ಉತ್ತರಾಯಣ ಪುಣ್ಯಕಾಲದ ಶುಭದಿನ- ಮಕರ ಸಂಕ್ರಾಂತಿ
ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.
ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧೀಕರಿಸುತ್ತವೆ.
ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಆದುದರಿಂದಲೇ ಮಹಾಭಾರತದ ಕಥೆಯಲ್ಲಿ ಭೀಷ್ಮ ಇಹಲೋಕ ತ್ಯಜಿಸಲು ಈ ಕಾಲದ ನಿರೀಕ್ಷೆಯಲ್ಲಿದ್ದದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕಾಲದಲ್ಲಿ ಇರುಳಿನ ಅವಧಿಯು ಕಡಿಮೆಯಿದ್ದು ಸೂರ್ಯನ ಬೆಳಕು ಸದಾ ಭೂಮಿ ಮೇಲಿರುತ್ತದೆ.
ಗಡಗಡ ನಡುಗಿಸುವ ಚಳಿಯು ದೂರವಾಗಿ, ವಸಂತನ ಆಗಮನವಾಗುತ್ತಲೇ, ಪ್ರಕೃತಿ ದೇವಿಯ ಕಣ್ಣಲ್ಲಿ ಹೊಸ ಕಳೆ, ಹೊಸ ಹೊಳಹು. ಗಿಡಮರಗಳೆಲ್ಲಾ ಹೂಬಿಟ್ಟು ತನ್ನನ್ನು ನೆಚ್ಚಿಕೊಂಡಿರುವ ಸಮಸ್ತ ಜೀವರಾಶಿಗೆ ಫಲ-ಪುಷ್ಪಗಳೊಂದಿಗೆ ಪೋಷಣೆ ನೀಡುವ ಕಾಯಕಕ್ಕೆ ಅಡಿಯಿಡುವ, ಹಚ್ಚ ಹಸಿರಿನೊಂದಿಗೆ ದಷ್ಟಪುಷ್ಟಗೊಳ್ಳುವ ಪ್ರಕೃತಿದೇವಿಯನ್ನು ಆದರಿಸುವ ಸಂಕ್ರಾಂತಿಯ ಸಡಗರವಿದು. ಹೊಸ ವರ್ಷದ ಆಚರಣೆಯ ನಂತರ ದೇಶವು ಸಂಭ್ರಮ ಪಡುವ ಸುಗ್ಗಿಯ ಪರ್ವವೇ ಈ ಮಕರ ಸಂಕ್ರಮಣ. ಭೂಮಿಯನ್ನು ಹಸನಾಗಿಸಿ ನಮ್ಮ ಜೀವನವನ್ನೂ ಹಸನಾಗಿಸುವ ಪ್ರಕೃತಿ ಮಾತೆಗೆ ನಮಿಸಿ ಸಂಭ್ರಮಿಸುವ ಪರ್ವವಿದು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆಯುಟ್ಟು, ಮೈಮನಗಳ ಕೊಳೆ ನಿವಾರಿಸಿಕೊಳ್ಳುವ ಸಂಕೇತವೂ ಅಹುದು.
ವಾಸ್ತವಿಕವಾಗಿ, ಸೂರ್ಯನ ಚಲನೆಯ ಆಧಾರದಲ್ಲಿರುವ ಮೇಷ-ಮೀನಾದಿ ತಿಂಗಳುಗಳನ್ನು ಸೂರ್ಯನು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಆಧಾರದಲ್ಲಿ ಗುರುತಿಸಲಾಗುತ್ತದೆಯಾದರೂ, ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನಕ್ಕೆ ಅದೇನೋ ವಿಶೇಷತೆ, ಸಡಗರ, ಸಂಭ್ರಮ. ಇತರ ೧೧ ರಾಶಿಗಳಿಗೂ ಸೂರ್ಯ ಪ್ರವೇಶಿಸುತ್ತಾನೆ. ಹೀಗಿರುವಾಗ ಧನುವಿನ ಮನೆಯನ್ನು ತೊರೆದು ಆತನ ಮಕರ ರಾಶಿ ಪ್ರವೇಶವೇ ವಿಶೇಷವಾಗುವುದೇಕೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಇದು ಮುಂಬರುವ ಪ್ರಖರ ಬೆಳಕಿನ ಬೆಚ್ಚಗಿನ ವಾತಾವರಣದ ಆರಂಭಕ್ಕೆ ಮುನ್ನುಡಿಯಿಡುವ ದಿನ. ನಮಗೆ ಹೆಚ್ಚು ಸಮಯ ದೊರೆಯುತ್ತದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಸಂದೇಶದೊಡನೆ ಅಂದಿನಿಂದ ಹಗಲು ದೀರ್ಘವಾಗುತ್ತದೆ.
