ಶ್ರೀ ದತ್ತಾತ್ರೇಯ ಜಯಂತಿ -೨೦೧೩

ಶ್ರೀ ದತ್ತಜಯಂತಿ ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ ಈ ಬಾರಿ ಇಂದು ೧೭-ಡಿಸೆಂಬರ್-೨೦೧೩ ರಂದು ದತ್ತಾತ್ರೇಯ ಜಯಂತಿಯನ್ನು ನಾಡಿನಲ್ಲಿ ಎಲ್ಲೆಡೆ ಆಚರಿಸಲಾಗುತ್ತಿದೆ.

ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. 

ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.

ಇತರ ಕೆಲವು ಹೆಸರುಗಳು

ಅವಧೂತ: 
೧. ‘ಅವಧೂತ ಚಿಂತನ ಶ್ರೀ ಗುರುದೇವ ದತ್ತ|’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ - ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

೨. ಎಲ್ಲ ಸಂಕಲ್ಪ-ವಿಕಲ್ಪರಹಿತದ ವಿಭೂತಿಯನ್ನು ಅವನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡಿದ್ದನು. ಆದುದರಿಂದಲೇ ಅವನಿಗೆ ‘ಅವಧೂತ’ ಎಂದು ಕರೆಯಲಾಗುತ್ತಿತ್ತು; ಅನ್ಯಥಾ ಅವನು ಬ್ರಾಹ್ಮಣನೇ ಆಗಿದ್ದನು. ಸುತ್ತಲಿನ ಪ್ರಪಂಚವನ್ನು ಅವನು ಆತ್ಮಜ್ಞಾನದಿಂದ ತೊಳೆದಿದ್ದನು; ಆದುದರಿಂದಲೂ ಅವನಿಗೆ ‘ಅವಧೂತ’ ಎನ್ನಬೇಕು. ಅನ್ಯಥಾ ಅವನು ಓರ್ವ ವಿಖ್ಯಾತ ಬ್ರಾಹ್ಮಣನಾಗಿದ್ದನು. ಯಾವನು ‘ಅಹಂ’ ವನ್ನು ತೊಳೆಯುತ್ತಾನೆಯೋ ಅವನೇ ಅವಧೂತ, ಅವನೇ ಯೋಗಿ ಮತ್ತು ಅವನೇ ಪುನೀತನಾಗಿದ್ದಾನೆ. ಯಾವನು ಅಹಂಕಾರಪೀಡಿತನಾಗಿರು ತ್ತಾನೆಯೋ ಅವನೇ ಜನ್ಮಕರ್ಮಗಳಲ್ಲಿ ಪಾಪಿಯಾಗಿರುತ್ತಾನೆ ಎಂದು ತಿಳಿಯಬೇಕು. - ಏಕನಾಥೀ ಭಾಗವತ ಅಧ್ಯಾಯ ೭, ದ್ವಿಪದಿ ೨೭೦-೨೭೨

ದಿಗಂಬರ
‘ದಿಕ್ ಏವ ಅಂಬರಃ|’ ದಿಕ್ ಅಂದರೆ ದಿಕ್ಕುಗಳೇ ಯಾವನ ಅಂಬರವಾಗಿವೆಯೋ, ಅಂದರೆ ವಸ್ತ್ರವಾಗಿವೆಯೋ, ಅವನೇ ದಿಗಂಬರ; ಅಂದರೆ ಅವನು ಇಷ್ಟು ದೊಡ್ಡವನಾಗಿದ್ದಾನೆ, ಸರ್ವವ್ಯಾಪಿಯಾಗಿದ್ದಾನೆ.

ದತ್ತಾತ್ರೇಯ ಶಬ್ದವು ದತ್ತ + ಆತ್ರೇಯ ಹೀಗೆ ರೂಪುಗೊಂಡಿದೆ. ದತ್ತನ ಅರ್ಥವನ್ನು ವಿಷಯ ಪ್ರಾರಂಭದಲ್ಲಿ ನೀಡಲಾಗಿದೆ. ಆತ್ರೇಯ ಎಂದರೆ ಅತ್ರಿಋಷಿಗಳ ಮಗ.

ಜನ್ಮದ ಇತಿಹಾಸ

ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ. ಪುರಾಣಗಳಿಗನುಸಾರವಾಗಿ ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.

ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ - ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.

ಇಂದಿನ ದತ್ತ ಜಯಂತಿ ನಿಮಿತ್ತ ಈ ಬರಹ ನಿಮಗಾಗಿ ಓಂಕಾರ ಸಮಿತಿ ಸಂಗ್ರಹಿಸಿ ಕೊಡಲಾಗಿದೆ.

ನಾರದ ಮುನಿ ವಿರಚಿತ ಶ್ರೀ ದತ್ತಾತ್ರೇಯ ಸ್ತೋತ್ರ :

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧||

ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ ನಾರದಋಷಿಃ |
ಅನುಷ್ಟುಪ್ ಛಂದಃ | ಶ್ರೀದತ್ತಪರಮಾತ್ಮಾ ದೇವತಾ |
ಶ್ರೀದತ್ತಪ್ರೀತ್ಯರ್ಥೇ ಜಪೇ ವಿನಿಯೋಗಃ ||

ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಸ್ತುತೇ ||೧||

ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋಸ್ತುತೇ ||೨||

ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಸ್ತುತೇ ||೩||

ಹ್ರಸ್ವದೀರ್ಘಕೃಶಸ್ಥೂಲ-ನಾಮಗೋತ್ರ-ವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಸ್ತುತೇ ||೪||

ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಸ್ತುತೇ ||೫||

ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||೬||

ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರ್ರಿಯಜಿತಜ್ಞಾಯ ದತ್ತಾತ್ರೇಯ ನಮೋಸ್ತುತೇ ||೭||

ದಿಗಂಬರಾಯ ದಿವ್ಯಾಯ ದಿವ್ಯರೂಪಧ್ರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಸ್ತುತೇ ||೮||

ಜಂಬುದ್ವೀಪಮಹಾಕ್ಷೇತ್ರಮಾತಾಪುರನಿವಾಸಿನೇ |
ಜಯಮಾನಸತಾಂ ದೇವ ದತ್ತಾತ್ರೇಯ ನಮೋಸ್ತುತೇ ||೯||

ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಸ್ತುತೇ ||೧೦||

ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ ||೧೧||

ಅವಧೂತಸದಾನಂದಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಸ್ತುತೇ ||೧೨||

ಸತ್ಯಂರೂಪಸದಾಚಾರಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಸ್ತುತೇ ||೧೩||

ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ ||೧೪||

ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಸ್ತುತೇ ||೧೫||

ದತ್ತ ವಿದ್ಯಾಢ್ಯಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಸ್ತುತೇ ||೧೬||

ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಸ್ತುತೇ ||೧೭||

ಇದಂ ಸ್ತೋತ್ರಂ ಮಹಾದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ||೧೮|| ||

ಇತಿ ಶ್ರೀನಾರದಪುರಾಣೇ ನಾರದವಿರಚಿತಂ ದತ್ತಾತ್ರೇಯಸ್ತೋತ್ರಂ ಸಂಪೂರ್ಣಮ್ || 

ಗೀತಾ ಜಯಂತಿ - ೨೦೧೩

ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ (ಅಂದರೆ ಈ ಬಾರಿ ೧೩-ಡಿಸೆಂಬರ್ ೨೦೧೪), ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. 

ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ.ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನೆಡೆದದ್ದೆಂದು ಸಾಧಿಸುತ್ತಾರೆ. ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು. ಎಂದ. ಶ್ರೀ ಕೃಷ್ಣನನ್ನು ಈ ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಅದರಿಂದಲೇ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.

ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.

ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗ ವನ್ಮ್ನ ಆರಿಸಿಕೊಳ್ಳಬಹ್ಮದು. ಸದ್ಧರ್ವ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನವಾಗಬಹುದೆಂದು ನನ್ನಭಾವನೆ. ಈ ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ.

ಶ್ರೀ ಆಂಜನೇಯ ಪೂಜೆ - ೨೦೧೩

|| ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂವರಿಷ್ಟಂ ||
|| ವಾತಾತ್ಮಜಂ ವಾನರಯೋಧಮುಖ್ಯಂ, ಶ್ರೀರಾಮಧೂತಂ ಶಿರಸಾ ನಮಾಮಿ ||

ನಾವೆಲ್ಲರೂ ನಮ್ಮ ಚೈತನ್ಯಮಯವಾದ ದೇಹ, ಮನಸ್ಸು, ವಾಕ್ ಇತ್ಯಾದಿ ಶಕ್ತಿಗಳನ್ನು ದೇವರಿಂದ ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದೇವೆ. ಆದರೆ ಇವುಗಳನ್ನು ಬೇಡದಿರುವ ವಿಚಾರಗಳಲ್ಲಿ ತೊಡಗಿಸುತ್ತ ನಮ್ಮ ಶಕ್ತಿಗಳನ್ನು ಕ್ಷೀಣಗೊಳಿಸುತ್ತಿದ್ದೇವೆ. ತೀವ್ರವಾಗಿ ಇದರ ಬಗ್ಗೆ ವಿಚಾರ ಮಾಡಿದಾಗ ನಮಗೆ ಅರಿವಾಗುತ್ತದೆ, ನನ್ನಲ್ಲಿ ಆ ದೈವೀಕ ಅಂಶ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು. ಆಗಿದ್ದು ಹೇಗೆ ಅಂದರೆ ದಿನ ನಿತ್ಯವೂ ನಾನಾ ಕಾರಣಗಳಿಂದ ನಾವು ಮನಸ್ಸಿಗೆ ಧ್ಯಾನದ ಆಹಾರ ಕೊಡುವುದಿಲ್ಲ. 

ಮನಸ್ಸು ಅಂದರೆ ಹೇಗೆ ಇಟ್ಟುಕೊಳ್ಳಬೇಕು, ಅದನ್ನು ಹತೋಟಿಗೆ ಹೇಗೆ ತರಬೇಕೆಂದು ನಮಗೆ ತಿಳಿಸಿಕೊಟ್ಟವನು ಆಂಜನೇಯ. ಶ್ರೀರಾಮನಿಗೆ ಆಂಜನೇಯ ತನ್ನ ದೇಹ ಮಾತ್ರ ಅಲ್ಲ, ನಿರಂತರವಾಗಿ ಕೊಟ್ಟದ್ದು ತನ್ನ ಮನಸ್ಸನ್ನು. ಅವನ ಎದೆಯಲ್ಲಿ, ಮನಸ್ಸಿನಲ್ಲಿ, ಹೃದಯ ಕಮಲದಲ್ಲಿ ನಿರಂತರವಾಗಿ ಇದ್ದದ್ದು ರಾಮ, ಲಕ್ಷ್ಮಣ, ಸೀತೆಯರು ಮಾತ್ರ. ಶ್ರೀರಾಮ ಅವನ ಭಕ್ತಿಗೆ ಮೆಚ್ಚಿ ವರವನ್ನು ಕರುಣಿಸಿದಾಗ, ಆಂಜನೇಯ ಮುಕ್ತಿಯನ್ನು ಬಯಸಲಿಲ್ಲ- ಸದಾ ನನ್ನ ಮನಸ್ಸಿನಲ್ಲಿ ನೀನೇ ನೆಲೆಸಬೇಕು, ಏಳೇಳು ಲೋಕಗಳಲ್ಲಿ ಸಂಚರಿಸುತ್ತ ನಿನ್ನ ಗುಣಗಾನವನ್ನು ನಾನು ಮಾಡಬೇಕು' ಎಂದನು. ಆದ್ದರಿಂದ ಶ್ರೀರಾಮನು ಆಂಜನೇಯನಿಗೆ ಚಿರಂಜೀವತ್ವವನ್ನು ಕರುಣಿಸಿದನು.

