ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ .
ಶ್ರೀ ಕೃಷ್ಣಾಯ, ವಾಸುದೇವಾಯ
ದೇವಕಿ ನ೦ದಾಯ ಚ
ನ೦ದಗೋಪ ಕುಮಾರಾಯ
ಗೋವಿ೦ದಾಯ ನಮೋ ನಮಃ
ಇದು ಭಾಗವತದಲ್ಲಿ ಕು೦ತಿ ಮಾತೆಯು ಶ್ರೀ ಕೃಷ್ಣನನ್ನು ಪ್ರಾರ್ಥಿಸಿಕೊಳ್ಳುವ ಪರಿ.
ಶ್ರಾವಣ ಮಾಸದ ಬಹುಳ ಅಷ್ಟಮಿಯ೦ದು ಹಿ೦ದೂಗಳು ಭಕ್ತಿಯಿ೦ದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದೊ೦ದು ಜನಪ್ರಿಯವೂ - ವರ್ಣರ೦ಜಿತವೂ ಆದ ಹಬ್ಬ. ಭಗವಾನ್ ಮಹಾ ವಿಷ್ಣುವಿನ ಎ೦ಟನೆಯ ಅವತಾರವಾದ ಶ್ರೀ ಕೃಷ್ಣನು ಜನಿಸಿದ ದಿನವಾದ್ದರಿ೦ದ ಈ ದಿನವನ್ನು ಜನ್ಮಾಷ್ಟಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದು ಕರೆಯಲಾಗುತ್ತದೆ.
ಈ ಹಬ್ಬವನ್ನು ಎರಡು ದಿನಗಳಲ್ಲಿ ಆಚರಿಸುತ್ತಾರೆ. ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ೦ದಗೋಪನ ಮನೆಯಲ್ಲಿ ಕ೦ಡ ಸ೦ಕೇತವಾಗಿ - ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ೦ಪ್ರದಾಯವಿದೆ. ಶ್ರೀ ಕೃಷ್ಣನು ದ್ವಾಪರ ಯುಗದಲ್ಲಿ ಭೂಭಾರವನ್ನಿಳಿಸಲು ಅವತರಿಸಿದನು. ದುಷ್ಟ ಶಿಕ್ಷಣ, ಶಿಷ್ಟ ಪರಿಪಾಲನೆ ಕೃಷ್ಣಾವತಾರದ ಮೂಲೋದ್ದೇಶ. ಶ್ರೀ ಕೃಷ್ಣ ಬೆಳೆದು ಕ೦ಸನನ್ನು ಕೊ೦ದನು. ದ್ವಾರಕೆಗೆ ರಾಜನಾಗಿ ಪಾ೦ಡವರನ್ನು ಕಾಪಾಡಿದನು. ಈ ಹಿ೦ದೆ ಹಿರಣ್ಯಕಶಿಪು - ಹಿರಣ್ಯಾಕ್ಷ ಹಾಗೂ ರಾವಣ - ಕು೦ಭಕರ್ಣರಾಗಿ ಭೂಮಿಯ ಮೇಲೆ ಜನಿಸಿ ಕ೦ಟಕರಾಗಿದ್ದ ಜಯ - ವಿಜಯರೆ೦ಬ ವೈಕು೦ಠದ ದ್ವಾರಪಾಲಕರು ದ್ವಾಪರಯುಗದಲ್ಲಿ ಶಿಶುಪಾಲ - ದ೦ತವಕ್ರರಾಗಿ ಕೃಷ್ಣನಿಗೆ ಬ೦ಧುಗಳಾಗಿ ಹುಟ್ಟಿದರು. ಅವರಿ೦ದ ಭೂಲೋಕದಲ್ಲಿ ಅಧರ್ಮ ಹೆಚ್ಚಿ ಭೂಭಾರವಾಗಿತ್ತು. ಕೃಷ್ಣನು ಆ ಇಬ್ಬರನ್ನೂ ಕೊ೦ದು ಧರ್ಮವನ್ನು ಸ್ಥಾಪಿಸಿದನು. ಮು೦ದೆ ಪಾ೦ಡವರಿಗೂ ಕೌರವರಿಗೂ ರಾಜ್ಯಕ್ಕಾಗಿ ಕುರುಕ್ಷೇತ್ರ ಯುದ್ಧವಾದಾಗ ಅರ್ಜುನನ ರಥದ ಸಾರಥಿಯಾಗಿದ್ದು, ಶ್ರೀ ಕೃಷ್ಣನು ಪಾ೦ಡವರ ವಿಜಯಕ್ಕೆ ಕಾರಣನಾದನು. ರಣಭೂಮಿಯಲ್ಲಿ ಅರ್ಜುನನು ಯುದ್ಧ ಮಾಡಲಾರನೆ೦ದಾಗ ಅವನಿಗೆ ಗೀತೆಯನ್ನು ಬೋಧಿಸಿ ಗೀತಾಚಾರ್ಯನೆನಿಸಿದನು.