ತಂದೆ-ಮಕ್ಕಳ ಬಂಧದ ಕುರುಹು
ಪುರಾಣಗಳನ್ನು ಓದುತ್ತಾ ಹೋದರೆ, ಸೂರ್ಯನಿಗೆ ಛಾಯಾ ದೇವಿಯ ಗರ್ಭದಲ್ಲಿ ಜನಿಸಿದ ಮಗ ಶನಿ. ಶನಿ ಮತ್ತು ಸೂರ್ಯ ಇಬ್ಬರ ಗುಣಗಳು ತದ್ವಿರುದ್ಧವಾದರೂ, ಸೂರ್ಯನು ವರ್ಷಕ್ಕೊಂದು ಬಾರಿ ತನ್ನ ಪುತ್ರನಾದ ಶನಿಯ ಮನೆಯಾಗಿರುವ ಮಕರ ರಾಶಿಗೆ ಬಂದೇ ಬರುತ್ತಾನೆ. ಒಂದು ರೀತಿಯಲ್ಲಿ ತಂದೆ-ಮಕ್ಕಳ ಬಾಂಧವ್ಯದ ಸಂಕೇತವಾಗಿಯೂ ಭಕ್ತಿಯ ಸಂಕೇತವಾಗಿಯೂ ಮಕರ ಸಂಕ್ರಾಂತಿಯು ಮಾನವ ಜೀವನದ ಬಾಂಧವ್ಯದ ಬೆಸುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಮೂರು ದಿನಗಳ ಸಂಕ್ರಾಂತಿ ಸಡಗರ
ಸಂಕ್ರಾಂತಿ ಎಂದ ತಕ್ಷಣ ಕರ್ನಾಟಕದಲ್ಲಿ ನೆನಪಿಗೆ ಬರುವುದು ಎಳ್ಳು-ಬೆಲ್ಲ ಮತ್ತು ಕಬ್ಬು. ವಾಸ್ತವದಲ್ಲಿ ಮಕರ ಸಂಕ್ರಮಣ ಹಬ್ಬವು ನಾಲ್ಕು ದಿನಗಳ ಪರ್ಯಂತ ನಡೆಯುತ್ತದೆ. ಭೋಗಿ ಹಬ್ಬ, ಸಂಕ್ರಾಂತಿ ಮತ್ತು ಕರೀಹಬ್ಬ . ಇದರ ಆಚರಣೆ ಭಿನ್ನವಾಗಿರುತ್ತದೆ.
ಮೊದಲನೆಯ ದಿನ ಭೋಗಿ ಹಬ್ಬ, ಅಂದು ಮನೆ-ಮನಸಿನ ಕತ್ತಲು-ಕಲ್ಮಶ ತೊಳೆಯುವ ದಿನ. ಮನೆಯನ್ನು ಶುಭ್ರವಾಗಿಸಿ, ಮನಸ್ಸನ್ನೂ ಶುಚಿಗೊಳಿಸಿ, ಇಳೆಯಲ್ಲಿ ಬೆಳೆಯ ಸಮೃದ್ಧಿಗೆ ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ-ಬೆರಣಿಯಿಂದ ಅಗ್ನಿ ರಚಿಸಿ, ಅದರಲ್ಲಿ ಬೇಡವಾದ (ಮುರಿದ ಕುರ್ಚಿ ಇತ್ಯಾದಿ ಪೀಠೋಪಕರಣ ಮತ್ತಿತರ ಹಳೆಯ, ಬೇಡವಾದ ಸಾಮಗ್ರಿ) ವಸ್ತುಗಳನ್ನು ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಆಚರಣೆ ನಡೆಯುತ್ತದೆ.