ಕಲಿಯುಗದಲ್ಲಿ ಜನರು ಭಕ್ತಿ ಎಂದರೇನು, ಮನಸ್ಸನ್ನು ಹೇಗೆ ತಿಳಿಯಾಗಿ ಇಟ್ಟುಕೊಳ್ಳಬಹುದು ಎನ್ನುವ ವಿಚಾರ ಆಂಜನೇಯನಿಂದ ತಿಳಿದುಕೊಳ್ಳಲಿ ಎನ್ನುವುದೇ ಈ ಪೂಜೆಯ ಉದ್ದೇಶ. ತನ್ನ ಮನಸ್ಸನ್ನೇ ಅಲ್ಲದೆ ಆಂಜನೇಯ ತನ್ನ ದೇಹದ ಕಣಕಣವನ್ನು, ನರನಾಡಿಗಳೆಲ್ಲವನ್ನೂ ಶ್ರೀರಾಮನಿಗಾಗಿ ಅರ್ಪಿಸಿಬಿಟ್ಟ. ಆಗ ಅವನ ದೇಹಕ್ಕೆ ಪುಷ್ಟಿ, ಮನಸ್ಸಿಗೆ ಧೈರ್ಯ ಬಂತು. ತಾನೇ ಒಂದು ಶಕ್ತಿಯಾಗಿ ನಿಂತ.

ಬರುವ ೨೭ ನೇ ಡಿಸೆಂಬರ್ ೨೦೧೩ ರಂದು ಓಂಕಾರ ಸಮಿತಿಯು ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಹಮ್ಮಿಕೊಂಡಿರುತ್ತದೆ. ಎಲ್ಲರೂ ತಮ್ಮ ಪರಿವಾರ, ಬಂಧು-ಬಾಂಧವರೊಂದಿಗೆ ಆಗಮಿಸಿ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. 

Sri Aanjaneya Pooje - 2013

Dear Omkar Members,

Omkar celebrates its ONE YEAR completion and has been a year serving Kannadigas and Karnataka community.  Omkar takes this opportunity to thank all of its members who supported all these days. On this occasion, your valuable feedback is highly appreciable and helps us to serve and build the community in a better way. 

Please send your feedback to omkarsamithi@gmail.com

Omkar's debut program started with Sri Aanjaneys Pooja in Dec-2012 and with the blessings of Sri Lord Aanjaneya Swamy, Omkar could organize unique and outstanding programs since then and intend to continue in coming days.

Sri Aanjaneya Pooja -2013 is organized on coming 27-December-2013 at Sri Krishna Temple Hall, Darsait. Detailed program shall be sent to you later with the Invitation

In mean time, Omkar invites supporters and volunteers for the upcoming program from its members. Interested members are requested to send their names for any of the services to omkarsamithi@gmail.com.  

Or Send email using Contact us Section from this blog


Omkar Team

ತುಳಸಿ ವಿವಾಹ ವಿಶೇಷಾಂಕ - ೨೦೧೩

|| ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಹಾಗೂ ಗೌರವ ಸ್ಥಾನವಿದೆ. ಭಾರತದಲ್ಲಿ ಪ್ರತಿಯೊಂದು ಮನೆಯ ಮುಂಭಾಗ ಅಥವಾ ಹಿಂಭಾಗದಲ್ಲಿ ತುಳಸಿಕಟ್ಟೆ ಸ್ಥಾಪಿಸಿರುತ್ತಾರೆ. ಎಲ್ಲಾ ಧಾರ್ಮಿಕ  ಆಚರಣೆಗೂ ತುಳಸಿಯನ್ನು ಬಳಸುತ್ತಾರೆ.

ಉತ್ಥಾನ ದ್ವಾದಶಿ
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. 

ತುಳಸೀ ಕಲ್ಯಾಣ
ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಈ ಮಾಸದಲ್ಲೂ ಹಬ್ಬಗಳ ಸರಮಾಲೆ. ಎಲ್ಲೆಲ್ಲೂ ಸಡಗರ. ಇದಕ್ಕೆ ಮುನ್ನುಡಿ ಬರೆದಿದೆ ಉತ್ಥಾನ ದ್ವಾದಶಿ ಪರ್ವ ಅರ್ಥಾತ್ತುಳಸಿ ವಿವಾಹ.

ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಷ್ಮೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ ಹೀಗೆ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿಯ ವಿವಾಹಕ್ಕೆ ನಾಡಿನಾದ್ಯಂತ ಅದ್ದೂರಿಯ ತಯಾರಿ. ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ, ಕಾರ್ತಿಕ ಶುದ್ಧ ದ್ವಾದಶಿಯಂದು ಆಕೆಯ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ (ಅಂದರೆ ೧೪ ನೇ ತಾರೀಖು ನವೆಂಬರ್ ೨೦೧೩)

ಕೇವಲ ಹಬ್ಬವಲ್ಲ. ಹಬ್ಬದ ಹೆಸರಿನಲ್ಲಿ ಆರೋಗ್ಯ ಕಾಪಾಡುವುದು ಈ ಪರ್ವದ ವಿಶೇಷ. ಈಕೆ ಹಿಂದು ಧರ್ಮೀಯರಿಗೆ ದೈವ ಸ್ವರೂಪಿಯಾಗಿದ್ದರೆ, ಉಳಿದ ಧರ್ಮೀಯರಿಗೆ ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ.

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ಅದಕ್ಕಾಗಿಯೇ ಈ ಹಬ್ಬದ ನೆಪ ಅಷ್ಟೇ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ.

ತುಳಸಿಯ ಪೌರಾಣಿಕ ಹಿನ್ನೆಲೆ
ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.  ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸೀ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸೀ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು.  

ಪೂಜೆ ಹೀಗೆ
ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ಗಿಡಕ್ಕೆ ಮಂಟಪ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳ ಮಂಟಪದಿಂದ ಅಲಂಕರಿಸಿ, ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ತುಳಸಿಯಂತೆ ನೆಲ್ಲಿಕಾಯಿ ಕೂಡ ಅನೇಕ ರೋಗ ನಿರೋಧಕ ಶಕ್ತಿ ಹೊಂದಿದೆ. ಮಲೆನಾಡು ಸೇರಿದಂತೆ ಕೆಲವೆಡೆಗಳಲ್ಲಿ ತುಳಸಿಯ ವಿವಾಹ ನಡೆದ ಮೇಲಷ್ಟೇ ಎಲ್ಲರ ಮನೆಗಳಲ್ಲಿ ಮದುವೆ ಕಾರ್ಯ ನಡೆಯುತ್ತವೆ. ತುಳಸಿ ಮದುವೆಗೆ ಮೊದಲು ಸಂಪ್ರದಾಯಸ್ಥರು ಈಗಲೂ ಮದುವೆ ಕಾರ್ಯವನ್ನು ನೆರವೇರಿಸುವುದಿಲ್ಲ. ಒಟ್ಟಿನಲ್ಲಿ ತುಳಸಿ ಮನುಷ್ಯನ ಬದುಕಿನೊಂದಿಗೆ, ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ.

ತುಳಸಿ ಮಹಿಮೆ 
ತುಳಸಿ ಬಹುಪಯೋಗಿ ಸಸ್ಯ. ತುಳಸಿ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ಪವಿತ್ರ. ಹಾಲಿನ ಸಮುದ್ರದಲ್ಲಿ ಹುಟ್ಟಿದ ತುಳಸಿಯನ್ನು, ಹಾಲಿನಿಂದಲೇ ಪೂಜಿಸಿದರೆ, ಬೇಗನೆ ಪ್ರಸನ್ನಳಾಗಿ ಸಂಪತ್ತು ಅನುಗ್ರಹಿಸುತ್ತಾಳೆಂಬ ವಾಡಿಕೆ ಬಹಳ ಹಿಂದಿನದು. ಶಿವನಿಗೆ ಬಿಲ್ವಪತ್ರೆ ಪ್ರಿಯವಾದಂತೆ, ವಿಷ್ಣುವಿಗೆ ತುಳಸಿ ಬಹುಪ್ರಿಯ. ತುಳಸಿಯಲ್ಲಿ ಬಿಳಿಸುಳಸಿ, ಕಪ್ಪುತುಳಸಿ (ಕೃಷ್ಣತುಳಸಿ) ಮುಂತಾದ ಬಗೆಗಳಿವೆ.  ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ಸೂಕ್ಷ್ಮ ಜೀವಾಣುನಾಶಕ ಗುಣಗಳಿರುವ ತುಳಸಿ ಎಲೆ ವಿಷಮಶೀತ ಜ್ವರದಂತಹ ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. 

ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿರುವುದಿಲ್ಲ. ಮಕ್ಕಳ ನೆಗಡಿ-ಕೆಮ್ಮು ಶೀತಕ್ಕೆ, ಚರ್ಮರೋಗಕ್ಕೆ ಇದು ರಾಮಬಾಣ. ತುಳಸೀರಸದ ನಿಯಮಿತ ಸೇವನೆಯಿಂದ ನಿದ್ರಾಹೀನತೆಯನ್ನು ಹೊಡೆದೊಡಿಸಬಹುದು.  ಮಕ್ಕಳಿರುವ ಮನೆಗೆ ತುಳಸಿ ಅವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಹೌದು. ಅದಕ್ಕೆಂದೇ ಸ್ತ್ರೀಯರಿಗೆ ತುಳಸೀ ಪ್ರದಕ್ಷಿಣಾ, ಪುರುಷರಿಗೆ ತುಲಸೀ ಮಾಲಾಧಾರಣವೆಂದು ಹಿಂದಿನಿಂದಲೂ ಪ್ರತೀತಿಯಿದೆ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ. ತಾಯಿಯಂತೆ ನಮ್ಮೆಲ್ಲರನ್ನೂ ಸಲಹುವ ಈ ‘ಮಾತೆ’ಗೂ ಒಂದು ವಿಶೇಷ ದಿನ ಇರಲೇಬೇಕಲ್ಲವೇ? ಹಾಗೆಯೇ ಆ ವಿಶೇಷ ದಿನದಲ್ಲಾದರೂ ಆಕೆಯ ಉಪಕಾರವನ್ನು ಸ್ಮರಿಸುವ ಗುಣ ನಮ್ಮದಾಗಬೇಕಲ್ಲವೇ? ಆಕೆಯ ಸಾನಿಧ್ಯಕ್ಕೆ ಆ ಒಂದು ದಿನವಾದರೂ ಪ್ರದಕ್ಷಿಣೆ ಹಾಕಿ ನಮ್ಮಲ್ಲಿರುವ ವಿಕಾರಗಳನ್ನು ದೂರ ಮಾಡಿಕೊಳ್ಳಬೇಕಲ್ಲವೇ?