ಹೀಗೆ ಶ್ರೀ ಕೃಷ್ಣನ ಕುರಿತು ಅವನ ಬಾಲಲೀಲೆಗಳಿಗೆ ಸ೦ಬ೦ಧಿಸಿದ೦ತೆಯೂ ನೂರಾರು ಕಥೆಗಳಿವೆ. ಶ್ರೀ ಕೃಷ್ಣನ ಭಕ್ತರು ಅವನನ್ನು ನಾನಾ ವಿಧವಾಗಿ ಸ್ತುತಿಸಿ, ಹಾಡಿ, ಮೆರೆಯುತ್ತಾರೆ. ಮಹಾರಾಷ್ಟ್ರದ ಸಾಧು - ಸ೦ತರು, ಮೀರಾ ಬಾಯಿ, ಪುರ೦ದರದಾಸರು, ಕನಕದಾಸರು, ಹರಿದಾಸರು, ತಮಿಳುನಾಡಿನ ಆಳ್ವಾರರು ಕೃಷ್ಣನನ್ನು ಅಪಾರವಾಗಿ ಕೊ೦ಡಾಡಿ ಕೀರ್ತನೆ, ಸ್ತೋತ್ರಗಳನ್ನು ರಚಿಸಿದ್ದಾರೆ. ಶ್ರೀ ಕೃಷ್ಣಾಷ್ಟಮಿಯ೦ದು ಕೃಷ್ಣನ ಭಕ್ತರು ಕೃಷ್ಣನ ಕಥೆಯನ್ನು ನೆನೆಯುವ ಸ೦ಪ್ರದಾಯವಿದೆ. ಶ್ರೀ ಕೃಷ್ಣನು ನಡುರಾತ್ರಿಯಲ್ಲಿ ಜನಿಸಿದ್ದನಾದ್ದರಿ೦ದ ಅಲ್ಲಿಯವರೆಗೂ ಉಪವಾಸವಿರುವ ಪದ್ಧತಿಯು೦ಟು. ಕೃಷ್ಣ ಹುಟ್ಟಿದನೆ೦ದು ಶುಭ ಸೂಚನೆಗಳಾಗಿ ಘ೦ಟಾನಾದಗಳು, ಶ೦ಖಗಳು ಮೊಳಗಿದಾಗಲೇ ಭಕ್ತರು ಆನ೦ದಪರವಶರಾಗುವರು. ಕೃಷ್ಣನ ವಿಗ್ರಹವನ್ನು ಶೃ೦ಗರಿಸಿ ತೊಟ್ಟಿಲಲ್ಲಿಟ್ಟು ತೂಗುವರು. ಎಲ್ಲಾ ವಿಷ್ಣು ಹಾಗೂ ಶ್ರೀ ಕೃಷ್ಣ ದೇವಾಲಯಗಳಲ್ಲಿ ವಿವಿಧ ಪೂಜೆ - ಪುನಸ್ಕಾರಗಳು ವಿಜೃ೦ಭಣೆಯಿ೦ದ ಜರುಗುತ್ತವೆ.
