|| ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂವರಿಷ್ಟಂ ||
|| ವಾತಾತ್ಮಜಂ ವಾನರಯೋಧಮುಖ್ಯಂ, ಶ್ರೀರಾಮಧೂತಂ ಶಿರಸಾ ನಮಾಮಿ ||
ನಾವೆಲ್ಲರೂ ನಮ್ಮ ಚೈತನ್ಯಮಯವಾದ ದೇಹ, ಮನಸ್ಸು, ವಾಕ್ ಇತ್ಯಾದಿ ಶಕ್ತಿಗಳನ್ನು ದೇವರಿಂದ ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದೇವೆ. ಆದರೆ ಇವುಗಳನ್ನು ಬೇಡದಿರುವ ವಿಚಾರಗಳಲ್ಲಿ ತೊಡಗಿಸುತ್ತ ನಮ್ಮ ಶಕ್ತಿಗಳನ್ನು ಕ್ಷೀಣಗೊಳಿಸುತ್ತಿದ್ದೇವೆ. ತೀವ್ರವಾಗಿ ಇದರ ಬಗ್ಗೆ ವಿಚಾರ ಮಾಡಿದಾಗ ನಮಗೆ ಅರಿವಾಗುತ್ತದೆ, ನನ್ನಲ್ಲಿ ಆ ದೈವೀಕ ಅಂಶ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು. ಆಗಿದ್ದು ಹೇಗೆ ಅಂದರೆ ದಿನ ನಿತ್ಯವೂ ನಾನಾ ಕಾರಣಗಳಿಂದ ನಾವು ಮನಸ್ಸಿಗೆ ಧ್ಯಾನದ ಆಹಾರ ಕೊಡುವುದಿಲ್ಲ.
ಮನಸ್ಸು ಅಂದರೆ ಹೇಗೆ ಇಟ್ಟುಕೊಳ್ಳಬೇಕು, ಅದನ್ನು ಹತೋಟಿಗೆ ಹೇಗೆ ತರಬೇಕೆಂದು ನಮಗೆ ತಿಳಿಸಿಕೊಟ್ಟವನು ಆಂಜನೇಯ. ಶ್ರೀರಾಮನಿಗೆ ಆಂಜನೇಯ ತನ್ನ ದೇಹ ಮಾತ್ರ ಅಲ್ಲ, ನಿರಂತರವಾಗಿ ಕೊಟ್ಟದ್ದು ತನ್ನ ಮನಸ್ಸನ್ನು. ಅವನ ಎದೆಯಲ್ಲಿ, ಮನಸ್ಸಿನಲ್ಲಿ, ಹೃದಯ ಕಮಲದಲ್ಲಿ ನಿರಂತರವಾಗಿ ಇದ್ದದ್ದು ರಾಮ, ಲಕ್ಷ್ಮಣ, ಸೀತೆಯರು ಮಾತ್ರ. ಶ್ರೀರಾಮ ಅವನ ಭಕ್ತಿಗೆ ಮೆಚ್ಚಿ ವರವನ್ನು ಕರುಣಿಸಿದಾಗ, ಆಂಜನೇಯ ಮುಕ್ತಿಯನ್ನು ಬಯಸಲಿಲ್ಲ- ಸದಾ ನನ್ನ ಮನಸ್ಸಿನಲ್ಲಿ ನೀನೇ ನೆಲೆಸಬೇಕು, ಏಳೇಳು ಲೋಕಗಳಲ್ಲಿ ಸಂಚರಿಸುತ್ತ ನಿನ್ನ ಗುಣಗಾನವನ್ನು ನಾನು ಮಾಡಬೇಕು' ಎಂದನು. ಆದ್ದರಿಂದ ಶ್ರೀರಾಮನು ಆಂಜನೇಯನಿಗೆ ಚಿರಂಜೀವತ್ವವನ್ನು ಕರುಣಿಸಿದನು.
ಕಲಿಯುಗದಲ್ಲಿ ಜನರು ಭಕ್ತಿ ಎಂದರೇನು, ಮನಸ್ಸನ್ನು ಹೇಗೆ ತಿಳಿಯಾಗಿ ಇಟ್ಟುಕೊಳ್ಳಬಹುದು ಎನ್ನುವ ವಿಚಾರ ಆಂಜನೇಯನಿಂದ ತಿಳಿದುಕೊಳ್ಳಲಿ ಎನ್ನುವುದೇ ಈ ಪೂಜೆಯ ಉದ್ದೇಶ. ತನ್ನ ಮನಸ್ಸನ್ನೇ ಅಲ್ಲದೆ ಆಂಜನೇಯ ತನ್ನ ದೇಹದ ಕಣಕಣವನ್ನು, ನರನಾಡಿಗಳೆಲ್ಲವನ್ನೂ ಶ್ರೀರಾಮನಿಗಾಗಿ ಅರ್ಪಿಸಿಬಿಟ್ಟ. ಆಗ ಅವನ ದೇಹಕ್ಕೆ ಪುಷ್ಟಿ, ಮನಸ್ಸಿಗೆ ಧೈರ್ಯ ಬಂತು. ತಾನೇ ಒಂದು ಶಕ್ತಿಯಾಗಿ ನಿಂತ.
ಬರುವ ೨೭ ನೇ ಡಿಸೆಂಬರ್ ೨೦೧೩ ರಂದು ಓಂಕಾರ ಸಮಿತಿಯು ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಹಮ್ಮಿಕೊಂಡಿರುತ್ತದೆ. ಎಲ್ಲರೂ ತಮ್ಮ ಪರಿವಾರ, ಬಂಧು-ಬಾಂಧವರೊಂದಿಗೆ ಆಗಮಿಸಿ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.