ಮನದುಂಬಿದ ಧನ್ಯವಾದಗಳು - ಶತಾವಧಾನಿ ಡಾ| ರಾ. ಗಣೇಶ್


ಓಂಕಾರ ವೇದಿಕೆಯ ಗಳೆಯರಿಗೆ ಹಾರ್ದಿಕ ನಮಸ್ಕಾರ,

ನಿಮ್ಮೆಲ್ಲರ ಆಸ್ಥೆ-ಅಕ್ಕರೆಗಳ ಪರಿಣಾಮವಾಗಿ ನಾನು ನಿಮ್ಮ ಊರಿಗೆ ಬರುವಂತಾಗಿ ಅಲ್ಲಿ ಮರೆಯಲಾಗದ ಸುಂದರಾನುಭವನ್ನು ಪಡೆದುದಕ್ಕಾಗಿ ಮೊತ್ತಮೊದಲಿಗೆ ನನ್ನ ಮನದುಂಬಿದ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತಿದ್ದೇನೆ. ಈ ಬರಿಯ ಒಣಮಾತಿನ ಮೂಲಕ ಹೇಳುವ ಧನ್ಯವಾದಕ್ಕೆ ಯಾವ ಪರಿಣಾಮವೂ ಇರದಾದರೂ ತಾವೆಲ್ಲ ನನ್ನ ಪ್ರಾಮಾಣಿಕ ಭಾವನೆಗಳನ್ನು ಅರಿಯಬಲ್ಲಿರೆಂದೇ ಈ ನುಡಿಗಳನ್ನಾಡುವ ಸಾಹಸ ಮಾಡಿದ್ದೇನೆ. ಈ ಮೂರು ದಿನಗಳು ನಿಜಕ್ಕೂ ಮೂರು ಕ್ಷಣಗಳ ಹಾಗೆ ತೇಲಿಹೋದವು. ತಾವೆಲ್ಲ ಆಯೋಜನೆಯ ಹಂತದಿಂದ ನಾನಿಲ್ಲಿ ಮರಳಿ ಬರುವವರೆಗೆ ತೋರಿದ ಕಾಳಜಿ, ಮಾಡಿದ ವ್ಯವಸ್ಥೆ ಹಾಗೂ ನೀಡಿದ ಪ್ರೀತಿಗಾಗಿ ಏನು ಪಡಿ ಎರೆದೇನು? "ಅಂಜಲಿಃ ಪರಮಾ ಮುದ್ರಾ" ಕೃತಜ್ಞತೆಯಿಂದ ಕೈ ಮುಗಿಯುವುದೊಂದೇ ನನ್ನ ಪ್ರತಿಕ್ರಿಯೆ. ಈ ನನ್ನ ಬಡತನಕ್ಕಾಗಿ ಮನ್ನಿಸಿರಿ.