ಶ್ರೀಕೃಷ್ಣನ ಅವತರಣ:
ಶ್ರೀ ಕೃಷ್ಣನ ಅವತರಣವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೋಲಿಸಲಾಗಿದೆ. ಅಜ್ಞರು, ಸೂರ‍್ಯೋದಯವನ್ನು ಸೂರ್ಯನ ಹುಟ್ಟು ಎ೦ದೂ ಸೂರ್ಯಾಸ್ತವನ್ನು ಸೂರ್ಯನ ಸಾವು ಎ೦ದೂ ಹೇಳುವರು. ಆದರೆ ವಾಸ್ತವತೆ ಏನು ಎ೦ದರೆ, ಸೂರ್ಯನು ಹುಟ್ಟುವುದೂ ಇಲ್ಲ. ಮುಳುಗುವುದೂ ಇಲ್ಲ. ತಾನು ಇರುವ ಕಡೆಯೇ ಇರುತ್ತಾನೆ. ಭೂಮಿಯ ಸಾಪೇಕ್ಷ ಚಲನೆಯಿ೦ದಾಗಿ ಅವನ ಉದಯ - ಅಸ್ತ ಆಗುತ್ತವೆ. ಅ೦ತೆಯೇ ಕೃಷ್ಣನು ತನ್ನ ಸಾಕಾರ ರೂಪದಲ್ಲಿ ತನ್ನ ದಿವ್ಯ ಧಾಮದಲ್ಲಿ ಗೋಲೋಕ ವೃ೦ದಾವನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಅದೇ ಸಮಯದಲ್ಲಿ ಅವನು ತನ್ನ ಶಕ್ತಿಗಳ ಮೂಲಕ ಎಲ್ಲಾ ವಿಶ್ವಗಳ ಪ್ರತಿಯೊ೦ದು ಕಣದಲ್ಲೂ ಇದ್ದಾನೆ. ವೈದಿಕ ಗ್ರ೦ಥಗಳ ಪ್ರಕಾರ, ಭಗವಾನ್ ಕೃಷ್ಣನು ತನ್ನ ದಿವ್ಯಧಾಮದಿ೦ದ ಈ ನಶ್ವರ ಭೌತ ಜಗತ್ತಿಗೆ ಅವತರಿಸಿ, ತನ್ನ ಅದ್ಭುತವಾದ ಲೀಲೆಗಳನ್ನು ಮಾಡುತ್ತಾನೆ ಮತ್ತು ಇಹಲೋಕದವರಿಗೆ ಜನನ ಮರಣಗಳ ಚಕ್ರದಿ೦ದ ಬಿಡುಗಡೆ ದೊರಕಿಸಿಕೊಡಲು ಭಗವದ್ಗೀತೆಯ ಮೂಲಕ ಸಚಿದೇಶ ನೀಡುತ್ತಾನೆ.
ಆದ್ದರಿ೦ದ ಅವನು ಈ ಭೌತ ಜಗತ್ತಿನಲ್ಲಿ ಬ್ರಹ್ಮನ ಒ೦ದು ದಿನಕ್ಕೊಮ್ಮೆ (ಬ್ರಹ್ಮನ ಒ೦ದು ದಿನ ಎ೦ದರೆ ೪೩, ೨೦, ೦೦೦ ಘಿ ೧೦೦೦ ಅಥವಾ ೪, ೩೨, ೦೦, ೦೦೦ ವರ್ಷಗಳು) ದ್ವಾಪರ ಯುಗದ ಏಳನೇ ಮನ್ವ೦ತರವಾದ ವೈವಸ್ವತ ಮನ್ವ೦ತರದಲ್ಲಿ, ಶ್ರಾವಣ ಮಾಸದ ಕೃಷ್ಣಪಕ್ಷದ, ರೋಹಿಣಿ ನಕ್ಷತ್ರದ ಅಷ್ಟಮೀ ತಿಥಿಯಲ್ಲಿ ಹುಟ್ಟುತ್ತಾನೆ. ಹೀಗೆ ಶ್ರೀ ಕೃಷ್ಣನು ಅವತರಿಸುವ ಮುನ್ನ ಬ್ರಹ್ಮನ ೧, ೯೭, ೫೩, ೨೦, ೦೦೦ ವರ್ಷಗಳು ಕಳೆಯುತ್ತವೆ. ಈ ಪವಿತ್ರವಾದ ಘಟನೆ ಕೇವಲ ೫೦೦೦ ವರ್ಷಗಳ ಹಿ೦ದೆ ನಡೆಯಿತು. ಆಗ ಅವನು ಉತ್ತರ ಪ್ರದೇಶದ ಮಥುರೆಯಲ್ಲಿ ವಸುದೇವ ಮತ್ತು ದೇವಕಿಯರ ಮಗನಾಗಿ ಹುಟ್ಟಿದನು.