ಬನ್ನಿ ಎಲ್ಲರೂ ಸೇರಿ ತುಳಸಿ ವಿವಾಹದ ಪದ್ದತಿಯನ್ನು ಮತ್ತು ಅದರ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗೋಣ.

ದೀಪಾವಳಿ ವಿಶೇಷಾಂಕ - 2013

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ...
  ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ.  ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿ, ಹಂಡೆಗೆ (ಇಂದು ಬಾಯ್ಲರ್, ಗೀಝರ್) ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.

ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗ, ಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ, ನರಕಾಸುರನ ವಧಿಸಿ, ಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.

ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿ, ಬಾಣ, ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವ, ಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು.   ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ.  ಇನ್ನು ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳನ್ನು ಪೂಜಿಸಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು, ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. ಕಾರ್ತಿಕದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ. ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು, ಗರ್ವಿಷ್ಠನಾಗಿ ಮೆರೆಯುತ್ತಿದ್ದಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ, ಕೇಳಿದೊಡನೆಯೇ ಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ   ದಾನಶೂರನಾದ ಬಲಿ, ಶ್ರೀಮನ್ನಾರಾಯಣನ ಕೃಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲೀಂದ್ರ ಭೂಲೋಕಕ್ಕೆ ಬಂದು ಮೂರೂ ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ.

ಹೀಗಾಗೆ ಅಂದು ಸಂಧ್ಯಾಕಾಲದಲ್ಲಿ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ವಾಮನರೂಪಿಯಾಗಿ ಬಲಿಯನ್ನು ತುಳಿದ ಬಳಿಕ ಪಾತಾಳದ ಪ್ರವೇಶ ದ್ವಾರವನ್ನು ಸ್ವತಃ ತಾನೇ ಕಾಯುವುದಾಗಿ ನಾರಾಯಣ ವರನೀಡುತ್ತಾನೆ. ಹೀಗಾಗಿ ಅಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ರಾಗಿಯ ತೆನೆ, ಹುಚ್ಚಳ್ಳುಹೂವು ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ. (ಈ ಪದ್ಧತಿ ಪಾಂಡವರಿಂದ ನಡೆದು ಬಂದದ್ದೆಂದು ಹೇಳಲಾಗುತ್ತದೆ) ಕಾರ್ತೀಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ದಿನಕ್ಕೆರಡರಂತೆ ದೀಪವನ್ನು ಹೆಚ್ಚಿಸಿ ಹಚ್ಚಿಡುತ್ತಾರೆ. ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತೀಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ.   ಸ್ಥಿತಿವಂತರು ಮನೆಯ ಮುಂದೆ ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಕಾರ್ತಿಕ ಪಾಡ್ಯದಂದೆ ಶ್ರೀಕೃಷ್ಣನು ಕುಂಭದ್ರೋಣದಿಂದ ಗೋಕುಲವನ್ನೂ, ಗೋಪಾಲಕರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕೃತಜ್ಞತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ.  ದೀಪಾವಳಿಯ ಕೊನೆಯ ದಿನವೇ ಯಮ ದ್ವಿತೀಯ. ಅಥವಾ ಭ್ರಾತೃ ದ್ವಿತೀಯ. ಆ ದಿನ ಯಮದೇವನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅವಳಿಂದ ಆತಿಥ್ಯ ಪಡೆದು ಬಂದ ದಿನವೆಂದು ಹೇಳಲಾಗುತ್ತದೆ. ಅಂದು ಸೋದರರು ಎಲ್ಲಿದ್ದರೂ ಸೋದರಿಯರ ಮನೆಗೆ ಹೋಗುತ್ತಾರೆ.

ಉತ್ತರ ಕರ್ನಾಟಕದ ಕಡೆ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಯಮದ್ವಿತೀಯ ಭ್ರಾತೃತ್ವದ ಭಾವನೆಗಳನ್ನು ವೃದ್ಧಿಸಿ, ಮಧುರ ಭಾವನೆಗಳನ್ನು ಬೆಸೆಯಲು, ಬಲಗೊಳಿಸಲು ಪೂರಕವಾಗಿದೆ. ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತೀಕದ ಮಹತ್ವದ ಉದ್ದೇಶ. ಇದುವೆ ಈ ಹಬ್ಬದ ಅಂತರಾರ್ಥ. ಕಾರ್ತೀಕ ಮಾಸದಲ್ಲಿ ಹಲವು ದೇವಾಲಯಗಳಲ್ಲಿ, ಕ್ಷೇತ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.

ಕರ್ನಾಟಕ ರಾಜ್ಯೋತ್ಸವ ವಿಶೇಷ


ನವೆಂಬರ್ ೧, ಕರ್ನಾಟಕ ರಾಜ್ಯೋತ್ಸವ - ಈ ದಿನವು ಕನ್ನಡಿಗರಿಗೆ ವಿಶೇಷವಾದ ದಿನ. ಕನ್ನಡ ನಾಡು, ಸಂಸ್ಕೃತಿಯನ್ನು ಹೊಗಳಿ ಗೌರವಿಸುವ ದಿನವಿದು. 

ಕನ್ನಡದ ವೀರ ಪುತ್ರಪುತ್ರಿಯರೇ, ಭರತ ಮಣ್ಣಿನ ವೀರಪ್ರಜೆಗಳೇ, ಬನ್ನಿ ನಾವೆಲ್ಲರೂ ಸೇರಿ ಹಾಡೋಣ "ಕರ್ನಾಟಕ ರಾಜ್ಯೋತ್ಸವ." ಕಾಡು, ಜಲ ಸಂಪತ್ತು ಬೆಳೆಸಿರುವ ನಾಡಿದು, ಮಲೆನಾಡು, ಆಗುಂಬೆಗಳಂತಹ ಭವ್ಯ ತಾಣವಿದು, ಕನ್ನಡ ಮಾತೆಯ ಪೂಜಿಸಿ ಆರಾಧಿಸುವ ದೇಗುಲವಿದು, ಭರತ ಲೋಕದ ಪ್ರಕೃತಿಯ ಪ್ರೀತಿಯ ಕಣ್ಮಣಿಯಿದು. ಬೇಲೂರು, ಹಳೇಬೀಡುಗಳಂತಹ ಶಿಲ್ಪಗಳ ದೇಗುಲವಿದು, ಸಮುದ್ರಗಳ ಅಲೆಗಳ ಮೇಲೆ ಜೀವನ ನಡೆಸುವ ಬೆಸ್ತರ ನಾಡಿದು, ಕವಿ ಋಷಿಗಳು ಬೆಳೆಸಿ, ನೆಲೆಸಿರುವ ಪುಣ್ಯಕೋಟಿ ಕವನದ, ಕನ್ನಡಿಗರ ಹೋರಾಟದ ಫಲವಿದು "ಕರ್ನಾಟಕ ರಾಜ್ಯೋತ್ಸವ."

ಕನ್ನಡ ನಾಡದೇವಿ ಭುವನೇಶ್ವರಿ. ಕನ್ನಡಿಗರೆಲ್ಲರೂ ಆರಾಧಿಸುವ ಭುವನೇಶ್ವರಿ ದೇವಾಲಯ ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ಐತಿಹಾಸಿಕ ಸ್ಥಳದಲ್ಲಿದೆ. ಒಂದು ಕನ್ನಡ ಸಾಮ್ರಾಜ್ಯ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ. ಮತ್ತೊಂದು ಕನ್ನಡ ಸಿಂಹಾಸನ ಪ್ರತಿಷ್ಠಾಪನಾಚಾರ್ಯರ ಮಠವಿರುವ ಶೃಂಗೇರಿಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಭುವನಗಿರಿಯಲ್ಲಿ. 

ಕನ್ನಡ ತಾಯಿ ಭುವನೇಶ್ವರಿ ದೇವಾಲಯವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ. ನಿಸರ್ಗ ರಮಣೀಯತೆಗೆ ಹೆಸರಾದ ಉತ್ತರ ಕನ್ನಡದ ಮಲೆನಾಡಿನಲ್ಲಿ ಇರುವ ಈ ದೇವಾಲಯ ನಮ್ಮ ನಾಡಿನ ಏಕೈಕ ಭುವನೇಶ್ವರಿ ಮಾತೆಯ ದೇವಾಲಯ.

“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!” ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ ಕರ್ನಾಟಕದ ನೆಲದಲ್ಲಿರುವ ಏಕೈಕ ಕನ್ನಡಾಂಬೆಯ ದೇಗುಲ ಇರುವುದು ನಿಸರ್ಗದ ಸಿರಿ ಸಂಪತ್ತಿನಿಂದ ಕೂಡಿರುವ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಯನ್ನು ತನ್ನೊಡಲಲ್ಲಿ ಲಾಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ.

ಬೆಂಗಳೂರಿನಿಂದ ಸಿದ್ದಾಪುರಕ್ಕಿರುವ ಸರಿಸುಮಾರು ೩೯೦ ಕಿ. ಮೀ. ಅಲ್ಲಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ. ಮೀ.ಬಲ ಬದಿಯಲ್ಲಿ ಒಂದು ವಿಶಾಲವಾದ ಕೆರೆ ಕಂಡುಬರುತ್ತದೆ. ಅದರ ಸಮೀಪದಲ್ಲಿ ಬೆಟ್ಟವೇರಲು ಮೆಟ್ಟಿಲುಗಳಿವೆ. ಕೆರೆಯಿಂದ ಸುಮಾರು ೩೦೦ ಅಡಿಗಳ ಎತ್ತರದಲ್ಲಿ ಭುವನಗಿರಿಯ ಮೇಲೆ ಮಾತೆ ಭುವನೇಶ್ವರಿಯ ದೇವಾಲಯವಿದೆ. ಬೆಟ್ಟವೇರಲು ವಾಹನಗಳಿಗೆ ಕಿರಿದಾದ ರಸ್ತೆಯೂ ಇದೆ.

ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ.

