ||
 
ಹಡೆದ ತಾಯಿಗೆ ಬನ್ನಿ, ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮಬನ್ನಿ || ಕೋಲು ಕೋಲ || ||
 
ಚಿನ್ನದ ಕೈಗಡಗ, ಚನ್ನೇರು ಇಟಗೊಂಡು
ಚಿನ್ನಧಾಭಾರಣ ನಡ ಬಾಗಿ || ಕೋಲು ಕೋಲ || ||
 
ಗೆಜ್ಜಿ ಹೆಜ್ಜೀ ಹಾಕಿ, ಗುಜ್ಜೇರು ಕುಣಿದಾರ
ವಜ್ಜರ ವಡ್ಯಾಣ ಘಿಲ ಘಿಲ || ಕೋಲ ಕೋಲ || ||
 
ನಾವು ಕುಣಿಯುಣ ಬನ್ನಿ, ಹ್ಯಾಂವ ಮರೆಯುಣ ಬನ್ನಿ
ಜೀವ ಒಂದಾಗಿ ಇರಬನ್ನಿ || ಕೋಲು ಕೋಲ || ||
 
ಇಂದ ಮುಡಿಯುವ ಬನ್ನಿ, ಮುಂದೆ ಮಗ ಹೊನ್ನಾಗಿ
ಕುಂದಣದಾರೂತಿ ಬೆಳಗೂದಕ || ಕೋಲು ಕೋಲ || ||
 
) ಬನ್ನಿ ಮುಡಿಯುವ ದಿನ ಪವಿತ್ರವಾದ ದಿನವಾಗಿದ್ದು ಅಂದು ಯಾವುದೇ ಕಾರ್ಯರಂಭಕ್ಕೂ ಶುಭ ದಿನವೆನಿಸಿದೆ. ಮನೆಕಟ್ಟಲು ತಳಪಾಯ, ಹೊಸಮನೆ ವೇಶ, ಹೊಲ-ಮನೆ ಖರೀದಿ, ವ್ಯಾಪಾರ- ವ್ಯವಹಾರ ಪ್ರಾರಂಭಕ್ಕೆ ದಿನವನ್ನೆ ವಿಶೇಷವಾಗಿ ಆಯ್ಕೆ ಮಾಡುವರು.
 
ಮೇಲಿನಂತೆ ಹಳ್ಳಿಗರು ಬನ್ನಿ ಹಬ್ಬವನ್ನು ಆಚರಿಸುವರಾದರು ಇನ್ನೂ ಕೆಲಕಡೆಗಳಲ್ಲಿ ಆಯಾ ಊರುಗಳ ಪರಿಸರ ಹಾಗೂ ಸಾಂಪ್ರದಾಯಿಕ ಪದ್ಧತಿಗಳನ್ನು ಸಾರವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಆಚರಿಸಲಾಗುತ್ತದೆ.