ಕರ್ನಾಟಕ ರಾಜ್ಯೋತ್ಸವ ವಿಶೇಷ


ನವೆಂಬರ್ ೧, ಕರ್ನಾಟಕ ರಾಜ್ಯೋತ್ಸವ - ಈ ದಿನವು ಕನ್ನಡಿಗರಿಗೆ ವಿಶೇಷವಾದ ದಿನ. ಕನ್ನಡ ನಾಡು, ಸಂಸ್ಕೃತಿಯನ್ನು ಹೊಗಳಿ ಗೌರವಿಸುವ ದಿನವಿದು. 

ಕನ್ನಡದ ವೀರ ಪುತ್ರಪುತ್ರಿಯರೇ, ಭರತ ಮಣ್ಣಿನ ವೀರಪ್ರಜೆಗಳೇ, ಬನ್ನಿ ನಾವೆಲ್ಲರೂ ಸೇರಿ ಹಾಡೋಣ "ಕರ್ನಾಟಕ ರಾಜ್ಯೋತ್ಸವ." ಕಾಡು, ಜಲ ಸಂಪತ್ತು ಬೆಳೆಸಿರುವ ನಾಡಿದು, ಮಲೆನಾಡು, ಆಗುಂಬೆಗಳಂತಹ ಭವ್ಯ ತಾಣವಿದು, ಕನ್ನಡ ಮಾತೆಯ ಪೂಜಿಸಿ ಆರಾಧಿಸುವ ದೇಗುಲವಿದು, ಭರತ ಲೋಕದ ಪ್ರಕೃತಿಯ ಪ್ರೀತಿಯ ಕಣ್ಮಣಿಯಿದು. ಬೇಲೂರು, ಹಳೇಬೀಡುಗಳಂತಹ ಶಿಲ್ಪಗಳ ದೇಗುಲವಿದು, ಸಮುದ್ರಗಳ ಅಲೆಗಳ ಮೇಲೆ ಜೀವನ ನಡೆಸುವ ಬೆಸ್ತರ ನಾಡಿದು, ಕವಿ ಋಷಿಗಳು ಬೆಳೆಸಿ, ನೆಲೆಸಿರುವ ಪುಣ್ಯಕೋಟಿ ಕವನದ, ಕನ್ನಡಿಗರ ಹೋರಾಟದ ಫಲವಿದು "ಕರ್ನಾಟಕ ರಾಜ್ಯೋತ್ಸವ."

ಕನ್ನಡ ನಾಡದೇವಿ ಭುವನೇಶ್ವರಿ. ಕನ್ನಡಿಗರೆಲ್ಲರೂ ಆರಾಧಿಸುವ ಭುವನೇಶ್ವರಿ ದೇವಾಲಯ ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ಐತಿಹಾಸಿಕ ಸ್ಥಳದಲ್ಲಿದೆ. ಒಂದು ಕನ್ನಡ ಸಾಮ್ರಾಜ್ಯ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ. ಮತ್ತೊಂದು ಕನ್ನಡ ಸಿಂಹಾಸನ ಪ್ರತಿಷ್ಠಾಪನಾಚಾರ್ಯರ ಮಠವಿರುವ ಶೃಂಗೇರಿಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಭುವನಗಿರಿಯಲ್ಲಿ. 

ಕನ್ನಡ ತಾಯಿ ಭುವನೇಶ್ವರಿ ದೇವಾಲಯವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ. ನಿಸರ್ಗ ರಮಣೀಯತೆಗೆ ಹೆಸರಾದ ಉತ್ತರ ಕನ್ನಡದ ಮಲೆನಾಡಿನಲ್ಲಿ ಇರುವ ಈ ದೇವಾಲಯ ನಮ್ಮ ನಾಡಿನ ಏಕೈಕ ಭುವನೇಶ್ವರಿ ಮಾತೆಯ ದೇವಾಲಯ.

“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!” ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ ಕರ್ನಾಟಕದ ನೆಲದಲ್ಲಿರುವ ಏಕೈಕ ಕನ್ನಡಾಂಬೆಯ ದೇಗುಲ ಇರುವುದು ನಿಸರ್ಗದ ಸಿರಿ ಸಂಪತ್ತಿನಿಂದ ಕೂಡಿರುವ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಯನ್ನು ತನ್ನೊಡಲಲ್ಲಿ ಲಾಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ.