ಪೌರಾಣಿಕ ಹಿನ್ನೆಲೆ: ಇಲ್ಲಿನ ದಟ್ಟ ಕಾನನದಲ್ಲಿ ಭುವನಾಸುರನೆಂಬ ಒಬ್ಬ ರಾಕ್ಷಸನಿದ್ದನಂತೆ. ಆತನ ಮಿತಿಮೀರಿದ ಉಪಟಳದಿಂದ ಜನರು ನೆಮ್ಮದಿಯಿಂದ ಬಾಳಲು ಆಗುತ್ತಿರಲಿಲ್ಲವಂತೆ. ಜನರ ಪ್ರಾರ್ಥನೆಯನ್ನು ಕೇಳಿದ ದುರ್ಗಾಮಾತೆ ಪ್ರತ್ಯಕ್ಷಳಾಗಿ ಆತನನ್ನು ವಧಿಸಲು ಅಣಿಯಾದ ಸಮಯದಲ್ಲಿ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ಕೇಳಿದನಂತೆ. ತಥಾಸ್ತು ಎಂದ ದುರ್ಗಾ ಮಾತೆಯು ಈ ಸ್ಥಳವು ಭುವನಗಿರಿಯೆಂದು ಕರೆಯಲ್ಪಡುವುದು ಮತ್ತು ನಾನು ಈ ಕ್ಷೇತ್ರದಲ್ಲಿ ಭುವನೇಶ್ವರಿಯಾಗಿ ನೆಲೆಸಿ ನಾಡನ್ನು ಕಾಯುತ್ತೇನೆ ಎಂದಳಂತೆ.

ಐತಿಹಾಸಿಕ ಹಿನ್ನೆಲೆ: ವಿವಿಧ ಮೂಲಗಳ ಪ್ರಕಾರ ಬಿಳಗಿಯ ಅರಸರು ಕನ್ನಡ ನುಡಿಯ ಹಾಗೂ ನಾಡಿನ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅವರಿಗೆ ಕನ್ನಡಮಾತೆಗಾಗಿ ಒಂದು ಗುಡಿ ಕಟ್ಟಿಸುವ ಬಯಕೆ ಇತ್ತು. ಬಿಳಗಿಯ ಅರಸರಲ್ಲಿ ಕೊನೆಯವರಾದ ಬಸವೇಂದ್ರ ಈ ದೇವಾಲಯನ್ನು ೧೬೯೨ರಲ್ಲಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ. 

ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವ‌ನ್ನು ಕಾಣಬಹುದು.

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ, ಜಯ ಹೇ ರಸ ಋಷಿಗಳ ಬೀಡೇ
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ, ಕನ್ನಡ ತಾಯಿಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ, ರಾಷ್ಟ್ರಕವಿ ಕುವೆಂಪು

ವಿಜಯ ದಶಮಿ ವಿಶೇಷಾಂಕ - ನಾಡಹಬ್ಬ

"ಓಂಕಾರದ ಎಲ್ಲ ಸದಸ್ಯರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು"

ಹಬ್ಬಗಳ ಆಚರಣೆ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಸಂಸ್ಕೃತಿ ಐಕ್ಯತೆಯನ್ನು ಮೂಡಿಸುವ ಒಂದು ಸರಳ ಸೂತ್ರವಾಗಿದೆ. ಶ್ರೀಮಾನ್ಯ ಬಾಲ ಗಂಗಾಧರ ತಿಲಕರು ನಮ್ಮ ಹಬ್ಬಗಳ ಆಚರಣೆಗೆ ಸಾರ್ವಜನಿಕ ರೂಪ ಕೊಟ್ಟು ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟರು. ಇಂತಹ ಸಂಸ್ಕೃತಿಯ ಪರಿಚಯ ತಮಗೆಲ್ಲರಿಗೂ ಮಾಡಿಕೊಡುವದು ಓಂಕಾರದ ಮುಖ್ಯ ಉದ್ದೇಶ. ಹಾಗಾಗಿ ಪ್ರತಿ ಹಬ್ಬದ ಮೂಲ, ಅಚಾರ ಮತ್ತು ಪದ್ಧತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಮಗಾಗಿ ಇಲ್ಲಿ ಕೊಡಲಾಗುತ್ತಿದೆ.
 
ವಿಜಯ ದಶಮಿಯು ಯಾವಾಗಲೂ ಮಂಗಳಕರವಾದುದು. ಇಂಥ ದಶಮಿ ದಿನ ಮಾಡಿದ ದಾನವು ಕೋಟಿ ಪಾಲು ಪುಣ್ಯವನ್ನು ಕೊಡುತ್ತದೆ. ಪುಣ್ಯವಾದ ದಶಮಿಯು ಮಾನವರಿಗೆ ಜಯ ಕೊಡುವುದರಿಂದ ವಿಜಯದಶಮಿ ಎಂದೇ ಪ್ರಸಿದ್ಧವಾಗಿದೆ.
 
ವಿಜಯ ದಶಮಿಯನ್ನು ಕರ್ನಾಟಕದಲ್ಲಿ ನಾಡಹಬ್ಬ ಎಂದೂ ಕರೆಯುತ್ತಾರೆ, ಇದರರ್ಥ ವಿಜಯದಶಮಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಆದ ಕಾರಣ ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಹಬ್ಬದ ಸಾಂಸ್ಕೃತಿಕ ಪರಂಪರೆ ಮತ್ತು ಜನಪದ ಸಾಹಿತ್ಯವನ್ನು ಅರ್ಥ ಮಾಡಿಕೊಂಡರೆ ಈ ನಾಡಹಬ್ಬದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.  

 

ಜಾನಪದ ಸಾಹಿತ್ಯ ದರ್ಶನ :  

ಬನ್ನಿಯ ಹಬ್ಬ ಹಬ್ಬ ಹರಿದಿನಗಳಲ್ಲಿಯೇಬನ್ನಿ ಹಬ್ಬ’ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದುದು. ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಿಂದ ಆಚರಿಸಲ್ಪಡುವ ಹಬ್ಬವನ್ನು ನವರಾತ್ರಿ, ಮಹಾನವಮಿ, ದಸರಾ, ವಿಜಯದಶಮಿ, ನಾಡಹಬ್ಬವೆಂದೂ, ಉತ್ತರ ಭಾರತದ ಕೆಲವೆಡೆ ಶ್ರೀ ರಾಮ ನವರಾತ್ರಿಯೆಂದೂ ಕರೆಯುತ್ತಾರೆ. ಕರ್ನಾಟಕದಲ್ಲಂತೂ ಹಬ್ಬ ವಿಶೇಷ ಮಹತ್ವ ಪಡೆದಿದೆ. ಬನ್ನಿ ಹಬ್ಬವನ್ನಾಚರಿಸದ ಕನ್ನಡಿಗನಿಲ್ಲವೆಂದೂ ನಡೆದೀತು. ಅರಮನೆಗುರುಮನೆಮಹಾಮನೆಗುಡಿ ಗುಡಿಸಲುಗಳಲ್ಲೆಲ್ಲಾ ಸಡಗರದಿಂದ ಇದನ್ನು ಆಚರಿಸುತ್ತಾರೆ. ಈಗಲೂ ಬನ್ನಿ ಮುಡಿಯಲು ಊರೂರಿಗೊಂದುಬನ್ನಿಗಿಡದ ಕಟ್ಟೆ’ ಗಳಿರುವುದನ್ನು ಕಾಣಬಹುದಾಗಿದೆ. ವಿಜಯನಗರದ ಅರಸರ ಕಾಲಕ್ಕೆ ಇದು ರಾಷ್ಟ್ರೀಯ ಹಬ್ಬವಾಗಿದ್ದುದಕ್ಕೆ ಹಂಪೆಯಲ್ಲುಳಿದಿರುವಮಹಾನವಮಿ ದಿಬ್ಬ’ವೇ ಸಾಕ್ಷಿ. ಮೈಸೂರಿನ ಅರಸರು ಆಚರಿಸುತ್ತಿದ್ದದಸರಾ’ ಹಬ್ಬ ದೇಶವಿದೇಶಗಳಿಂದ ಜನರನ್ನು ಆಕರ್ಷಿಸುವಷ್ಟು ಅದ್ಭುತ ವೈಭವದಿಂದೊಡಗೂಡಿರುತ್ತಿತ್ತು. ಈಗಲೂ ಕರ್ನಾಟಕದಲ್ಲಿವಿಜಯದಶಮಿ’ ಯನ್ನು ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ.
 
ಪೌರಾಣಿಕ ಹಿನ್ನೆಲೆ :
ಯಾವುದೇ ಒಂದು ಹಬ್ಬದ ಆಚರಣೆಗೆ ಪೌರಾಣಿಕಐತಿಹಾಸಿಕ ಸಾಂಪ್ರದಾಯಿಕ ನಂಬಿಕೆಗಳೂ ಕಾರಣವಾಗಿದ್ದು ಅಲ್ಲೆಲ್ಲಾ ನಮ್ಮ ಸಾಂಸ್ಕೃತಿಕ ಪರಂಪರೆ ಅಡಕವಾಗಿರುತ್ತದೆ. ಬನ್ನಿ ಹಬ್ಬಕ್ಕಾದರೂ ಪೌರಾಣಿಕ ಹಿನ್ನಲೆಯಿದ್ದು ಅದನ್ನು ಜಾನಪದ ಬದುಕಿನ ನಿಟ್ಟಿನಲ್ಲಿ ನೋಡೋಣ.
 
) ಪಾಂಡವರು ಪಗಡ್ಯಾಡಿ ಧರ್ಮದಜೂಜಾಡಿ’ ಸೋತು ವನವಾಸಕ್ಕೆ ಹೋಗಬೇಕಾಗುವುದು. ಹೋಗುವ ಪೂರ್ವದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಗಿಡಕ್ಕೆ ತೂಗು ಹಾಕಿ ಹೋಗುವರು. ಬನ್ನಿಗಿಡದಲ್ಲಿ ಮಹಾಕಾಳಿ ವಾಸವಾಗಿದ್ದು ಆಕೆ ಅವುಗಳ ರಕ್ಷಕಗಳಾಗಿರುವಳು.
ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರೂ ಬಂದರೂ ಕೊಡಬೇಡ |
ಹಡದಮ್ಮ ಅರ್ಜುನ ಬಂದರ ಕೊಡಬೇಕ
 
ಹೀಗೆಬನ್ನಿಮಹಾಕಾಳಿ’ ಯನ್ನು ಪಾಂಡವರು ಪ್ರಾರ್ಥಿಸಿರುವರು. ಅವರು ವನವಾಸದಲ್ಲಿ ಕಷ್ಟವನ್ನು ಅನುಭವಿಸದರೆಂಬುದಕ್ಕೆ ಕೆಳಗಿನ ತ್ರಿಪದಿಯೇ ಸಾಕು.
 
ಕಲ್ಲ ಕಡಬ ಮಾಡಿ ಮುಳ್ಳ ಶ್ಯಾವಿಗಿ ಮಾಡಿ
ಬನ್ನಿಯ ಎಲಿಯ ಎಡಿಮಾಡಿ | ಪಾಂಡವರು
ಉಂಡು ಹೋಗ್ಯಾರೋ ವನವಾಸೊ.
 
ಕೇವಲ ಮೂರು ಶಬ್ದಗಳಲ್ಲಿ ಅವರ ವನವಾಸದ ತಾಪತ್ರಯ ಅರ್ಥಪೂರ್ಣವಾಗಿ ಚಿತ್ರಿತಗೊಂಡಿದೆ. ಹಾಗೆ ಊಟ ಮಾಡಿದ ಪಾಂಡವರು ಊಟದ ನಂತರ ತಲಬನ್ನು ಮಾಡಲು ಮರೆಯಲಿಲ್ಲ.
 
ಬನ್ನಿಯ ಗಿಡದಾಗ ಬೆಳ್ಳಿಯ ಗುಡಗಡಿ
ಬಂಗಾರ ಚಿಲುಮಿ ನವರತನೊ | ಪಾಂಡವರು
ಸೇದಿ ಹೋಗ್ಯಾರೋ ವನವಾಸೊ.
 
ಜಾನಪದ ಕವಿ ತಾನು ಅನುಭವಿಸುವ ನೈಜ ಬದುಕಿನಲ್ಲಿಯೇ ಪಾಂಡವರನು ಕಂಡಿದ್ದು ಸಮರ್ಥನೀಯವಾಗಿದೆ. ಮುಂದೆ ಪಾಂಡವರು ತಮ್ಮ ವನವಾಸ-ಅಜ್ಞಾತವಾಸಗಳನ್ನು ಹೆಚ್ಚಾಗಿ ವೀರಾಟರಾಜ್ಯದಲ್ಲಿಯೇ ಕಳೆದರಂತೆ, ಅಂದಿನ ವಿರಾಟನಗರವೇ ಇಂದಿನ ನಮ್ಮ ಹಾನಗಲ್, ಹಾವೇರಿ ಜಿಲ್ಲೆ " ಅವರು ಇದ್ದು ಹೋದ ಗುಹೆಗಳು ಮಿಂದು ಹೋದ ಕೊಳಗಳು ಕರ್ನಾಟಕದಲ್ಲಿಯೇ ಹೆಚ್ಚಾಗಿವೆ. ಆದುದರಿಂದಲೇ ಪಾಂಡವರು ಕನ್ನಡಿಗರಿಗೆ ಅಪರಿಚಿತರಲ್ಲ. ಅತಿಪರಿಚಿತರಾಗಿದ್ದು ಈಗಲೂ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಮುಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಮರಳಿ ತಾವು ತಮ್ಮ ಶಸ್ತ್ರಾಸ್ತ್ರವಿಟ್ಟಿದ್ದ ಬನ್ನಿಗಿಡಕ್ಕೆ ಬಂದು ಮಹಾಕಾಳಿಯನ್ನು ಪೂಜಿಸಿ ತಮ್ಮ ವಸ್ತುಗಳನ್ನು ಪಡೆದು ದಿಗ್ವಿಜಯ ಸಾಧಿಸಿದ ದಿನವೇವಿಜಯದಶಮಿ’ ದಿನವೆಂದು ಕರೆಯಲಾಗಿದೆ. ಅಂದಿನಿಂದಲೂ ಇಂದಿನ ತನಕ ಪಾಂಡವರ ವನವಾಸದ ಹಿನ್ನಲೆಯಲ್ಲಿವಿಜಯದಶಮಿ’ ಆಚರಣೆಗೊಳ್ಳುತ್ತ ಬಂದಿದೆ.
 
) ಶಮೀವೃಕ್ಷ ಎಂದರೆ ಬನ್ನಿಗಿಡ. ಬನ್ನಿಗಿಡದ ಎಲೆಗಳು ಬಂಗಾರಕ್ಕೆ ಸಮವೆಂದೂ, ವಿಜಯದ ಸಂಕೇತವೆಂದೂ, ಪುರಾಣಗಳು ಸಾರುವವಾದ್ದರಿಂದ ಬನ್ನಿ ಮರವನ್ನು ಪೂಜಿಸಿ ಅದರ ಎಲೆಗಳನ್ನು ಮುಡಿಯುವದು ಪವಿತ್ರಕಾರ್ಯವೆಂದು ಭಾವಿಸಿದುದರಿಂದ ಬನ್ನಿ ಹಬ್ಬದಾಚರಣೆ ರೂಢಿಯಲ್ಲಿ ಬಂದಿದೆ. ಪಾಂಡವರಂತೆ ಶ್ರೀರಾಮನು ರಾವಣನನ್ನು ಸಂಹರಿಸಿ ಬನ್ನಿಮರಕ್ಕೆ ಪೂಜೆಗೈದನಂತೆ, ಜಾನಪದರಂತೂ ಬನ್ನಿಗಿಡದ ಬಗೆಗೆ ವಿಶೇಷ ಗೌರವ ತಾಳಿದ್ದಾರೆ. ಅವರು ಬನ್ನಿಗಿಡವನ್ನು ಕಡಿಯುವದಿಲ್ಲ. ಕಡಿದರೂ ಉರುವಲನ್ನಾಗಿ ಉಪಯೋಗಿಸುವದಿಲ್ಲ. ಗಿಡದಿಂದ ಗೋದಲಿಗಂಬವನ್ನಾಗಿಯೋ, ದೇವರಕಂಬವನ್ನಾಗಿಯೋ ಹೊಲದಲ್ಲಿ ಕೂರಿಗೆಯನ್ನಾಗಿಯೊ, ಕಣದಲ್ಲಿ ಮೇಟಿಯನ್ನಾಗಿಯೋ, ಮಾಡುವರು. ಯಾಕೆಂದರೆ ವಸ್ತುಗಳನ್ನು ಯಾರೂ ಕಾಲುಮೆಟ್ಟಿ ಕಾರ್ಯ ನಡೆಸುವಂತಿಲ್ಲ.
 
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಹಾಸಿ
ಮಂಡಿ ಕಟ್ಟಿಸಿದೆ ಬಿಗಬಿಗದು | ಮುತ್ತೈದಿಯ
ಉಡಿಯ ತುಂಬಿಸಿದೆ ಕೂರಿಗ್ಯೊ
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಮಾಡಿ
ಸಣ್ಣ ಸೆಲ್ಲೆದಲೆ ಉಡಿತುಂಬಿ | ಪಾಂಡವರು
ಹೊನ್ನ ಬಿತ್ತ್ಯಾರೊ ಹೊಳಿಸಾಲ
ಬನ್ನಿ ಮೇಟಿಯ ಹೊಡೆದು ಮುನ್ನೂರು ಬಸವಾನೆಕಟ್ಟಿ
ಹಾಜ್ಯಾಡಿ ಹಂತಿ ಹೊಡದೇವೂ | ಬಸವಣ್ಣ
ಕಣದಾನ ಕಂಕಿ ಉಳದಾವ.
 
ಇದಲ್ಲದೇ ಬನ್ನಿಕಂಟಿ ಹೊಲದಲ್ಲಿ ಬೆಳದಿದ್ದರೆ ಹೊನ್ನು ಹುಟ್ಟಿತೆಂದು ಭಾವಿಸಿ ಅದನ್ನು ಸವರಿ ಸರಿಯಾಗಿ ಬೆಳೆಸುವರು. ಹಿರಿಯರ ಸಮಾಧಿ ಮೇಲೆಯೂ ಗಿಡವನ್ನು ಬೆಳೆಸುವರು. ಇಷ್ಟೊಂದು ಪೂಜ್ಯಭಾವನೆ ಬನ್ನಿಗಿಡದ ಬಗೆಗೆ ಅನಾದಿ ಕಾಲದಿಂದಲೂ ಬೆಳೆದು ಬಂದಿದ್ದು ಅದರ ಪತ್ರಿಯನ್ನು ವಿಜಯದಶಮಿಯ ದಿನ ಪರಸ್ಪರ ಮುಡಿಯುವರಾದ್ದರಿಂದಬನ್ನಿ ಹಬ್ಬ’ ಎಂದು ಹೆಸರು ಬಂದಿರುವದಲ್ಲದೆ ಹಬ್ಬದ ಆಚರಣೆಗೆ ಹಿನ್ನಲೆ ಇದೆಲ್ಲಾಗಿದೆ.
 
) ಉತ್ತು-ಬಿತ್ತುವ ಕೆಲಸ ಮುಗಿದು ಬೆಳೆದ ಬೆಳೆ ಮನೆ ಸೇರುವ ಶುಭ ಸಂದರ್ಭಕ್ಕೆ ಮುನ್ನ ರೈತನಿಗೆ ಸ್ವಲ್ಪಕಾಲ ಬಿಡುವಿದ್ದು ಆವಾಗ ಆಚರಿಸುವಮಾನೋಮಿ’ ಜಾನಪದರ ಬದುಕಿನಲ್ಲಿ ಪ್ರಕೃತಿ ಹಾಗೂ ದೈವ ಕುರಿತಾದ ನಂಬಿಕೆಯ ಸಂಪ್ರದಾಯ ಅನುಸರಿಸಿ ಬಂದದ್ದಾಗಿದೆ.
 
) "ದುಷ್ಟನಾದ ಮಹಿಷಾಸುರ ಹಾಗೂ ಅವನ ಕಡೆಯವರ ಚಂಡ ಮುಂಡ ರಕ್ತಬೀಜಾದಿ ದುರುಳ ರಾಕ್ಷಸರನ್ನೆಲ್ಲಾ ಜಗನ್ಮಾತೆಯು ಅಗತ್ಯಕ್ಕೆ ಅನುಸಾರವಾಗಿ ಮಹಾಕಾಳಿ, ದುರ್ಗಾದೇವಿ, ಚಾಮುಂಡೇಶ್ವರಿ ಎಂಬಿತ್ಯಾದಿ ರೂಪಗಳನ್ನು ತಳೆದು ಸಂಹಾರ ಮಾಡಿದ" ಕಾರಣಕ್ಕಾಗಿ ಜನರು ವಿಜಯ ಹೊಂದಿದಂತೆ ದೇವಿಯ ಆರಾಧನೆಯನ್ನು ವಿಜಯದಶಮಿ ಎಂದು ಮಾಡುವರು. ಸಂಗತಿ ಪುರಾಣೋಕ್ತವಾಗಿದೆ.
 