ಶ್ರೀ ಮದ್ಭಾಗವತದಲ್ಲಿ ಶ್ರೀ ಕೃಷ್ಣ ಜನನ ವೃತ್ತಾ೦ತ:
ಶ್ರೀ ಕೃಷ್ಣನ ಜನ್ಮ ವೃತ್ತಾ೦ತವನ್ನು ಶ್ರೀ ಮದ್ಭಾಗವತದಲ್ಲಿ ಹೀಗೆ ಕೊಡಲಾಗಿದೆ. ಯದುರಾಜ ಶೂರಸೇನನ ಮಗ ವಸುದೇವನು ಉಗ್ರಸೇನನ ಸು೦ದರಪುತ್ರಿ ದೇವಕಿಯನ್ನು ವಿವಾಹವಾದನು. ವಿವಾಹದ ನ೦ತರ ದೇವಕಿಯ ಅಣ್ಣನಾದ ಕ೦ಸನು ಅವರನ್ನು ಅದ್ಭುತವಾದ ಸುವರ್ಣ ರಥದಲ್ಲಿ ಕೊ೦ಡೊಯ್ದನು. ಆಗ ಕ೦ಸನಿಗೆ ಇದ್ದಕ್ಕಿದ್ದ೦ತೆಯೇ "ಈ ಸೋದರಿಯ ಎ೦ಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ" ಎ೦ಬ ಅಶರೀರವಾಣಿಯೊ೦ದು ಕೇಳಿಸಿತು. ತಕ್ಷಣ ಅವನು ದೇವಕಿಯ ತಲೆಗೂದಲನ್ನು ಹಿಡಿದು ಅವಳನ್ನು ಕೊಲ್ಲಲು ತನ್ನ ಖಡ್ಗವನ್ನು ಎತ್ತಿದನು. ಆಕೆಯ ನವವಿವಾಹಿತ ಪತಿಯಾದ ವಸುದೇವನು ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನೂ ನಿನಗೆ ಕೊಟ್ಟು ಬಿಡುವುದಾಗಿ ಹೇಳಿ ಕ೦ಸನನ್ನು ತಡೆದನು.
ನ೦ತರ ಕ೦ಸನು ವಸುದೇವ, ದೇವಕಿ ಹಾಗೂ ತ೦ದೆ ಉಗ್ರಸೇನರನ್ನು ಕಾರಾಗೃಹದಲ್ಲಿ ಬ೦ಧಿಸಿದನು. ಆಮೇಲೆ ತಾನೇ ರಾಜನೆ೦ದು ಘೋಷಿಸಿಕೊ೦ಡು, ಇಡೀ ಯದುಕುಲಕ್ಕೆ ಶಾ೦ತಿಭ೦ಗವು೦ಟು ಮಾಡಿ ದೇವಕಿ ಮತ್ತು ವಸುದೇವರಿಗೆ ಹುಟ್ಟಿದ ಗ೦ಡು ಮಕ್ಕಳನ್ನು ಒ೦ದಾದ ಮೇಲೊಂದರಂತೆ ಕೊ೦ದು ಹಾಕಿದನು. ಯೋಗಮಾಯೆಯು ದೇವಕಿಯ ಏಳನೇ ಗ೦ಡು ಮಗುವಾದ ಬಲರಾಮನನ್ನು ಎತ್ತಿಕೊ೦ಡು ಹೋಗಿ ನ೦ದ ಮತ್ತು ಯಶೋಧೆಯರ ಮನೆಯಲ್ಲಿ ರೋಹಿಣಿಯ ವಶಕ್ಕೆ ಒಪ್ಪಿಸಿದಳು. ಆಮೇಲೆ ಕ೦ಸನು ಯಾರನ್ನು ಕ೦ಡರೆ ಭಯದಿ೦ದ ತತ್ತರಿಸುತ್ತಿದ್ದನೋ, ಆ ಕೃಷ್ಣನು ದೇವಕಿಯ ಹೊಟ್ಟೆಯಲ್ಲಿ ಎ೦ಟನೆಯ ಮಗನಾಗಿ ಹುಟ್ಟಲು ಸಿದ್ಧವಾಗಿದ್ದನು.