ಬೆಂಗಳೂರಿನಿಂದ ಸಿದ್ದಾಪುರಕ್ಕಿರುವ ಸರಿಸುಮಾರು ೩೯೦ ಕಿ. ಮೀ. ಅಲ್ಲಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ. ಮೀ.ಬಲ ಬದಿಯಲ್ಲಿ ಒಂದು ವಿಶಾಲವಾದ ಕೆರೆ ಕಂಡುಬರುತ್ತದೆ. ಅದರ ಸಮೀಪದಲ್ಲಿ ಬೆಟ್ಟವೇರಲು ಮೆಟ್ಟಿಲುಗಳಿವೆ. ಕೆರೆಯಿಂದ ಸುಮಾರು ೩೦೦ ಅಡಿಗಳ ಎತ್ತರದಲ್ಲಿ ಭುವನಗಿರಿಯ ಮೇಲೆ ಮಾತೆ ಭುವನೇಶ್ವರಿಯ ದೇವಾಲಯವಿದೆ. ಬೆಟ್ಟವೇರಲು ವಾಹನಗಳಿಗೆ ಕಿರಿದಾದ ರಸ್ತೆಯೂ ಇದೆ.

ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ.

ಪೌರಾಣಿಕ ಹಿನ್ನೆಲೆ: ಇಲ್ಲಿನ ದಟ್ಟ ಕಾನನದಲ್ಲಿ ಭುವನಾಸುರನೆಂಬ ಒಬ್ಬ ರಾಕ್ಷಸನಿದ್ದನಂತೆ. ಆತನ ಮಿತಿಮೀರಿದ ಉಪಟಳದಿಂದ ಜನರು ನೆಮ್ಮದಿಯಿಂದ ಬಾಳಲು ಆಗುತ್ತಿರಲಿಲ್ಲವಂತೆ. ಜನರ ಪ್ರಾರ್ಥನೆಯನ್ನು ಕೇಳಿದ ದುರ್ಗಾಮಾತೆ ಪ್ರತ್ಯಕ್ಷಳಾಗಿ ಆತನನ್ನು ವಧಿಸಲು ಅಣಿಯಾದ ಸಮಯದಲ್ಲಿ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ಕೇಳಿದನಂತೆ. ತಥಾಸ್ತು ಎಂದ ದುರ್ಗಾ ಮಾತೆಯು ಈ ಸ್ಥಳವು ಭುವನಗಿರಿಯೆಂದು ಕರೆಯಲ್ಪಡುವುದು ಮತ್ತು ನಾನು ಈ ಕ್ಷೇತ್ರದಲ್ಲಿ ಭುವನೇಶ್ವರಿಯಾಗಿ ನೆಲೆಸಿ ನಾಡನ್ನು ಕಾಯುತ್ತೇನೆ ಎಂದಳಂತೆ.

ಐತಿಹಾಸಿಕ ಹಿನ್ನೆಲೆ: ವಿವಿಧ ಮೂಲಗಳ ಪ್ರಕಾರ ಬಿಳಗಿಯ ಅರಸರು ಕನ್ನಡ ನುಡಿಯ ಹಾಗೂ ನಾಡಿನ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅವರಿಗೆ ಕನ್ನಡಮಾತೆಗಾಗಿ ಒಂದು ಗುಡಿ ಕಟ್ಟಿಸುವ ಬಯಕೆ ಇತ್ತು. ಬಿಳಗಿಯ ಅರಸರಲ್ಲಿ ಕೊನೆಯವರಾದ ಬಸವೇಂದ್ರ ಈ ದೇವಾಲಯನ್ನು ೧೬೯೨ರಲ್ಲಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ. 

ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವ‌ನ್ನು ಕಾಣಬಹುದು.

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ, ಜಯ ಹೇ ರಸ ಋಷಿಗಳ ಬೀಡೇ
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ, ಕನ್ನಡ ತಾಯಿಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ, ರಾಷ್ಟ್ರಕವಿ ಕುವೆಂಪು