ಹೀಗೆ ಹಲವಾರು "ಹಿನ್ನಲೆಗಳಲ್ಲಿ" ವಿಜಯದಶಮಿಯನ್ನು ವಿವಿಧ ಕಾರಣಗಳಿಂದಾಗಿ ತಾವು ನಂಬಿದಂತೆ ಆಯಾ ಪ್ರಾದೇಶಿಕತೆಗನುಗುಣವಾಗಿ ಆಚರಿಸುವ ಸಂಪ್ರದಾಯ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
 
ಆಶಯ:
ಇಡೀ ಪ್ರಪಂಚವೇ ಶಕ್ತಿ ಪೂಜೆಯನ್ನು ಮಾಡುತ್ತದೆ. ಗ್ರೀಕ್, ರೋಮ, ಚೀನಾ, ಬೆಬಿಲೊನಿಯಾ, ಈಜಿಪ್ತ ಮುಂತಾದ ಹೊರದೇಶಗಳಲ್ಲಿಯೂ ಅವರದೇ ಆದ ಶಕ್ತಿ ದೇವತೆಯ ಪೂಜೆ ನಡೆಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಂತೂ ಶಕ್ತಿಯ ಆರಾಧನೆ ಆನಾದಿ ಕಾಲದಿಂದಲೂ ನಡೆದು ಬಂದಿದೆ. ವೇದ-ಉಪನಿಷತ್ತುಗಳು ಶಕ್ತಿಯ ಪೂಜೆಯನ್ನು ಸಾರುತ್ತವೆ. ಶಕ್ತಿದೇವತೆಯಲ್ಲಿ ಎರಡು ವಿಧ. ಒಂದು ದುಷ್ಟ ಶಕ್ತಿ: ಇನ್ನೊಂದು ಶಿಷ್ಟ ಶಕ್ತಿ. ದುಷ್ಟಶಕ್ತಿಯ ಕಾಟ ತಾಳಲಾರದೇ ಶಿಷ್ಟ ಶಕ್ತಿಯ ಮೊರೆ ಹೋಗುವದು ತೀರಾ ಅನಿವಾರ. ಅದಕ್ಕಾಗಿಯೇ ವಿಜಯದಶಮಿಯಂದು ಶಕ್ತಿದೇವತೆ ಪೂಜೆಗೊಳ್ಳುತ್ತಿದ್ದಾಳೆ "ವಿಜಯದಶಮಿಯು ದುಷ್ಟ ಶಕ್ತಿಯ ಸಂಹಾರ ಆರ್ಥಾತ್ ಶಿಷ್ಟ ಶಕ್ತಿಯ ವಿಜಯದ ಕುರಿತಾದ ಸಂಕೇತಾತ್ಮಕವಾದ ಹಾಗೂ ಸಂತೋಷಾತ್ಮಕವಾದ ಸಡಗರದ ಆಚರಣೆಗಳಿಂದ ಕೂಡಿರುವ ಹಬ್ಬವಾಗಿರುತ್ತದೆ." ಶಕ್ತಿದೇವತೆಯ ಪೂಜೆಯಿಂದ ಪಾಪ ಪರಿಹಾರ, ಕಾರ್ಯಸಿದ್ಧಿ, ಕಲ್ಯಾಣ ಪ್ರಾಪ್ತಿಯುಂಟಾಗುವ ನಂಬಿಕೆ ಹಾಗೂ ಪರಸ್ಪರವಾದ ಪ್ರೀತಿ-ವಿಶ್ವಾಸ ಸ್ನೇಹಗಳು ವೃದ್ಧಿಯಾಗಲೆಂಬಆಶಯ’ಗಳು ಹಬ್ಬದ ಆಚರಣೆಯಲ್ಲಿ ಅಡಕವಾಗಿವೆ.
 
ಆಚರಣೆಯ ವಿಧಿ-ವಿಧಾನಗಳು:
ಆಶ್ವಯುಜ ಶುಕ್ಲ ಪ್ರತಿಪದೆ (ಪಾಡ್ಯ) ಯಿಂದ ಹಿಡಿದು ದಶಮಿಯ ತನಕ ಆಚರಿಸುವ ಹಬ್ಬದಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದಾಗಿ ಮಹಾನವಮಿ ಅಮವಾಸ್ಯೆಯ ನಂತರ ಪ್ರತಿಪದೆ, ದ್ವಿತೀಯಾ, ತೃತೀಯಾಗಳೆಂದು ಮೂರು ದಿನ ರೋಗಾದಾರಿದ್ರ್ಯ-ದುಃಖ ದುಮ್ಮಾನಗಳ ನಿವಾರಣೆಗಾಗಿ ದುರ್ಗಾಪೂಜೆಯನ್ನು ಕೈಕೊಳ್ಳುವರು. ಎರಡನೆಯದಾಗಿ ಚತುರ್ಥಿ, ಪಂಚಮಿ, ಷಷ್ಠಿ ಮೂರು ದಿನ ಸುಖ-ಸಂಪತ್ತು ಅಭಿವೃದ್ಧಿಗೊಳ್ಳಲು ಮಹಾಲಕ್ಷ್ಮೀಯನ್ನು ಪೂಜಿಸುವರು. ಮೂರನೆಯದಾಗಿ ಸಪ್ತಮಿ, ಅಷ್ಟಮಿ, ನವಮಿ, ಮೂರು ದಿನ ವಿದ್ಯೆ-ಬುದ್ಧಿ ಜ್ಞಾನಗಳು ವೃದ್ಧಿಯಾಗಲೆಂದು ಸರಸ್ವತಿಯನ್ನು ಪೂಜಿಸುವರು. ಹೀಗೆ ಮೂರು ಹಂತಗಳಲ್ಲಿ ಶಕ್ತಿ ಪೂಜೆ ಒಂಬತ್ತು ದಿನಗಳವರೆಗೆ ನಡೆಯುವದರಿಂದ ಹಬ್ಬಕ್ಕೆ ನವರಾತ್ರಿ-ಮಹಾನವಮಿ ಎಂದೂ ಕರೆಯುವರು. ನಾಲ್ಕನೆಯದಾಗಿ ಹಬ್ಬದ ಪರಿಸಮಾಪ್ತಿಯೆಂಬಂತೆ ಬರುವ ಹತ್ತನೆಯ ದಿನವೇ ದಶಮಿ. ಅದೇವಿಜಯದಶಮಿ’ ದಿನ ದಶಹರ್ ಎಂದರೆ ಹತ್ತು ರಾತ್ರಿಗಳು ಹಬ್ಬದಾಚರಣೆಯಾಗಿದ್ದುದಸರಾ’ ಎಂಬ ಹೆಸರು ಇದರಿಂದಲೇ ಬಂದಿದೆ. ಅಂದು ದೇವಿಯ ಮೆರವಣೆಗೆ, ಉತ್ಸವ. ಬನ್ನಿಪೂಜೆ ಮುಂತಾದವುಗಳೂ ಜರುಗುವುದರೊಂದಿಗೆ ಹಬ್ಬ ಮುಕ್ತಾಯಗೊಳ್ಳುವುದು. ಕೆಲವು ಕಡೆ ಹತ್ತು ದಿನಗಳಂದು ಮನೆ-ಮಠ-ಮಂದಿರಗಳಲ್ಲಿ "ದೇವಿಯ ಮಹಾತ್ಮೆ" ಕುರಿತಾದ ಪುರಾಣ ಪಠಣ-ಪ್ರವಚನಗಳೂ, ಭಜನೆಗಳೂ ನಡೆಯುತ್ತವೆ.
 
ಹಣ ಇದ್ದುಳ್ಳವರು ಇದನ್ನು ದುಂದಾಗಿಯೂ, ಬಡವರು ಹಿಡಿತದಲ್ಲಿಯೂ, ಕೆಲವೆಡೆ ಸಾಮೂಹಿಕವಾಗಿಯೂ ನವರಾತ್ರಿ ಪೂಜೆಯನ್ನು ಏರ್ಪಡಿಸುವರು. ಪ್ರತಿ ಪದೆಯಿಂದ ದಶಮಿಯ ವರೆಗೂ ಕ್ರಮವಾಗಿ ಆಚರಿಸಲು ಸಾಧ್ಯವಿಲ್ಲದವರು ನವಮಿಯೆಂದು ದೇವಿಪೂಜೆಯನ್ನು, ದಶಮಿಯೆಂದು ಬನ್ನಿಪೂಜೆಯನ್ನು ಮಾಡಿ ಮುಗಿಸುವರು. ಇದನ್ನೆ ನಮ್ಮ ಹಳ್ಳಿಯ ಬದುಕಿನ ಹಿನ್ನೆಲೆಯಲ್ಲಿ ನೋಡೋಣ. " ವಿಜಯದಶಮಿ’ ಯನ್ನು ಹಳ್ಳಿಗರು ಹೆಚ್ಚಾಗಿಮನೋವಿ’ಬನ್ನಿ ಹಬ್ಬ’ ವೆಂದೇ ಕರೆಯುವರು. ಹಬ್ಬ ಬರುತ್ತಿದ್ದಂತೆ ಮಹಾನವಮಿ ಅಮವಾಸ್ಯೆಯ ಮುನ್ನವೇ ಹಬ್ಬದ ತಯಾರಿ ನಡೆದಿರುತ್ತದೆ. ಮನೆಯ ಹೆಣ್ಣುಮಕ್ಕಳನ್ನು ಗಂಡನ ಮನೆಯಿಂದ ಕರೆಸಿಕೊಳ್ಳುತ್ತಾರೆ.
 
ಮಾನೋವಿ ಬಂತಂತ ಹೇಳಿ ನಾ ಕಳಿವೇನಿ
ಕ್ಯಾದಿಗಿ ದಂಡಿ ಹೆಣದೀಣಿ | ಕಂದವ್ವ
ದಸರೇಕ ಹೊಂಟಾರ ಧನಿಯಾರು.
 
ತಂದೆ-ಅಣ್ಣ-ತಮ್ಮ ಯಾರಾಗಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆ ತರುವರು. ಮಗಳು ಮನೆ ತುಂಬಿದ ಮೇಲೆ ಮನೆಯ ಅಲಂಕಾರಕ್ಕೆ ತೊಡಗುವರು. ಇಡೀ ಮನೆಯನ್ನೆಲ್ಲಾ ಸುಣ್ಣ-ಕೆಮ್ಮಣ್ಣುಗಳಿಂದ ಸಾರಿಸಿ. ಎಣ್ಣೆ-ಬಣ್ಣಗಳನ್ನು ಬಳಿಯುವರು. ತಟ್ಟೆ-ಬುಟ್ಟಿಗಳನ್ನು ತೊಳೆದಿಡುವರು. ಹಾಸಿಗೆ-ಹೊದಿಕೆ-ಮೈಲಿಗೆ ಬಟ್ಟಿಗಳೆಲ್ಲಾ ಮಡಿಗೊಳಿಸುವರು.
 