ಮುಖ್ಯವಾಗಿ ಅಲ್ಲಿಯ ನೆಲ-ಬಾನುಗಳನ್ನು, ಕಡಲು-ಗುಡ್ಡಗಳನ್ನು, ಆ ನಾಡಿನಲ್ಲಿ ನೆಲಸಿ ನಮ್ಮ ದೇಶಕ್ಕೂ ಆ ದೇಶಕ್ಕೂ ನೆಮ್ಮದಿಯನ್ನು ತರುತ್ತಿರುವ ನಮ್ಮ ಜನರ ಒಲವು-ನಿಲವುಗಳನ್ನು ಅರಿಯುವಲ್ಲಿ ತಾವೆಲ್ಲ ನನಗಿತ್ತ ಈ ಸದವಕಾಶಕ್ಕಾಗಿ ಮತ್ತೆ ಮತ್ತೆ ಧನ್ಯವಾದಗಳು. ಹಾಗೆ ನೋಡಿದರೆ ನಾನು ನನ್ನ ಕೆಲಸವನ್ನು ಅಲ್ಲಿ ಯುಕ್ತವಾಗಿ ನಿರ್ವಹಿಸಿದೆನೇ ಇಲ್ಲವೇ ಎಂಬುದನ್ನು ದಾಕ್ಷಿಣ್ಯವಿಲ್ಲದೆ ತಾವುಗಳೇ ಹೇಳಬೇಕು.ನನ್ನ ರೀತಿಯೇನಿದ್ದರೂ ಬಸವಣ್ಣನವರು ಹೇಳಿದಂತೆ "ಆನು ಒಲಿದಂತೆ ಹಾಡುವೆ". ಆದುದರಿಂದಲೇ ನನ್ನ ನಿಸ್ಸಂಕೋಚದ, ನಿರ್ದಾಕ್ಷಿಣ್ಯದ ವರ್ತನೆ ತಮಗಾಗಲಿ ತಮ್ಮ ಬಳಗದ ಸದಸ್ಯರಿಗಾಗಲಿ ಮುಜುಗರವನ್ನೋ ನೋವನ್ನೋ ತಂದಿದಲ್ಲಿ ಮನ್ನಿಸಬೇಕು.