ಎರಡನೇ ದಿನ ಮಕರ ಸಂಕ್ರಾಂತಿ. ಬಾಳು ಬೆಳಗುವ ಸೂರ್ಯನ ಆರಾಧನೆಯ ದಿನ. ಮನೆಯ ಹೊರಗೆ ಒಲೆ ಹಾಕಿ ಸಿಹಿ ಪೊಂಗಲ್ ಅಥವಾ ಹುಗ್ಗಿ ತಯಾರಿಸಿ ಸೂರ್ಯನಿಗೆ ಅರ್ಪಿಸುವುದು, ಮನೆಯೆದುರು ರಂಗವಲ್ಲಿ ಹಾಕುವುದು ಕಂಡುಬರುತ್ತದೆ. ಸುಖ ಸಮೃದ್ಧಿ, ಸದಾಶಯಗಳು ಜೀವನದಲ್ಲಿ ಉಕ್ಕಿ ಬರಲಿ ಎಂಬುದನ್ನು ಪ್ರತಿನಿಧೀಕರಿಸುವ ನಿಟ್ಟಿನಲ್ಲಿ ಈ ಸಿಹಿ ಪೊಂಗಲ್ ಅಥವಾ ಹುಗ್ಗಿಯನ್ನು ಒಲೆಯಲ್ಲಿ ಉಕ್ಕಿಸಲಾಗುತ್ತದೆ. ಇದನ್ನು ಪರಸ್ಪರ ಹಂಚಿ ತಿಂದು ಸಂಭ್ರಮಿಸುವ ದಿನವೂ ಇದೇ. ಇಂದು ಮನೆ ಮನೆಗೆ ತೆರಳಿ "ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ" ಎಂದು ಹಾರೈಸುತ್ತಾ, ಎಳ್ಳು, ಬೆಲ್ಲ, ಸಕ್ಕರೆಯಚ್ಚು, ಕೊಬ್ಬರಿ, ಸಕ್ಕರೆಬೊಂಬೆ, ಜತೆಗೆ ಹುರಿಗಡಲೆ, ನೆಲಗಡಲೆ ಸೇರಿಸಿ, ಕಬ್ಬು ಕೂಡ ಪರಸ್ಪರ ವಿನಿಮಯ ಮಾಡುತ್ತಾ, ನೆರೆಕರೆಯ ಬಾಂಧವ್ಯ ವೃದ್ಧಿಯಾಗಿಸಿಕೊಳ್ಳುವ ಆಚರಣೆ. ಇದಕ್ಕೆ ಎಳ್ಳುಬೀರುವುದು ಎನ್ನುತ್ತಾರೆ. ಇಲ್ಲಿ ಎಳ್ಳು ಶನಿಯ ಪ್ರತೀಕ ಮತ್ತು ಬೆಲ್ಲ ಸೂರ್ಯನ ಪ್ರತೀಕ. ಶನಿ-ಸೂರ್ಯನ ಅಂದರೆ ತಂದೆ-ಮಕ್ಕಳ ಬಾಂಧವ್ಯದ ಸಂಕೇತವೂ ಹೌದು. ಆದರೆ, ಇತ್ತೀಚೆಗಿನ ಅವಸರದ ಯುಗದಲ್ಲಿ ಎಲ್ಲ ಆಚರಣೆಗಳೂ ಒಂದೇ ದಿನಕ್ಕೆ ಸೀಮಿತವಾಗುತ್ತಿರುವುದು ನಾವು ಕಾಣುತ್ತಿರುವ ಸತ್ಯ.