ಮನೆಯ ದೇವರು ಮೈಲಾರಲಿಂಗವಾಗಿದ್ದ ಮನೆಯಲ್ಲಿ ಹೈನವಿದ್ದರೆ ಕೆಲವರು ಪಂಚಮಿಯಿಂದ ನವಮಿಯವರೆಗೆ, ಇನ್ನು ಕೆಲವರು ಸಪ್ತಮಿಯಿಂದ ನವಮಿಯವರೆಗೆ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ದೇವರ ಮುಂದೆ ಮೀಸಲಿಡುವರು. ನವಮಿಯ ದಿನ ಮೀಸಲಿಟ್ಟ ಮೊಸರನ್ನೆಲ್ಲಾ ಕಡಿದು ಬೆಣ್ಣೆಮಾಡಿ, ಅದನ್ನು ಕಾಯಿಸಿ, ತುಪ್ಪ ಬಂದ ಮೇಲೆ ಮೀಸಲು ತುಪ್ಪದಲ್ಲಿಯೇ ಮೈಲಾರ ದೇವರ ದೀವಟಿಗೆ ಉರಿಸುವರು. ದೀವಟಿಗೆ ಹಿಡಿಯುವ ವ್ಯಕ್ತಿ ವಿವಾಹಿತನಾಗಿರಬೇಕು. ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೆ ಮಡಿವಂತನಾಗಿ, ಮಡಿ ಅರಿವೆಯನ್ನು ದೀವಟಿಗೆಗೆ ಸುತ್ತಿ ಮೀಸಲು ತುಪ್ಪವನ್ನು ಉಣಿಸಿ ದೀಪ ಹೊತ್ತಿಸುವರು. ಮನೆಯ ಜಗುಲಿಯಿಂದ ಗ್ರಾಮದೇವರವರೆಗೂ ದೀವಟಿಗೆಯನ್ನು ಉರಿಸುತ್ತ ಹೋಗಿ ಬರುವರು. ದೀವಟಿಗೆ ಹಿಡಿದ ವ್ಯಕ್ತಿ"ಏಳಕೋಟಿ ಏಳಕೋಟಿ.. ಏಳಕೋಟಿಗೊ" ಎಂಬ ಮೈಲಾರ ದೇವರ ಗರ್ಜನೆ ಹೇಳುತ್ತಿರುವನು. ಮನೆ-ಮಂದಿ ನುಡಿಯನ್ನು ಮಾರ‍್ನುಡಿಯುವರು. ದೀವಟಿಗೆಯ ಹಿಂದೆ ಸುಮಂಗಲೆಯ ಕಳಸದಾರತಿ ಇದ್ದೇ ಇರುವದು. ಆಕೆಯೇ ದೀವಟಿಗೆಗೆ ದಾರಿಯಲ್ಲಿ ತುಪ್ಪ ಹಾಕಿ ಉರಿಸುವದಲ್ಲದೇ ದೀವಟಿಗೆ ಹಿಡಿದವರನ್ನು ದೇವರ ಸಮಾನವೆಂದು ಪೂಜಿಸುವಳು. ಇದಕ್ಕೆ " ದೇವರನ್ನು ಹೊರಡಿಸುವದು" ಎಂದೂ ಕರೆಯುತ್ತಾರೆ.
 
ಅದೇ ದಿನ ಮಹಾಲಕ್ಷ್ಮೀಯ ಪೂಜೆಯನ್ನು ಕೆಲವರು ಕೈಕೊಳ್ಳುವರು. ಪೂರ್ಣಕುಂಭ ಕಳಸವನ್ನು ಮಾಡಿ. ಮನೆಯಲ್ಲಿ ತಾವೇ ನಿರ್ಮಿಸಿರುವದೇವರಕಂಬ’ ಅಥವಾಲಕ್ಷ್ಮೀಕಂಬ’ ಕ್ಕೆ ಅದನ್ನಿಟ್ಟು ಹಿಂದಿನ ಹಿರಿಯರ ಹೆಸರಿನಲ್ಲಿ ಹೊಸ ಸೀರೆ-ಕಣವನ್ನೊ ಧೋತರ-ಶಲೈಯನ್ನೊ ತಂದು, ಮಡಿಚಿ ಕುಂಭದ ಮುಂದಿಟ್ಟು, ಆಭರಣಗಳಿಂದ ಅಲಂಕರಿಸಿ ಪೂಜೆಗೈಯ್ಯುವರು. ಐದು ಜನ ಮುತ್ತೈದೆಯರು ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೇ ಮಡಿಯಿಂದ ಬಂದು ಕೈಗೆ ಕಂಕಣಕಟ್ಟಿಕೊಂಡು, ಉಡಿತುಂಬಿ, ದೇವರಿಗೆ ಆರತಿ ಮಾಡಿದ ಮೇಲೆ ಪ್ರಸಾದವನ್ನು ಸ್ವೀಕರಿಸುವರು. ಇದಕ್ಕೆಹಿರೇರ ಹಬ್ಬ’ ವೆಂದೂ ಕರೆಯುವರು.
 
ಅದೇ ದಿನ ಆಯುಧ ಪೂಜೆ ನಡೆಯುವದು. ಕೊಡ್ಲಿ- ಕುಡಗೋಲು, ಬರ್ಚಿ-ಬಂದೂಕ, ಖಡ್ಗ-ಕತ್ತಿಗಳನ್ನೆಲ್ಲಾ ಸ್ವಚ್ಛ ಮಾಡಿ ಜಗುಲಿಯ ಮೇಲಿಟ್ಟು ಪೂಜಿಸುವರು. ಹಿಟ್ಟಿನಗಿರಣಿ, ಟ್ರ್ಯಾಕ್ಟರ್ ಟ್ರಕ್, ಇಂಜಿನ್, ಪಂಪಶೆಟ್, ಸ್ಟ್ರೇಯರುಗಳೇ ಆಗಿರಲಿ. ವೃತ್ತಿ ಸಾಧನಗಳಾದ ಹೊಲಿಯುವ ರಾಟಿ, ಬಡಿಗರ ಸಲಕರಣೆಗಳು. ಹಜಾಮರ ಸಾಧನಗಳು, ಒಡ್ಡರ ಆಯುಧಗಳು, ಹರಿಜನರ ಹರಿತಾಯುಧಗಳು, ವ್ಯಾಪಾರಸ್ಥರ ತೂಕಮಾಪಕಗಳು ವೃತ್ತಿಗಾಗಿ ಅದೇನೆ ವಸ್ತುವಿದ್ದರೂ, ಜಾತಿ ಮತಗಳ ಭಿನ್ನತೆಯಿಲ್ಲದೇ ಎಲ್ಲರೂ ತಂತಮ್ಮ ಆಯುಧಗಳನ್ನು ಪೂಜೆಗೈಯ್ಯುವರಾದ್ದರಿಂದ ಇದಕ್ಕೆಆಯುಧ ಪೂಜೆ’ ಎಂಬ ಹೆಸರೂ ಬಂದಿದೆ. ಇದನ್ನುಖಂಡೆಯ’ ಪೂಜೆಯೆಂದೂ ಕರೆಯುವರು. ಮಾಂಸಾಹಾರಿಗಳು ದಿನ ಖಂಡೆ(ಮಾಂಸ) ಪೂಜೆ ಮಾಡುವದರಿಂಧಖಂಡೆ ಪೂಜೆ’ ಎಂಬ ಹೆಸರು ಬಂದಿರಬಹುದಾಗಿದೆ. ಖಂಡೆ ಪೂಜೆ’ ಯನ್ನು ರಾಜ ಮನೆತನದವರು ಬಲು ವೈಭವದಿಂದ ಆಚರಿಸುತ್ತಿದ್ದು ಅದರಲ್ಲೂ ಮೈಸೂರಿನ ಮಹಾರಾಜರು ಆಚರಿಸುವದಸರಾ’ ಕುರಿತಾದ ಹಬ್ಬದ ವಿವರಣೆಗೆ ಪ್ರತ್ಯೇಕ ಲೇಖನವೇ ಬೇಕಾಗುತ್ತದೆ.
 
ನವಮಿಯ ನಂತರ ಬರುವದೇ ದಶಮಿ. ಬರೀ ದಶಮಿಯಲ್ಲ. ವಿಜಯದಶಮಿ, ದಿನ ಮಧ್ಯಾಹ್ನ ಹಿಂದಿನ ಪೂಜೆ ಪೂಜೆಗೊಂಡ ದೇವರುಗಳು-ಆಯುಧಗಳು ಮತ್ತೆ ಪೂಜೆಗೊಳ್ಳುವವು. ಕಾಲಕ್ಕೆ ಮುಂಗಾರು ಬೆಳೆ ಹೊಡೆ ತೆರೆದು ನಿಂತಿರುವದು. ಅವುಗಳಲ್ಲಿ ಐದು ದಂಟುಗಳನ್ನು ಕಿತ್ತು ತಂದು ಜಗುಲಿಗೇರಿಸಿ ಪೂಜಿಸುವರು. ಇದು ಸಾಂಕೇತಿಕವಾಗಿ ರೈತ ತಾನು ಬೆಳೆದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸುವುದಾಗಿದೆ. ಮನೆದೇವರ ಪೂಜೆಯಾದ ಮೇಲೆ ಊರದೇವರಿಗೆಲ್ಲಾ ತಾವು ಮಾಡಿದ ಅಡಿಗೆಯ ಎಡೆಯನ್ನು ಸಲ್ಲಿಸುವರು. ಹೊತ್ತು ಮುಳುಗಿದ ನಂತರ ಗ್ರಾಮ, ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂಡ್ರಿಸುವರು. ಪಲ್ಲಕ್ಕಿಯ ಹಿಂದೆ ಸುಮಂಗಲೆಯರು ಆರತಿ ಹಿಡಿದು ಹಾಡಲು ಸಿದ್ಧರಾಗಿರುವರು. ಊರು ಗೌಡರ ಹಿರಿತನದಲ್ಲಿ ವಾದ್ಯ-ವೈಭವಗಳೊಂದಿಗೆ ಬನ್ನಿ ಮುಡಿಯಲು ಜನ ಪಲ್ಲಕ್ಕಿಯನ್ನು ಹೊತ್ತು ಬನ್ನಿಮರದ ಕಟ್ಟೆಗೆ ಬರುವರು. ಇದರ ಜೊತೆಗೆ ತಮ್ಮ ಮನೆಯಲ್ಲಿ ಪೂಜಿಸಿದ್ದ ದಂಟುಗಳನ್ನು ಜನ ತಂದು ಬನ್ನಿಗಿಡದ ಸುತ್ತಲೂ ಏರಿಸಿಡುವರು. ವಾಲೀಕಾರರು ಆರಿಗಿಡದ ತಪ್ಪಲನ್ನು ತಂದು ಅಲ್ಲಿಯೇ ಇಟ್ಟಿರುವರು. ಗ್ರಾಮದೇವರ ಪೂಜಾರಿ ಬನ್ನಿ ಮಹಾಕಾಳಿಯನ್ನಲ್ಲದೇ ಉತ್ಸವ ಮೂರ್ತಿಯನ್ನು ಪೂಜಿಸುವನು. ಸುಮಂಗಲೆಯರು ಆರತಿ ಬೆಳಗುವರು. ಗೌಡರು ತಮ್ಮೂರಿನ ಸೌಖ್ಯ ಸಂಪತ್ತನ್ನು ಸಾರಿ ಅದು ಮುಂದಿನ ದಿನಗಳಲ್ಲಿಯೂ ನೆಲೆಸಿರುವಂತೆ ಅನುಗ್ರಹಿಸಲು ದೇವರನ್ನು ಪ್ರಾರ್ಥಿಸಿ, ದೈವದ ಪರವಾಗಿ ಮೊದಲು ದೇವರಿಗೆ ಬನ್ನಿ ಮುಡಿಸುವರು. ದೇವರು ಮರಳಿ ಅದೇ ವೈಭವದಿಂದ ಗುಡಿ ಸೇರುವದು. ನಂತರವೇ ಬನ್ನಿಕೊಡುವದು ವಿಧಿವತ್ತಾಗಿ ನಡೆಯುವದು.
 
