ತುಳಸಿ ವಿವಾಹ ವಿಶೇಷಾಂಕ - ೨೦೧೩

|| ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಹಾಗೂ ಗೌರವ ಸ್ಥಾನವಿದೆ. ಭಾರತದಲ್ಲಿ ಪ್ರತಿಯೊಂದು ಮನೆಯ ಮುಂಭಾಗ ಅಥವಾ ಹಿಂಭಾಗದಲ್ಲಿ ತುಳಸಿಕಟ್ಟೆ ಸ್ಥಾಪಿಸಿರುತ್ತಾರೆ. ಎಲ್ಲಾ ಧಾರ್ಮಿಕ  ಆಚರಣೆಗೂ ತುಳಸಿಯನ್ನು ಬಳಸುತ್ತಾರೆ.

ಉತ್ಥಾನ ದ್ವಾದಶಿ
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. 

ತುಳಸೀ ಕಲ್ಯಾಣ
ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಈ ಮಾಸದಲ್ಲೂ ಹಬ್ಬಗಳ ಸರಮಾಲೆ. ಎಲ್ಲೆಲ್ಲೂ ಸಡಗರ. ಇದಕ್ಕೆ ಮುನ್ನುಡಿ ಬರೆದಿದೆ ಉತ್ಥಾನ ದ್ವಾದಶಿ ಪರ್ವ ಅರ್ಥಾತ್ತುಳಸಿ ವಿವಾಹ.

ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಷ್ಮೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ ಹೀಗೆ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿಯ ವಿವಾಹಕ್ಕೆ ನಾಡಿನಾದ್ಯಂತ ಅದ್ದೂರಿಯ ತಯಾರಿ. ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ, ಕಾರ್ತಿಕ ಶುದ್ಧ ದ್ವಾದಶಿಯಂದು ಆಕೆಯ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ (ಅಂದರೆ ೧೪ ನೇ ತಾರೀಖು ನವೆಂಬರ್ ೨೦೧೩)

ಕೇವಲ ಹಬ್ಬವಲ್ಲ. ಹಬ್ಬದ ಹೆಸರಿನಲ್ಲಿ ಆರೋಗ್ಯ ಕಾಪಾಡುವುದು ಈ ಪರ್ವದ ವಿಶೇಷ. ಈಕೆ ಹಿಂದು ಧರ್ಮೀಯರಿಗೆ ದೈವ ಸ್ವರೂಪಿಯಾಗಿದ್ದರೆ, ಉಳಿದ ಧರ್ಮೀಯರಿಗೆ ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ.

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ಅದಕ್ಕಾಗಿಯೇ ಈ ಹಬ್ಬದ ನೆಪ ಅಷ್ಟೇ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ.

ತುಳಸಿಯ ಪೌರಾಣಿಕ ಹಿನ್ನೆಲೆ
ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.  ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸೀ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸೀ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು.  

ಪೂಜೆ ಹೀಗೆ
ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ಗಿಡಕ್ಕೆ ಮಂಟಪ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳ ಮಂಟಪದಿಂದ ಅಲಂಕರಿಸಿ, ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ತುಳಸಿಯಂತೆ ನೆಲ್ಲಿಕಾಯಿ ಕೂಡ ಅನೇಕ ರೋಗ ನಿರೋಧಕ ಶಕ್ತಿ ಹೊಂದಿದೆ. ಮಲೆನಾಡು ಸೇರಿದಂತೆ ಕೆಲವೆಡೆಗಳಲ್ಲಿ ತುಳಸಿಯ ವಿವಾಹ ನಡೆದ ಮೇಲಷ್ಟೇ ಎಲ್ಲರ ಮನೆಗಳಲ್ಲಿ ಮದುವೆ ಕಾರ್ಯ ನಡೆಯುತ್ತವೆ. ತುಳಸಿ ಮದುವೆಗೆ ಮೊದಲು ಸಂಪ್ರದಾಯಸ್ಥರು ಈಗಲೂ ಮದುವೆ ಕಾರ್ಯವನ್ನು ನೆರವೇರಿಸುವುದಿಲ್ಲ. ಒಟ್ಟಿನಲ್ಲಿ ತುಳಸಿ ಮನುಷ್ಯನ ಬದುಕಿನೊಂದಿಗೆ, ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ.

