ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ... ಓಂ ಶಾಂತಿ, ಶಾಂತಿ ಶಾಂತಿಃ
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿ, ಹಂಡೆಗೆ (ಇಂದು ಬಾಯ್ಲರ್, ಗೀಝರ್) ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.
ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗ, ಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ, ನರಕಾಸುರನ ವಧಿಸಿ, ಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.
ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿ, ಬಾಣ, ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವ, ಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು. ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ. ಇನ್ನು ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳನ್ನು ಪೂಜಿಸಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು, ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. ಕಾರ್ತಿಕದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ. ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು, ಗರ್ವಿಷ್ಠನಾಗಿ ಮೆರೆಯುತ್ತಿದ್ದಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ, ಕೇಳಿದೊಡನೆಯೇ ಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ ದಾನಶೂರನಾದ ಬಲಿ, ಶ್ರೀಮನ್ನಾರಾಯಣನ ಕೃಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲೀಂದ್ರ ಭೂಲೋಕಕ್ಕೆ ಬಂದು ಮೂರೂ ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ.
ಹೀಗಾಗೆ ಅಂದು ಸಂಧ್ಯಾಕಾಲದಲ್ಲಿ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ವಾಮನರೂಪಿಯಾಗಿ ಬಲಿಯನ್ನು ತುಳಿದ ಬಳಿಕ ಪಾತಾಳದ ಪ್ರವೇಶ ದ್ವಾರವನ್ನು ಸ್ವತಃ ತಾನೇ ಕಾಯುವುದಾಗಿ ನಾರಾಯಣ ವರನೀಡುತ್ತಾನೆ. ಹೀಗಾಗಿ ಅಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ರಾಗಿಯ ತೆನೆ, ಹುಚ್ಚಳ್ಳುಹೂವು ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ. (ಈ ಪದ್ಧತಿ ಪಾಂಡವರಿಂದ ನಡೆದು ಬಂದದ್ದೆಂದು ಹೇಳಲಾಗುತ್ತದೆ) ಕಾರ್ತೀಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ದಿನಕ್ಕೆರಡರಂತೆ ದೀಪವನ್ನು ಹೆಚ್ಚಿಸಿ ಹಚ್ಚಿಡುತ್ತಾರೆ. ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತೀಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ. ಸ್ಥಿತಿವಂತರು ಮನೆಯ ಮುಂದೆ ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಕಾರ್ತಿಕ ಪಾಡ್ಯದಂದೆ ಶ್ರೀಕೃಷ್ಣನು ಕುಂಭದ್ರೋಣದಿಂದ ಗೋಕುಲವನ್ನೂ, ಗೋಪಾಲಕರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕೃತಜ್ಞತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ. ದೀಪಾವಳಿಯ ಕೊನೆಯ ದಿನವೇ ಯಮ ದ್ವಿತೀಯ. ಅಥವಾ ಭ್ರಾತೃ ದ್ವಿತೀಯ. ಆ ದಿನ ಯಮದೇವನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅವಳಿಂದ ಆತಿಥ್ಯ ಪಡೆದು ಬಂದ ದಿನವೆಂದು ಹೇಳಲಾಗುತ್ತದೆ. ಅಂದು ಸೋದರರು ಎಲ್ಲಿದ್ದರೂ ಸೋದರಿಯರ ಮನೆಗೆ ಹೋಗುತ್ತಾರೆ.
ಉತ್ತರ ಕರ್ನಾಟಕದ ಕಡೆ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಯಮದ್ವಿತೀಯ ಭ್ರಾತೃತ್ವದ ಭಾವನೆಗಳನ್ನು ವೃದ್ಧಿಸಿ, ಮಧುರ ಭಾವನೆಗಳನ್ನು ಬೆಸೆಯಲು, ಬಲಗೊಳಿಸಲು ಪೂರಕವಾಗಿದೆ. ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತೀಕದ ಮಹತ್ವದ ಉದ್ದೇಶ. ಇದುವೆ ಈ ಹಬ್ಬದ ಅಂತರಾರ್ಥ. ಕಾರ್ತೀಕ ಮಾಸದಲ್ಲಿ ಹಲವು ದೇವಾಲಯಗಳಲ್ಲಿ, ಕ್ಷೇತ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.