ಇನ್ನು ಕೆಲಕಡೆ ಹೀಗೆ ದೇವರನ್ನು ಗುಡಿಯಿಂದ ಹೊರತಂದು ತಮ್ಮೂರಿನ ಸೀಮೆಯನ್ನು ನೆರೆಯೂರಿನ ಸೀಮೆಯನ್ನು ಪ್ರವೇಶಿಸಿ ಮರುಳುವ ಪದ್ದತಿಯೂ ಇದ್ದು ಇದಕ್ಕೆ "ಸೀಮೋಲ್ಲಂಘನ" ಎಂದು ಕರೆಯುವರು. ಹಿಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಕೌರವ ರಾಜ್ಯದ ಸೀಮೆಯನ್ನು ಉಲ್ಲಂಘಿಸಿ ಅವರೊಂದಿಗೆ ಕಾದಾಡಿ, ವಿಜಯಿಗಳಾಗಿ ರಾಜ್ಯಗಳಿಸಿದುದರ ಸಂಕೇತವಾಗಿ ರೀತಿಯ ಆಚರಣೆ ರೂಢಿಯಲ್ಲಿ ಬಂದಿದೆ. ಒಂದೂರಿನವರು ವಿಜಯದಶಮಿಯ ದಿನ ಮತ್ತೊಂದೂರಿನ ಸೀಮೆ ತಲುಪಿ ಊರವರಿಂದ ಪಾರಾಗಿ ಬರುವದು ಸಾಹಸದ ಮಾತಾಗಿದ್ದು ಒಂದು ರೀತಿಯಲ್ಲಿ ಇದು ರಾಜಕೀಯ ವಿಜಯವೂ ಆಗಿದೆ. ದಿನ ಸೀಮೆಯ ಉಲ್ಲಂಘನ ಬಲು ಕುತೂಹಲಕರವಾಗಿ ಜರಗುತ್ತದೆ.
 
ಬನ್ನಿಗಿಡದ ಸುತ್ತಲೂ ಇಟ್ಟಿರುವ ಆರಿತಪ್ಪಲು ಹಾಗೂ ದಂಟುಗಳಿಗಾಗಿ ಜನರ ನೂಕು ನುಗ್ಗಾಟ ಪ್ರಾರಂಭವಾಗುವದು. ಆರಿತಪ್ಪಲನ್ನು ಬನ್ನಿಯೊಂದಿಗೆ ಸೇರಿಸಿ ಮುಡಿಯುವರು. ಬನ್ನಿಗಿಡದಡಿ ಪೂಜೆಗೊಂಡ ದಂಟನ್ನು ತಂದು ಬರಡು ಆಕಳು-ಎಮ್ಮೆಗಳ ಮೇಲೆ ಬಡಿಯುವದಲ್ಲದೇ ಅದನ್ನು ಅವುಗಳಿಗೆ ತಿನ್ನಿಸುವರು. ಹೀಗೆ ಮಾಡುವದರಿಂದ ಅವು ಗಬ್ಬಾಗುವ (ಗರ್ಭಧರಿಸುವ) ವೆಂಬ ನಂಬಿಕೆಯಿದೆ.
 
ಬನ್ನಿ ಹಾಗೂ ಆರಿತಪ್ಪಲನ್ನು ಸಂಪಾದಿಸಿ ಅವು ಬಂಗಾರಕ್ಕೆ ಸಮವೆಂದು ಭಾವಿಸಿ ಅವುಗಳ ಒಂದೆಲೆ ಸಹ ಕೆಳಗೆ ಬೀಳದಂತೆ ಕಾಳಜಿವಹಿಸಿ, ಮೊದಲು ಊರಿನ ಹಿರಿ-ಕಿರಿ-ಗಂಡು-ಹೆಣ್ಣು ದೇವರುಗಳಿಗೆಲ್ಲಾ ಅರ್ಪಿಸುವರು. ನಂತರ ಮಠದ ಸ್ವಾಮಿಗಳಿಗೆ, ಜಂಗಮರ ಮನೆಗಳಿಗೆ ತಿರುಗಿ. ಬನ್ನಿಯೊಂದಿಗೆ ಕಾಸಿನ ಕಾಣಿಕೆಯನ್ನು ಸಲ್ಲಿಸುವರು. ನಂತರ ಮನೆ ಮಂದಿಗೆ ಬನ್ನಿ ಸಲ್ಲಿಸುವರು. ತವರಿಗೆ ಬಂದ ತಂಗಿಯೊಬ್ಬಳು ತನ್ನಣ್ಣ ಬನ್ನಿ ಕೊಡಲು ಬಂದಾಗ ಮಧುರ ಬಾಂಧವ್ಯ ಬೆಳೆಸುವ ಮಹಾದಾಸೆಯುಳ್ಳವಳಾಗಿ ಹಾಡುವ ನುಡಿ ಬಲು ಸೊಗಸಾಗಿದೆ.
 
ಬನ್ನಿ ಮುಡಿಯುದು ಬಂತು ಬಂಗಾರ ಕೊಡುವುದು ಬಂತು
ಬಂದ ನನಕಾಲ ಹಿಡದಾನ | ನನ್ನಣ್ಣ
ಬಂಗಾರ ಮಾಲ ನನಗಿರಲಿ
 
ಆಮೇಲೆ ಕಂಡಕಂಡವರು ಕಂಡಕಂಡವರಿಗೆಲ್ಲ ಜಾತಿ-ಮತ-ವಯಸ್ಸು-ಲಿಂಗ ಭೇದವಿಲ್ಲದೆಯೇ ಬನ್ನಿಕೊಡುವ ಕಾರ್ಯ ಎಡೆಬಿಡದೆ ಮಧ್ಯರಾತ್ರಿವರೆಗೂ ಸಾಗುವದುನಾವು-ನೀವು ಬಂಗಾರದಾಂಗಿರೂನ್ರಿ’ ಎಂಬ ಸಮವಯಸ್ಕರ ಸ್ನೇಹಭಾವ, ‘ದೌಡ ಹತ್ತ ಮಕ್ಳ ಹಡಿ’ ಎಂಬ ಹಿರಿಯರ ಆಶೀರ್ವಾದ, ‘ ಇರ್ಲಿ ಇರ್ಲಿ’ ಎಂದು ಬಾಗಿದವರಿಗೆ ಹೇಳುವ ಗಣ್ಯರ ಸೌಜನ್ಯತೆ-ಒಟ್ಟಿನಲ್ಲಿ ದಿನ ಹಳ್ಳಿಗೆ ಹಳ್ಳಿಯೇ ಒಳ್ಳೆಯದಲ್ಲಿ ಹಾಡು-ಆಟಗಳೂ ನಡೆಯುವವು. ಬನ್ನಿ ಹಬ್ಬದ ಮಹತ್ವ ಕುರಿತಾದ ಯುವತಿಯರ ಕೋಲಾಟದ ಪದವೊಂದು ಇಂತಿದೆ.
 
ಬನ್ನಿ ಮುಡಿಯುನ ಬಾರ ಕೋಲು ಕೋಲ |
ಚಿನ್ನ ತರವುನ ಬಾರ ಕೋಲು ಕೋಲ || ||
 
ಊರ ಸೀಮೆಯ ದಾಟಿಮ ಕಾಡ ಗಡಿಯನು ಸೇರಿ
ಕಾಡ ಸಂಪತ್ತ ತರಬನ್ನಿ || ಕೋಲು ಕೋಲ || ||
 
ಬೆಳೆದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ನಿನ್ನ
ನಾಡ ಸಂಪತ್ತ ಬೆರೆ ಬನ್ನಿ || ಕೋಲು ಕೋಲ || ||
 
ಅರಸನ ಅಂಗಳಕ, ಸರಸ ರಂಗ ಹೊಯ್ದು
ಹೊರಸಿ ತಂದಾರ ಸಿರಿ ಬನ್ನಿ || ಕೋಲು ಕೋಲ || ||
 
ದೇವ ದೇವರ ಬನ್ನಿ, ದೇವ ದೈವದ ಬನ್ನಿ
ನಾವು ಮುಡಿವೂದು ನಮ ಬನ್ನಿ || ಕೋಲು ಕೋಲ || ||
 
ಹಡೆದ ತಾಯಿಗೆ ಬನ್ನಿ, ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮಬನ್ನಿ || ಕೋಲು ಕೋಲ || ||
 
ಚಿನ್ನದ ಕೈಗಡಗ, ಚನ್ನೇರು ಇಟಗೊಂಡು
ಚಿನ್ನಧಾಭಾರಣ ನಡ ಬಾಗಿ || ಕೋಲು ಕೋಲ || ||
 
ಗೆಜ್ಜಿ ಹೆಜ್ಜೀ ಹಾಕಿ, ಗುಜ್ಜೇರು ಕುಣಿದಾರ
ವಜ್ಜರ ವಡ್ಯಾಣ ಘಿಲ ಘಿಲ || ಕೋಲ ಕೋಲ || ||
 
ನಾವು ಕುಣಿಯುಣ ಬನ್ನಿ, ಹ್ಯಾಂವ ಮರೆಯುಣ ಬನ್ನಿ
ಜೀವ ಒಂದಾಗಿ ಇರಬನ್ನಿ || ಕೋಲು ಕೋಲ || ||
 
ಇಂದ ಮುಡಿಯುವ ಬನ್ನಿ, ಮುಂದೆ ಮಗ ಹೊನ್ನಾಗಿ
ಕುಂದಣದಾರೂತಿ ಬೆಳಗೂದಕ || ಕೋಲು ಕೋಲ || ||
 
) ಬನ್ನಿ ಮುಡಿಯುವ ದಿನ ಪವಿತ್ರವಾದ ದಿನವಾಗಿದ್ದು ಅಂದು ಯಾವುದೇ ಕಾರ್ಯರಂಭಕ್ಕೂ ಶುಭ ದಿನವೆನಿಸಿದೆ. ಮನೆಕಟ್ಟಲು ತಳಪಾಯ, ಹೊಸಮನೆ ವೇಶ, ಹೊಲ-ಮನೆ ಖರೀದಿ, ವ್ಯಾಪಾರ- ವ್ಯವಹಾರ ಪ್ರಾರಂಭಕ್ಕೆ ದಿನವನ್ನೆ ವಿಶೇಷವಾಗಿ ಆಯ್ಕೆ ಮಾಡುವರು.
 
ಮೇಲಿನಂತೆ ಹಳ್ಳಿಗರು ಬನ್ನಿ ಹಬ್ಬವನ್ನು ಆಚರಿಸುವರಾದರು ಇನ್ನೂ ಕೆಲಕಡೆಗಳಲ್ಲಿ ಆಯಾ ಊರುಗಳ ಪರಿಸರ ಹಾಗೂ ಸಾಂಪ್ರದಾಯಿಕ ಪದ್ಧತಿಗಳನ್ನು ಸಾರವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಆಚರಿಸಲಾಗುತ್ತದೆ.