ಉಪಾಕರ್ಮ ಮತ್ತು ರಕ್ಷಾಬಂಧನ ವಿಶೇಷ

ಉಪಾಕರ್ಮ
ಗುರುಗಳಿಂದ ದೀಕ್ಷೆ ಪಡೆದನಂತರ ಸಂತ ಶಿಶುನಾಳ ಷರೀಫರು ಹಾಡುತ್ತಾರೆ. ' ಹಾಕಿದ ಜನಿವಾರವ ... ಸದ್ಗುರುನಾಥ ಕಳೆದನು ಭವ ಭಾರವ...." ಭವ ರೋಗ ಎಂದರೆ ಹುಟ್ಟು - ಸಾವೆಂಬ ಬೇನೆ. ಇದರಿಂದ ತಪ್ಪಿಸಿಕೊಳ್ಳುವವರು ಯಾರೂ ಇಲ್ಲ. ಆದರೂ ಗುರು ದೀಕ್ಷೆಯಿಂದ ಮುಕ್ತಿ ಮಾರ್ಗವನ್ನು ಕಂಡುಕೊಂಡು ಭಗವತ್ಪಾದ ಸೇರಿ ಮುಂದಿನ ಜನ್ಮದಿಂದ ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಎಂದು ಹೇಳುತ್ತಾರೆ. ಉಪನಯನಾ ನಂತರ ಶ್ರದ್ಧಾ ಭಕ್ತಿಯಿಂದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳನ್ನು ಆಚರಿಸಿ ಪರಲೋಕದಲ್ಲಿ ಸ್ಥಾನ ಪಡೆಯಬಹುದಂತೆ. 

ಇದಕ್ಕಾಗೇ ಉಪನಯನವನ್ನು ಸೂಕ್ತ ಕಾಲದಲ್ಲಿ ಮಾಡುತ್ತಾರೆ. ಒಂದು ಮಾತಿದೆ. ಮದುವೆಗೆ ಮುಹೂರ್ತ ಸಿಕ್ಕರೂ ಸಿಗಬಹುದು. ಆದರೆ ಉಪನಯನಕ್ಕೆ ಮುಹೂರ್ತ ದೊರಕುವುದೇ ಕಷ್ಟ ಎಂದು. ತಾಯಿಯ ಗರ್ಭದಿಂದ 8 ವರ್ಷ ಲೆಕ್ಕ ಹಾಕಿದ ಸಂದರ್ಭದಲ್ಲಿ ಯಾವುದೇ ಬ್ರಾಹ್ಮಣ ಬಾಲಕನಿಗೂ ಯಾವುದೇ ಗುರುಬಲ ನೋಡದೆ ಉಪನಯನ ಮಾಡಬಹುದಂತೆ. ಆದರೆ 8 ತುಂಬಿದ ನಂತರ ಉಪನಯನ ಮಾಡುವುದಾದರೆ, ವಟುವಿಗೆ ಗುರುಬಲ ಇರುವುದು ಅತಿ ಮುಖ್ಯ ಎನ್ನುತ್ತಾರೆ ಶಾಸ್ತ್ರವೇತ್ತರು. 

ಉಪಾಕರ್ಮ ಆಚರಣೆ 
ಉಪನಯನಾ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾದದ್ದು. ಈ ಉಪಾಕರ್ಮವನ್ನು ಋಗ್ವೇದಿಗಳು ಹಾಗೂ ಯಜುರ್ವೇದಿಗಳು ಸಾಮಾನ್ಯವಾಗಿ ಬೇರೆ ಬೇರೆ ದಿನಗಳಂದು ಆಚರಿಸುತ್ತಾರೆ. 

ಉಪನಯನ ಆದ ಮೇಲೆ (ಕೆಲವರಾದರೂ) ನಿತ್ಯ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾರೆ. ಸಮಯ ಮೀರಿದ್ದ ಸಂದರ್ಭದಲ್ಲಿ ಕಾಲಾತಿದೋಷ ಪರಿಹಾರ್ಥವಾಗಿ ಪುನರರ್ಘ್ಯ ಕೊಟ್ಟು ಪರಿಹಾರವನ್ನೂ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೆ ವರ್ಷಕ್ಕೊಮ್ಮೆ ಏಕೆ ಉಪಾಕರ್ಮ ಮಾಡಿಕೊಳ್ಳಬೇಕು. ಇದೇ ಪ್ರಶ್ನೆ ನಮಗೂ ಎದುರಾಗಿತ್ತು. ಬಲ್ಲವರನ್ನು ಕೇಳಿದಾಗ , ಅವರಿಂದ ನಾವು ತಿಳಿದದ್ದನ್ನು ನಿಮಗೂ ತಿಳಿಸುತ್ತಿದ್ದೇವೆ. 

ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದಂತೆ. 

ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು ಕಾಣಿಕೆ ನೀಡಿ, ಕನಿಷ್ಠ 5 ಜನ ವಟುಗಳಿಗೆ ಜನಿವಾರ ಅರ್ಥಾತ್‌ ಯಜ್ಞೋಪವೀತ ಹಾಗೂ ವಸ್ತ್ರವನ್ನು ದಾನವಾಗಿ ನೀಡಿ, ನವ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ. 