ಮುಖ್ಯವಾಗಿ ಬಹುಕಾಲದ ನಚ್ಚಿನ ಮಿತ್ರರಾದ ಶ್ರೀ ಶಶಿಧರ ಮತ್ತು ಶ್ರೀಮತಿ ಸುಮನಾ ಅವರ ವಿಶ್ವಾಸವು ನನ್ನನ್ನು ತಮ್ಮ ಕರೆಗೆ ಒಲಿಯುವ ಹಾಗೆ ಮಾಡಿತು. ಅಲ್ಲದೆ ಅವರು ಮೊದಲ ದಿನ ತಮ್ಮ ಮನೆಯಲ್ಲಿಯೇ ನಡಸಿದ ಸ್ನೇಹಾದರಪ್ಲಾವಿತವಾದ ಸಮೃದ್ಧ ಆತಿಥ್ಯವು ನನಗೆ ಪರಸ್ಥಳದ ಮುಜುಗರವಿಲ್ಲದಂತೆ ಮಾಡಿತು. ಶ್ರೀಮಹೇಶರಂತೂ ಮತ್ತೆ ಮತ್ತೆ ದೂರವಾಣಿ-ಮಿಂಚೆ-ಮುಖತಃ ಭೇಟಿಗಳ ಮೂಲಕ ಗಟ್ಟಿಗೊಳಿಸಿದ ವಿಶ್ವಾಸವು ಅವಿಸ್ಮಾರ್ಯ. ಎರಡನೆಯ ದಿನದಿಂದ ಶ್ರೀಯೋಗಾನಂದರು ನನಗೆ ಸರ್ವಾತ್ಮನಾ ಊರೆಗೋಲಾದರು. ಅವರ ಹಾಗೂ ಶ್ರೀಮತಿ ಇಂದಿರಾ ಅವರ ಅಕ್ಕರೆ ಮರೆಯಲಾದೀತೇ? ಮೂರನೆಯ ದಿನದ ಆತಿಥೇಯರಾದ ಶ್ರೀ ರವಿ ಮತ್ತು ಶ್ರೀಮತಿ ಪದ್ಮಿನಿಯವರ ಪ್ರೀತಿ-ವಿಶ್ವಾಸಗಳು ಕೂಡ ಹೊಸಹೊಸ ಆಯಾಮಗಳನ್ನು ತೋರಿದುವು. ನನ್ನ ಪಾಲಿನ ಅನ್ನಪೂರ್ಣೆಯರಾದ ಸುಮನಾ ಅವರ ತುಪ್ಪದ ದೋಸೆ-ಮಲ್ಲಿಗೆ ಇಡಲಿ-ಪುಳಿಯೋಗರೆ-ಉಪ್ಪಿಟ್ಟು, ಇಂದಿರಾ ಅವರ ಕೋಸಂಬರಿ-ಪುಳಿಯೋಗರೆ-ಪಲ್ಯ-ಸಾರು, ಕವಿತಾ ಅವರ ಜಾಮೂನು-ಸಂಡಿಗೆ-ಖಾರಾಭಾತು, ಮಂಜುಳಾ ಅವರ ಹೋಳಿಗೆ - ಹೆಸರುಬೇಳೆಯ ದೋಸೆ, ಗಿರಿಜಾ ಅವರ ಅಪ್ಪಟ ಕೇಸರೀಭಾತು-ಖಾರಾಭಾತು, ಪದ್ಮಿನಿಯವರ ಚಿತ್ರಾನ್ನ-ಸೊಪ್ಪಿನಪಲ್ಯ-ಬಗೆಬಗೆಯ ರೊಟ್ಟಿ-ಪೊಂಗಲ್ ಇತ್ಯಾದಿಗಳನ್ನೆಲ್ಲ ನನ್ನ ಅನ್ನಬ್ರಹ್ಮಭಕ್ತಿಯ ಮನಸ್ಸು ಮರೆಯಲಾರದು. ಅಂತೆಯೇ ಆತಿಥೇಯರಾದ ಶ್ರೀ ರವಿಕುಮಾರ್, ಶ್ರೀ ರಾಮಕೃಷ್ಣ, ಶ್ರೀ ರಮೇಶ್ (ಇವರಂತೂ ಬೆಂಗಳೂರಿನಿಂದಲೇ ನನಗೆ ಜೊತೆಯಾಗಿ ಬಂದು ನೆರವಾದರು), ಅನಿರೀಕ್ಷಿತವಾಗಿ ಅಲ್ಲಿ ಕಾಲೇಜಿನ ದಿನಗಳ ಸವಿನೆನಪನ್ನು ಮರುಕಳಿಸಿದ ನನ್ನ ಹಳೆಯ ಸಹಪಾಠಿ ಶ್ರೀ ಬಾಲಕೃಷ್ಣ ಮುಂತಾದವರೆಲ್ಲರ ವಿಶ್ವಾಸವೇ ನನ್ನ ಶ್ವಾಸವನ್ನು ಅಲ್ಲಿ ನಿರಾಳವಾಗಿಸಿತೆಂದರೆ ಅತಿಶಯವಲ್ಲ. ಇವರಲ್ಲದೆ ನಿಮ್ಮ ಬಳಗದ ಮತ್ತೂ ಅನೇಕಸದಸ್ಯರು ತೋರಿದ ನಲ್ಮೆಗಾಗಿ ನನ್ನ ನೆನಕೆಗಳು. ಹೆಚ್ಚೇನು, ನನ್ನಂಥ ಭಾವಜೀವಿಯ ಬದುಕೇ ಈ ಬಗೆಯ ಸ್ನೇಹ-ಸೌಜನ್ಯಧನ್ಯತೆಯ ಋಣಗಣಪರಿಣಾಮ.

ಎಲ್ಲರಿಗಮೀಗ ನಮೋ; ಬಂಧುಗಳೆ ಭಾಗಿಗಳೆ, ಉಲ್ಲಾಸವಿತ್ತವರೆ, ಮನವ ತೊಳೆದವರೇ!! ಎಂದು ವಿರಮಿಸುತ್ತೇನೆ.. ..ಮತ್ತೆ ತಮ್ಮನ್ನ್ನೆಲ್ಲ ಇಲ್ಲಿಯೋ ಅಲ್ಲಿಯೋ ಎಲ್ಲೆಯೋ ಎಲ್ಲೆಲ್ಲಿಯೋ ಕಾಣುವ ಕಂಡು ಕೊಂಡಾಡುವ ಅವಕಾಶ ಬರಲಿ.

ಇತಿ ಭವದೀಯ

ರಾಗ
(ರಾ. ಗಣೇಶ್)