ಗೌರಿ ಹಬ್ಬದ ವಿಶೇಷಾಂಕ


ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. 

ಗೌರಿ ಎಂಬ ಪದ ಪಾರ್ವತೀದೇವಿಗೆ ಪರ್ಯಾಯವಾದ ಪದ. ಆಕೆಯು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಕೊನೆಯದನ್ನು ತನ್ನ ಅಧಿಕಾರದಲ್ಲಿ ಪ್ರಧಾನವಾಗಿ ಹೊಂದಿರುವ ಮಹಾದೇವನ ಅರ್ಧಾಂಗಿ, ಮಹಾದೇವಿ. ಆಕೆಯು ಸಂಹಾರ ಮಾಡುವಾಗ ಕೃಷ್ಣವರ್ಣವನ್ನು ಅಲಂಕರಿಸಿರುವ ಕಾಳೀ ಮಾತೆ, ವಿದ್ಯಾಪ್ರದಾನ ಮಾಡುವಾಗ ಶ್ಯಾಮಲ ವರ್ಣದ ಶ್ಯಾಮಲಾಂಬಿಕೆಯಂತೆ, ಸೌಮಂಗಲ್ಯ, ಸೌಭಾಗ್ಯ ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣದಿಂದ ಮತ್ತು ಕೆಲವೊಮ್ಮೆ ಹಿಮ ಶುಭ್ರ ವರ್ಣದಿಂದ ಕಂಗೊಳಿಸುವ ಗೌರೀಮಾತೆ. ಗೌರಿದೇವಿಯು ಪರ್ವತ ಸಾರ್ವಭೌಮನಾದ ಹಿಮವಂತನ ಮಗಳು. ವರುಷಕ್ಕೊಮ್ಮೆ ತವರಿಗೆ ಬರುವ ಅವಳಿಗಾಗಿ ಹಬ್ಬವನ್ನು ಮಾಡುವುದು. 

ಗೌರಿ ಪೂಜಾ ವಿಧಾನ ಉದಾಹರಣೆ (ಅವರವರ ಸಂಪ್ರದಾಯಕ್ಕೆ ತಕ್ಕಂತೆ ಬೇರೆ ಇರಬಹುದು):
ಗೌರೀ ದೇವಿಯನ್ನು ಹೃದಯದಲ್ಲಿ ಧ್ಯಾನ ಮಾಡಿ ಅನಂತರ ಮಾತೆಗೆ ಬಾಹ್ಯಪೂಜೆ ಅರ್ಪಿಸಬೇಕು. ಗೌರಿದೇವಿಯ ಪ್ರತಿಮೆಯನ್ನು ಸುವರ್ಣ ರೂಪದಲ್ಲಿ, ಕಲಶ ರೂಪದಲ್ಲಿ, ಅರಿಶಿನ ರೂಪದಲ್ಲಿ ಅಥವಾ ಮಣ್ಣಿನ ರೂಪದಲ್ಲಿ ನಿರ್ಮಿಸಿ ಪೂಜೆ ಸಲ್ಲಿಸಬೇಕು. ಮರಳಿನಲ್ಲೂ ಗೌರಿಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವಿದೆ. ನದಿತಟದಲ್ಲಿರುವ ಮರಳನ್ನು ಅರಿಶಿನದ ಬಟ್ಟೆಯಲ್ಲಿ ಇರಿಸಿ ಗಂಟು ಹಾಕಿ ಷೋಡಶೋಪಚಾರ ಪೂಜೆಯನ್ನು ಅರ್ಪಿಸಿ, ಮನೆಗೆ ಅಥವಾ ದೇಗುಲಕ್ಕೆ ತಂದು ಪೂಜಿಸುವರು. ಆಚಮನ, ಸಂಕಲ್ಪ, ಕಳಸ ಪೂಜೆಯ ನಂತರ ಮಹಾಗಣಪತಿಗೆ ಪೂಜಿಸಿ, ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಬೇಕು. 

ಪುಷ್ಪಾಕ್ಷತೆಯಿಂದ ಆವಾಹಿಸಿ, ರತ್ನಸಿಂಹಾಸನವನ್ನು ಸಮರ್ಪಿಸಬೇಕು. ಹೊಸದಾದ ಹದಿನಾರು ಗಂಟುಗಳ ದಾರವನ್ನೂ ದೇವಿಯೊಂದಿಗೆ ಪೂಜೆಗಿಡಬೇಕು. ಯಥಾವತ್ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಮತ್ತಿತರೇ ಸೌಭಾಗ್ಯ ದ್ರವ್ಯಗಳನ್ನು ದೇವಿಗೆ ಅರ್ಪಿಸಬೇಕು. ಆಭರಣವೆಂದು ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವನ್ನು ಅರ್ಪಿಸುವುದು ಈಗಿನ ರೂಢಿ. ಹದಿನಾರು ಗಂಟುಗಳ ದಾರಕ್ಕೆ (ದೋರ) ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌವರಿ, ಭದ್ರಾ, ವಿಷ್ಣು ಸೋದರೀ, ಮಂಗಳ ದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರಪತ್ನೀ, ದಾಕ್ಷಾಯಣೀ, ಕೃಷ್ಣವೇಣೀ, ಭವಾನೀ, ಲೋಲೇಕ್ಷಣಾ, ಮೇನಕಾತ್ಮಜಾ, ಸ್ವರ್ಣಗೌರೀ ಎಂಬ ಹದಿನಾರು ಹೆಸರುಗಳಿಂದ ಪೂಜಿಸಬೇಕು. ನಂತರ ದೇವಿಗೆ ಅಷ್ಟೋತ್ತರ ಶತನಾಮಾವಳಿ ಪೂರ್ವಕ ಕುಂಕುಮಾರ್ಚನೆ ಮಾಡಿ, ಧೂಪ, ದೀಪ, ನೈವೇದ್ಯ, ತಾಂಬೂಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ ಮತ್ತು ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಬೇಕು. ಅಂದು ವಿಶೇಷವಾದ ಅನ್ನ ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸುವುದೂ ವಾಡಿಕೆ.

ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ. ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. 

ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಖಂಡಿತವಾಗಿ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.

ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳು ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ. ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.


"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".