ಉತ್ಸರ್ಜನ ಎಂದರೆ, ದೇಶ ಶುದ್ಧಿ ಎಂದರ್ಥವಂತೆ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದಂತೆ. ಋಗ್ವೇದಿಗಳು ಸಾಮಾನ್ಯವಾಗಿ ಉಪಾಕರ್ಮದ ದಿನ ಉತ್ಸರ್ಜನ ಹೋಮವನ್ನು ಮಾತ್ರ ಮಾಡುತ್ತಾರೆ. 

ಆದರೆ, ಯಜುರ್ವೇದಿಗಳು ಉತ್ಸರ್ಜನ ಹಾಗೂ ವಿರಿಜಾ ಎಂಬ ಎರಡು ಹೋಮಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನ್ಮತಃ ಬ್ರಾಹ್ಮಣರಾದರೂ ಮಂತ್ರ, ವೇದಾದ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅಂದು ವೇದಶಾಸ್ತ್ರ ಪಾರಂಗತರ ಮನೆಯಲ್ಲಿ ಹತ್ತಾರು ಜನ ಬ್ರಾಹ್ಮಣರು ಸೇರಿ, ಸಾಮೂಹಿಕ ಯಾಗ ಕಾರ್ಯದಲ್ಲಿ ಭಾಗವಹಿಸಿ ನವ ಯಜ್ಞೋಪವೀತ ಧಾರಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದೇವಾಲಯಗಳಿಗೆ ಹೋಗಿ ಅರ್ಚಕರಿಗೇ ದಕ್ಷಿಣೆ ಹಾಗೂ ಯಜ್ಞೋಪವೀತವನ್ನು ದಾನವಾಗಿ ನೀಡಿ, ಅವರ ಸಮ್ಮುಖದಲ್ಲಿ ಶಾಸ್ತ್ರಾನುಸಾರ ಉಪಾಕರ್ಮವನ್ನು ಮಾಡಿಕೊಳ್ಳುತ್ತಾರೆ. 

ರಕ್ಷಾಬಂಧನ 
'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! 


ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೆ ಆದ ವಿಶೇಷತೆಯಿದೆ. ಅಲ್ಲದೆ ಸಂಭಂದಗಳಿಗೆ ಮಹತ್ವಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ. ಅಂದು ಯುದ್ಧದಲ್ಲಿ ಇಂದ್ರನು ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಇಂದ್ರನು ಬೃಹಸ್ಪತಿಯ ಮೊರೆ ಹೋಗುತ್ತಾನಂತೆ ಬೃಹಸ್ಪತಿಯ ಸಲಹೆಯ ಮೇರೆಗೆ ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೋ ಏನೋ ಇಂದ್ರನು ಯುದ್ಧದಲ್ಲಿ ಜಯ ಹೊಂದುತ್ತಾನಂತೆ. ಇದು ಪೌರಾಣಿಕ ಕಥೆ ಈ ಹಿನ್ನಲೆಯಿಂದಲೇ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುವುದು ಪ್ರತೀತಿ.

ತಂಗಿ ತನ್ನ ಅಣ್ಣನ ಯಶಸ್ಸು, ಶ್ರೇಯೋಭಿವೃದ್ದಿ ಹಾಗೇನೇ ಅವನ ಬಾಳಲ್ಲಿ ನೆಮ್ಮದಿಯನ್ನು ಕರುಣಿಸಿ ರಕ್ಷಿಸು ಎಂದು ಹಾರೈಸುವ ಮುಖಾಂತರ ರಾಖಿಯನ್ನು ಕಟ್ಟುವುದು ವಾಡಿಕೆ. ಶ್ರಾವಣ ಹುಣ್ಣಿಮೆಯಂದು ಬರೋ ಈ ಹಬ್ಬ ಅಣ್ಣ-ತಂಗಿಯ ಸಂಭಂದಕ್ಕೆ ಅರ್ಥ ಕಲ್ಪಿಸೋ ಪವಿತ್ರವಾದ ದಿನ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಆಚರಿಸಲಾಗುತ್ತಿದೆ. ಭಾರತದೆಲ್ಲೆಡೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರು ಈ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸೋದೇ ಈ ದಿನದ ವಿಶೇಷ. ತಂಗಿಯಾದವಳು ಅಣ್ಣನ ಹಣೆಗೆ ಕುಂಕುಮದ ತಿಲಕವನ್ನಿಟ್ಟು ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ ಸಿಹಿಯನ್ನು ಬಾಯಿಗೆ ನೀಡಿ ಅಣ್ಣನಿಂದ ಉಡುಗೊರೆ ಪಡೆಯುವ ಮೂಲಕ ಅತೀ ಸಂತಸದಿಂದ ಆಚರಿಸೋ ಹಬ್ಬಾನೇ ರಕ್ಷಾಬಂಧನ.

ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಅಣ್ಣ-ತಂಗಿಯರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ಓಂಕಾರದ ಪರವಾಗಿ ರಕ್ಷಾಬಂಧನ ಹಬ್ಬದ ಶುಭಾಶಯಗಳು.