ಸಂಕ್ರಾಂತಿಯ ಮೂರನೇ ದಿನ ಗೋವುಗಳನ್ನು ಆರಾಧಿಸುವ ದಿನ. ಗದ್ದೆ ಉಳುಮೆಗೆ ನೆರವಾಗುವ ಎತ್ತುಗಳು, ಕೃಷಿಕನಿಗೆ ನೆರವಾಗುವ ಹಸುಗಳನ್ನು ಸಿಂಗರಿಸಿ, ಆರತಿ ಮಾಡಿ, ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಹಲವೆಡೆ ನಾವು ಕಾಣಬಹುದು. ಅಂದು ತಾವು ಸಾಕಿರುವ ಜಾನುವಾರುಗಳಿಗೆ ರೈತರು ಬೆಚ್ಚನೆ ನೀರಿನ ಸ್ನಾನ ಮಾಡಿಸಿ, ಶೃಂಗಾರ ಮಾಡುತ್ತಾರೆ. ಸ್ವಲ್ಪ ಸಿರಿವಂತರಾದರೆ ಅವುಗಳಿಗೆ ಸುಗಂಧ ದ್ರವ್ಯ ಲೇಪನ ಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಶೃಂಗರಿಸುತ್ತಾರೆ. ಬೇಕಾದಷ್ಟು ಮೇವು ಕೊಟ್ಟು ಸಾಧು ಪ್ರಾಣಿಗಳನ್ನು ತಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ನೋವು ನೀಡಬಾರದೆಂಬ ಕಾರಣದಿಂದ ಆ ದಿನದಂದು ಪ್ರಾಣಿಗಳಿಗೆ ಕೆಲಸವಿಲ್ಲ.
ವಿವಿಧತೆಯಲ್ಲಿ ಏಕತೆ
ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಯಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವೆಂದು ಕರೆಸಿಕೊಳ್ಳುವ ಇದು ಈ ವರ್ಷದಿಂದ ತಮಿಳು ಹೊಸ ವರ್ಷಾರಂಭ ದಿನವಾಗಿಯೂ ಅಧಿಕೃತವಾಗಿ ಮಾನ್ಯವಾಗಿದೆ. ಸಿಹಿ ಪೊಂಗಲ್ ಈ ದಿನದ ವಿಶೇಷ. ಕೇರಳ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಮಹಾರಾಷ್ಟ್ರದಲ್ಲಿ ತಿಲ-ಗುಳ್ (ಎಳ್ಳುಂಡೆ) ಹಬ್ಬವಾಗಿ, ಆಂಧ್ರ ಪ್ರದೇಶದಲ್ಲಿ ಪೆದ್ದ ಪಂಡುಗ (ದೊಡ್ಡ ಹಬ್ಬ), ಅಸ್ಸಾಂನಲ್ಲಿ ಭೋಗಲಿ ಬಿಹು/ಮಾಘ ಬಿಹು, ಬಿಹಾರದಲ್ಲಿ ತಿಲ ಸಂಕ್ರಾಂತಿ, ಗುಜರಾತಿನಲ್ಲಿ ಗಾಳಿಪಟ ಉತ್ಸವವನ್ನೊಳಗೊಂಡ ಉತ್ತರಾಯಣ, ಮಧ್ಯಪ್ರದೇಶದಲ್ಲಿ ಸುಕಾರತ್/ಸಕಾರತ್, ಪಂಜಾಬ್ ಮತ್ತು ಹರ್ಯಾಣದಲ್ಲಿ ಲೋಹ್ರಿ, ಉತ್ತರ ಪ್ರದೇಶದಲ್ಲಿ ಕಿಚಿಡಿ/ಕಿಚಿರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳದ ಮೂಲಕ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತದೆ.
ಉತ್ತರಾಯಣ ಪುಣ್ಯಕಾಲವೇ ಇದು?
ಉತ್ತರಾಯಣ ಪುಣ್ಯಕಾಲಕ್ಕೂ ಮಕರ ಸಂಕ್ರಾಂತಿಗೂ ಸಂಬಂಧ ಕಲ್ಪಿಸಲಾಗುತ್ತದೆಯಾದರೂ, ಅದರ ಬಗೆಗಿನ್ನೂ ವಾದ-ವಿವಾದಗಳಿವೆ. ನಮ್ಮ ದೇಶದಲ್ಲಿ ಚಾಂದ್ರಮಾನ (ಚಂದ್ರನ ಚಲನೆ ಆಧರಿಸಿದ) ಮತ್ತು ಸೌರಮಾನ (ಸೂರ್ಯನ ಚಲನೆ ಆಧರಿಸಿದ) ಎರಡು ಪಂಚಾಂಗಗಳನ್ನು ಅನುಸರಿಸಲಾಗುತ್ತದೆ. ಹೆಚ್ಚಾಗಿ ಹಬ್ಬ ಹರಿದಿನಗಳ ದಿನಗಳನ್ನು ನಿರ್ಣಯಿಸುವುದು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ. ಆದರೆ, ಮಕರ ಸಂಕ್ರಾಂತಿ ಮಾತ್ರ ಇದಕ್ಕೆ ಹೊರತಾಗಿದೆ. ಅದು ಸೂರ್ಯನ ಪರಿಭ್ರಮಣೆಯ ಆಧಾರದ ಸೌರಮಾನ ಅಥವಾ ಸಾಯನ ಪಂಚಾಗ ಆಧರಿತವಾಗಿದೆ. ಯಾಕೆಂದರೆ ಚಂದ್ರನ ಚಲನೆಯನ್ನು ಆಧರಿಸಿ (ಚಾಂದ್ರಮಾನ ಪದ್ಧತಿ ಪ್ರಕಾರದ ಪಂಚಾಂಗ ಅನುಸರಿಸಿ) ನೋಡಿದರೆ, ಉತ್ತರಾಯನ ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆ ಆರಂಭವಾಗುವುದು ಡಿಸೆಂಬರ್ ೨೨ರ ಆಸುಪಾಸಿನಲ್ಲಿ ಬರುವ ವೈಕುಂಠ ಏಕಾದಶಿಯಂದು. ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಕಾರಣಕ್ಕೇ ಶರಶಯ್ಯೆಯಲ್ಲಿದ್ದ ’ಇಚ್ಛಾಮರಣಿ’ ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗಕ್ಕಾಗಿ ಕಾದರು.
ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಣ ನಡೆಸುವ ಈ ಉತ್ತರಾಯಣದ ಆರು ತಿಂಗಳ ಕಾಲವು ಅತ್ಯಂತ ಶ್ರೇಷ್ಠವಾದ ಶುಭ ದಿನಗಳನ್ನು ಹೊಂದಿರುತ್ತವೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ವಿವಾಹವೇ ಮೊದಲಾದ ಮಂಗಳ ಕಾರ್ಯಗಳು ಜರುಗುತ್ತವೆ.
ನಮಗೆ ಹಿರಿಯರು ಹೇಳಿದ್ದಿದೆ- ಮಗೂ... ನಮಗೆ ಒಂದು ವರ್ಷ ಎಂದರೆ, ದೇವ ದೇವತೆಗಳಿಗೆ ಒಂದು ದಿನ ಇದ್ದ ಹಾಗೆ ಎಂಬುದಾಗಿ. ಅದನ್ನೇ ನೆನಪಿಸಿಕೊಂಡು ಹೇಳಬಹುದಾದರೆ, ಆ ದೇವ ದೇವತೆಗಳ ಒಂದು ದಿನದಲ್ಲಿ ಆರು ತಿಂಗಳ ಹಗಲು ಆರಂಭವಾಗುವುದು ಉತ್ತರಾಯನ (ಉತ್ತರಾಯಣ) ಪುಣ್ಯಕಾಲದಲ್ಲಿ. ಕೊನೆಗೊಳ್ಳುವುದು ದಕ್ಷಿಣಾಯನದಲ್ಲಿ (ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ - ಕರ್ಕ ಸಂಕ್ರಮಣ). ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ದಿನ ಈ ಮಕರ ಸಂಕ್ರಮಣ. ಅದೇ ರೀತಿ ನಮ್ಮ ಜೀವನದಲ್ಲೂ ಕತ್ತಲು ಕಳೆಯಲಿ, ಬೆಳಕು ಮೆರೆಯಲಿ... ಎಳ್ಳು ಬೆಲ್ಲವ ತಿಂದು ನಾಲ್ಕು ಒಳ್ಳೆಯ ಮಾತಾಡುವಂತಾಗಲಿ.