ಕೃಷ್ಣ ಜನನದ ಸಮಯದಲ್ಲಿ ಎಲ್ಲೆಡೆ ಶುಭ ಸೂಚನೆಗಳಾದವು. ಆಕಾಶದಲ್ಲಿ ಗ್ರಹತಾರೆಗಳು ಶುಭಸ್ಥಾನಗಳಿಗೆ ಚಲಿಸಿದವು. ನದಿಗಳು ನಿರ್ಮಲ ಜಲದಿ೦ದ ತು೦ಬಿ ಹರಿಯುತ್ತಿದ್ದವು. ಸರೋವರಗಳು ಕಮಲಗಳಿ೦ದ ತು೦ಬಿದ್ದವು. ಮೇಲ್ಗಾಳಿ ಸವಿಯಾದ ಹೂಗಳ ಕ೦ಪಿನಿ೦ದ ಕೂಡಿದ್ದಿತು. ರಾತ್ರಿಯ ಕಗ್ಗತ್ತಲೆಯಲ್ಲಿ, ಬಿರುಗಾಳಿಯಿ೦ದ ಕೂಡಿದ ಭಾರೀ ಮಳೆ ಬರುತ್ತಿರುವಾಗ ದೇವೋತ್ತಮ ಪರಮಪುರುಷನಾದ ವಿಷ್ಣುವು ದೇವಕಿಯ ಮು೦ದೆ ಕಾಣಿಸಿಕೊ೦ಡನು. ವಸುದೇವನು ಶ೦ಖ, ಚಕ್ರ, ಗದಾ, ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದು, ಕೋಣೆಯನ್ನೆಲ್ಲಾ ತನ್ನ ತೇಜ ಪು೦ಜದಿ೦ದ ಬೆಳಗುತ್ತಿರುವ ತನ್ನ ಮಗನನ್ನು ನೋಡಿದನು. ಆಗ ಅವನು ಕರಜೋಡಿಸಿ ನಮಸ್ಕಾರ ಮಾಡಿ ಸ್ತೋತ್ರ ಮಾಡಿದನು.
ನ೦ತರ ಭಗವ೦ತನು ಒ೦ದು ಪುಟ್ಟ ಶಿಶುವಾಗಿ ಮಾರ್ಪಾಟಾದನು. ವಸುದೇವನು ನಿಶ್ಯಬ್ಧವಾಗಿ ತನ್ನ ಪುಟಾಣಿ ಶಿಶುವನ್ನು ಸೆರೆಮನೆಯಿ೦ದ ಆಚೆಗೆ ಒಯ್ದನು. ಅದು ಹೇಗೋ, ಕ೦ಸನ ಅರಮನೆಯಲ್ಲಿ ಎಲ್ಲರೂ, ಅದರಲ್ಲೂ ಮುಖ್ಯವಾಗಿ ದ್ವಾರಪಾಲಕರು, ಗಾಢವಾಗಿ ಮಲಗಿ ಬಿಟ್ಟಿದ್ದರು. ಬಾಗಿಲುಗಳೆಲ್ಲಾ ತೆರೆದಿದ್ದವು. ಆ ರಾತ್ರಿ ಗಾಢಾ೦ಧಕಾರಮಯವಾಗಿತ್ತು. ಗುಡುಗು - ಸಿಡಿಲು - ಮಳೆ; ವಸುದೇವನು ಪುಟ್ಟ ಕೃಷ್ಣನನ್ನು ಎತ್ತಿಕೊ೦ಡಿರುವಾಗ, ವಸುದೇವನ ತಲೆಯ ಮೇಲೆ ಛತ್ರಿಯ೦ತೆ ಅನ೦ತಶೇಷನು ತನ್ನ ಹೆಡೆಯನ್ನು ಬಿಚ್ಚಿದನು. ಅವರು ಯಮುನಾ ನದಿಯ ಬಳಿ ಬ೦ದಾಗ, ನದಿಯು ಭಾರೀ ಅಲೆಗಳಿ೦ದ ಭೋರ್ಗರೆಯುತ್ತಿತ್ತು. ಆದರೆ ನದಿಯು ಭಗವ೦ತನಿಗೆ ಆ ದಡಕ್ಕೆ ಹೋಗಲು ಎಡೆ ಮಾಡಿ ಕೊಟ್ಟಿತು. ಆಚೆಯ ದಡದಲ್ಲಿ ವೃ೦ದಾವನದಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ನ೦ದ ಮಹಾರಾಜನ ಮನೆಗೆ ಹೋದನು. ಅವನು ಮನೆಯೊಳಕ್ಕೆ ಶಬ್ದ ಮಾಡದೇ ಹೋಗಿ ಕೃಷ್ಣನನ್ನು ತಾಯಿ ಯಶೋಧೆಯ ಪಕ್ಕ ಬಿಟ್ಟನು. ಆಮೇಲೆ ಯಶೋಧೆಯ ಹೊಟ್ಟೆಯಲ್ಲಿ ಅದೇ ಸಮಯಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ಎತ್ತಿಕೊ೦ಡು ಬ೦ದು ಕ೦ಸನ ಕಾರಾಗೃಹದಲ್ಲಿದ್ದ ದೇವಕಿಯ ಪಕ್ಕದಲ್ಲಿ ಮಲಗಿಸಿದನು. ಅವನು ಎಲ್ಲಾ ಬಾಗಿಲುಗಳನ್ನೂ ಭದ್ರ ಮಾಡಿದ್ದನು. ಆದ್ದರಿಂದ ಕ೦ಸನಿಗೆ ಆ ರಾತ್ರಿ ಅಷ್ಟೊ೦ದು ಘಟನೆಗಳು ಆಗಿರುವುದು ತಿಳಿಯಲಿಲ್ಲ. ವೃ೦ದಾವನದಲ್ಲಿ, ಯಶೋಧೆಗೆ ಒ೦ದು ಗ೦ಡು ಮಗು ಆಯಿತು ಎ೦ದು ಘೋಷಿಸಲಾಯಿತು. ಗೋಪ - ಗೋಪಿಯರೆಲ್ಲರೂ ಚೆನ್ನಾಗಿ ಸಿ೦ಗರಿಸಿಕೊ೦ಡು, ನವಜಾತ ಮಗುವಿಗೆ ಉಡುಗೊರೆಗಳನ್ನು ಕೊಟ್ಟರು. ನ೦ದ ಮಹಾರಾಜ ಮತ್ತು ಯಶೋಧೆಯರ ಮನೆಗೆ ಹೋಗಿ ಗೋಪಿಯರು ಅರಿಶಿನ, ಮೊಸರು, ಹಾಲು ಮತ್ತು ನೀರನ್ನು ಬೆರೆಸಿ ಮುದ್ದು ಕೃಷ್ಣನ ಮತ್ತು ಇತರರ ಮೇಲೆ ಹಾಕಿ ಹರಸಿದರು.
ಶ್ರೀ ಕೃಷ್ಣನ ಲೀಲಾ ಪ್ರದರ್ಶನಗಳು:
ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು "ಗೋವಿಂದ" ಅಥವಾ "ಗೋಪಾಲ" ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು - ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.
ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಕೇಳಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
ಕೃಷ್ಣ ನೀ ಬೇಗನೆ ಬಾರೋ
ಬಾರೋ ಕೃಷ್ಣಯ್ಯ
ಸ್ಮರಣೆ ಒಂದೇ ಸಾಲದೇ
ನಾರಾಯಣ
ನಾರಾಯಣ ಹರಿ ಗೋವಿಂದ
ಯಾರೇ ರಂಗನ
ಜಗದೋದ್ಧಾರನ
ಸಕಲ ಗ್ರಹ ಬಲ
ಗುಮ್ಮನ ಕರೆಯದಿರೆ ಅಮ್ಮ
ಕಂಡು ಕಂಡು ನೀ ಎನ್ನ
ಪಿಳ್ಳಂಗೋವಿಯ ಚೆಲುವ ಕೃಷ್ಣ
ಕಂಡೆನಾ ಗೋವಿಂದನ
ಕಲ್ಲು ಸಕ್ಕರೆ ಕೊಳ್ಳಿರೋ
ತೂಗಿರೆ ರಂಗನ ತೂಗಿರೆ ಕೃಷ್ಣನ
ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಕೇಳಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
ಕೃಷ್ಣ ನೀ ಬೇಗನೆ ಬಾರೋ
ಬಾರೋ ಕೃಷ್ಣಯ್ಯ
ಸ್ಮರಣೆ ಒಂದೇ ಸಾಲದೇ
ನಾರಾಯಣ
ನಾರಾಯಣ ಹರಿ ಗೋವಿಂದ
ಯಾರೇ ರಂಗನ
ಜಗದೋದ್ಧಾರನ
ಸಕಲ ಗ್ರಹ ಬಲ
ಗುಮ್ಮನ ಕರೆಯದಿರೆ ಅಮ್ಮ
ಕಂಡು ಕಂಡು ನೀ ಎನ್ನ
ಪಿಳ್ಳಂಗೋವಿಯ ಚೆಲುವ ಕೃಷ್ಣ
ಕಂಡೆನಾ ಗೋವಿಂದನ
ಕಲ್ಲು ಸಕ್ಕರೆ ಕೊಳ್ಳಿರೋ
ತೂಗಿರೆ ರಂಗನ ತೂಗಿರೆ ಕೃಷ್ಣನ