ತುಳಸಿ ಮಹಿಮೆ 
ತುಳಸಿ ಬಹುಪಯೋಗಿ ಸಸ್ಯ. ತುಳಸಿ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ಪವಿತ್ರ. ಹಾಲಿನ ಸಮುದ್ರದಲ್ಲಿ ಹುಟ್ಟಿದ ತುಳಸಿಯನ್ನು, ಹಾಲಿನಿಂದಲೇ ಪೂಜಿಸಿದರೆ, ಬೇಗನೆ ಪ್ರಸನ್ನಳಾಗಿ ಸಂಪತ್ತು ಅನುಗ್ರಹಿಸುತ್ತಾಳೆಂಬ ವಾಡಿಕೆ ಬಹಳ ಹಿಂದಿನದು. ಶಿವನಿಗೆ ಬಿಲ್ವಪತ್ರೆ ಪ್ರಿಯವಾದಂತೆ, ವಿಷ್ಣುವಿಗೆ ತುಳಸಿ ಬಹುಪ್ರಿಯ. ತುಳಸಿಯಲ್ಲಿ ಬಿಳಿಸುಳಸಿ, ಕಪ್ಪುತುಳಸಿ (ಕೃಷ್ಣತುಳಸಿ) ಮುಂತಾದ ಬಗೆಗಳಿವೆ.  ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ಸೂಕ್ಷ್ಮ ಜೀವಾಣುನಾಶಕ ಗುಣಗಳಿರುವ ತುಳಸಿ ಎಲೆ ವಿಷಮಶೀತ ಜ್ವರದಂತಹ ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. 

ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿರುವುದಿಲ್ಲ. ಮಕ್ಕಳ ನೆಗಡಿ-ಕೆಮ್ಮು ಶೀತಕ್ಕೆ, ಚರ್ಮರೋಗಕ್ಕೆ ಇದು ರಾಮಬಾಣ. ತುಳಸೀರಸದ ನಿಯಮಿತ ಸೇವನೆಯಿಂದ ನಿದ್ರಾಹೀನತೆಯನ್ನು ಹೊಡೆದೊಡಿಸಬಹುದು.  ಮಕ್ಕಳಿರುವ ಮನೆಗೆ ತುಳಸಿ ಅವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಹೌದು. ಅದಕ್ಕೆಂದೇ ಸ್ತ್ರೀಯರಿಗೆ ತುಳಸೀ ಪ್ರದಕ್ಷಿಣಾ, ಪುರುಷರಿಗೆ ತುಲಸೀ ಮಾಲಾಧಾರಣವೆಂದು ಹಿಂದಿನಿಂದಲೂ ಪ್ರತೀತಿಯಿದೆ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ. ತಾಯಿಯಂತೆ ನಮ್ಮೆಲ್ಲರನ್ನೂ ಸಲಹುವ ಈ ‘ಮಾತೆ’ಗೂ ಒಂದು ವಿಶೇಷ ದಿನ ಇರಲೇಬೇಕಲ್ಲವೇ? ಹಾಗೆಯೇ ಆ ವಿಶೇಷ ದಿನದಲ್ಲಾದರೂ ಆಕೆಯ ಉಪಕಾರವನ್ನು ಸ್ಮರಿಸುವ ಗುಣ ನಮ್ಮದಾಗಬೇಕಲ್ಲವೇ? ಆಕೆಯ ಸಾನಿಧ್ಯಕ್ಕೆ ಆ ಒಂದು ದಿನವಾದರೂ ಪ್ರದಕ್ಷಿಣೆ ಹಾಕಿ ನಮ್ಮಲ್ಲಿರುವ ವಿಕಾರಗಳನ್ನು ದೂರ ಮಾಡಿಕೊಳ್ಳಬೇಕಲ್ಲವೇ?

ಬನ್ನಿ ಎಲ್ಲರೂ ಸೇರಿ ತುಳಸಿ ವಿವಾಹದ ಪದ್ದತಿಯನ್ನು ಮತ್ತು ಅದರ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗೋಣ.