ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.
ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನು-ಅಣ್ಣಯ್ಯ
ಮಣ್ಣೆ ಲೋಕದಲಿ ಬೆಲೆಯಾದ್ದು
ಎಂಬ ನಾನ್ನುಡಿಯಂತೆ ಮಣ್ಣು ಬದುಕಿನ ಮೂಲವೆಂಬ ಸಂಗತಿಯನ್ನು ಎತ್ತಿ ತೋರಲಾಗಿದೆ. ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ. ಭೂ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಗೌರವಿಸಿ, ಪೂಜಿಸುವ ಉತ್ತರ ಕರ್ನಾಟಕದ ರೈತ ಸಮೂಹದ ಪಾಲಿಗೆ ಮಹತ್ವದ ಹಬ್ಬವೆಂದೇ ಕರೆಯಲ್ಪಸುವ ನಾಗರ ಪಂಚಮಿ ಸಂಭ್ರಮಾಚರಣೆಗೆ ಬರದ ಕಾರ್ಮೋಡ ಕವಿದಿದೆ.
ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ಶ್ರಾವಣ ನಾಗಪ್ಪನ ಪೂಜೆಯ ಕಾಲ ದ್ರಾವಿಡರಿಂದ ಪ್ರಾರಂಭವಾದ ಪದ್ಧತಿ ಇದಾಗಿದ್ದರೂ ಆರ್ಯ ದ್ರಾವಿಡ ಸಂಸ್ಕೃತಿ ಸಂಕರಗೊಂಡ ಮೇಲೆ ಈ ನಾಗಪೂಜೆ ಸಾರ್ವತ್ರಿಕವೆನಿಸಿದೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲ್ಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ಕಾರಣ ಶ್ರೀ ವಿಷ್ಟು ಶೇಷತಾಯಿ, ಶಿವ ಸರ್ಪ ಭೂಷಣ, ಭೂಮಿಯನ್ನು ನೆತ್ತಿಯ ಮೇಲೆ ಹ್ತೊತವ ಆದಿಶೇಷ. ಗಣಪತಿಯ ಹೊಟ್ಟೆಯ ನಡುಕಟ್ಟು ನಾಗದೇವ.
ನಾಗರ ಪಂಚಮಿ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.
ಇಂದು ನಾಗಪೂಜೆ ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಪ್ರಾಚೀನ ಅರಸು ಮನೆತನಗಳು ನಾಗನಿಗೆ ಗೌರವ ನೀಡಿವೆ. ಕ್ರಿ.ಶ 2ನೆಯ ಶತಮಾನದಲ್ಲಿ ಚಟುವಂಶದ ಶಿವಸ್ಕಂದ ನಾಗಶ್ರೀಯಿಂದ ರಚಿತವಾದ ನಾಗಪ್ರತಿಮೆ ಅಂದಿನ ಕಾಲದ ನಾಗದೇವನ ಮಹತ್ವಕ್ಕೆ ಸಾಕ್ಷಿಯೆನಿಸಿದೆ. ನಾಗನಿಕಾ, ನಾಗಮಲಿಕಾ, ನಾಗಶ್ರೀ ಎಂಬ ಸ್ತ್ರೀ ನಾಮಗಳು ಅಂದಿನ ನಾಗೋಪಾಸನೆಯನ್ನು ಸೂಚಿಸುವವಂತಿವೆ. ಇಂದು ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖತೆಯಿದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹುಟ್ಟು ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹಬ್ಬ ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ಜನಪದ ಕಥೆಯೊಂದು ಈ ಬಗೆಗೆ ಹೇಳುತ್ತದೆ.
ಹಿನ್ನಲೆ: ಒಕ್ಕಲಿಗನೊಬ್ಬ ರಂಟೆ ಹೊಡೆಯುತ್ತಿದ್ದಾಗ ಅದರ ಕುಡಕ್ಕೆ ಸಿಕ್ಕು ಹಾವಿನ ಮರಿಗಳೆಲ್ಲ ಸತ್ತು ಹೋದದ್ದರಿಂದ ತಾಯಿ ಹಾವು ರೊಚ್ಚಿಗೆದ್ದು ಅಂದಿನ ರಾತ್ರಿ ಆ ಒಕ್ಕಲಿಗನ ಮನೆಯ ಮಂದಿಯನ್ನೆಲ್ಲ ಕಚ್ಚಿಕೊಂದು ಹಾಕಿದರೂ ಅದರ ರೋಷ ಶಮನವಾಗದೆ ಹೋದಲ್ಲಿ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳನ್ನು ಕೊಲ್ಲಲ್ಲು ಅತ್ತ ಹೊರಟಿತು. ಅದೇ ಹೊತ್ತಿಗೆ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಹಾಲೆರೆಯುತ್ತಿದ್ದುದನ್ನು ಕಂಡ ನಾಗಿಣಿಯ ರೊಚ್ಚು ತಕ್ಕಮಟ್ಟಿಗೆ ಶಾಂತವಾಯಿತು. ಅದು ತಾನು ಒಕ್ಕಲಿಗನ ಮನೆಯಲ್ಲಿ ಮಾಡಿದ ಕೇಡನ್ನು ಹೇಳಲು, ಆಕೆ ಬೋರಾಡಿ ಅತ್ತು ತನ್ನ ತವರವರನ್ನೆಲ್ಲ ಬದುಕಿಸೆಂದು ಬೇಡಿಕೊಂಡಳು. ಆ ನಾಗಿಣಿಗೆ ಕರುಣೆ ಹುಟ್ಟಿ ಒಕ್ಕಲಿಗನ ಮನೆಗೆ ಬಂದು ಎಲ್ಲರ ವಿಷವನ್ನು ಮರಳಿ ಹೀರಿ ಬದುಕಿಸಿದ್ದರಿಂದ ಅವರೆಲ್ಲ ನಾಗಿಣಿಯನ್ನು ಪೂಜಿಸುತ್ತ ಬಂದರೆಂಬ ಕಥೆಯಿದೆ. ಅಂದು ಶ್ರಾವಣ ಶುದ್ಧ ಚೌತಿಯಾದ್ದರಿಂದ ಅಂದಿನ ದಿನವನ್ನು ನಾಗ ಚೌತಿ ಎಂಬ ಹೆಸರಿನಿಂದ ಕರೆಯುತ್ತ ಬಂದುದೇ ನಾಗಪೂಜೆಗೆ ಕಾರಣವೆನಿಸಿತು. ಮಗಳ ಈ ಉಪಕಾರದ ದ್ಯೋತಕವಾಗಿಯೇ ಇಂದಿಗೂ ನಾಗಪಂಚಮಿ ಹಬ್ಬಕ್ಕೆ ಮಗಳನ್ನು ತವರಿನವರು ಕರೆತರುವರೆಂದು ಜಾನಪದರು ಹೇಳಿತ್ತಾರೆ.
ಮೂರು ದಿನದ ಹಬ್ಬ: ಮನೆ ಮನೆಗಳಲ್ಲಿ ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ವಿಧವಿಧ ಉಂಡಿ, ಎಳ್ಳುಚಿಗಳಿಗಳನ್ನು ತಯಾರಿಸುತ್ತಾರೆ. ಈ ನಾಗಪಂಚಮಿ ಮೂರು ದಿವಸದ ಹಬ್ಬ. ಮೊದಲನೆಯದಿನ ನಾಗರ ಅಮವಾಸ್ಯೆ ಅಂದರೆ ರೊಟ್ಟಿ ಪಂಚಮಿ, ಎರಡನೆಯ ದಿನ ನಾಗಚೌತಿ, ಮೂರನೆಯ ದಿನ ನಾಗರ ಪಂಚಮಿ. ನಾಗರ ಅಮವಾಸ್ಯೆಯ ದಿನ ಹೆಣ್ಣು ಮಕ್ಕಳು ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು. ಮನೆ ಮಂದಿಯೆಲ್ಲ ಕರಕಿ ಪತ್ರಿಯಿಂದ ನಾಗದೇವನಿಗೆ ಹಾಲನೆರೆಯುತ್ತ ದೇವರ ಪಾಲು, ದಿಂಡರ ಪಾಲು, ಸಮಸ್ತ ಬಳಗದವರ ಪಾಲನ್ನು ಸಮರ್ಪಣೆ ಮಾಡುವರು. ನಾಗದೇವನಿಗೆ ಹಿಡಿದ ಎಡೆಯನ್ನು ಹೆಣ್ಣುಮಕ್ಕಳು ಉಣ್ಣ ಬಾರದೆಂಬ ಪ್ರತೀತಿ ಜನಪದರಲ್ಲಿದೆ. ನಾಗರ ಪಂಚಮಿ ಹಬ್ಬದಂದು ಚಿಕ್ಕ ಮಕ್ಕಳಿಗೆ ಸಿಹಿ, ಹೊಸ ಬಟ್ಟೆ, ಜೋಕಾಲಿಯಾಟದ ಹರ್ಷವಾದರೆ ವಾರಿಗೆಯ ಗೆಳತಿಯರಿಗೆ ಸಂಪೂರ್ಣ ಸ್ವಾತಂತ್ರ್ಯ ಒಟ್ಟುಗೂಡಿ ನಾಗಪ್ಪನಿಗೆ ಹಾಲನೆರೆಯುವುದು, ತಮ್ಮ ಸುಖ ದುಖ:ಗಳನ್ನು ಗೆಳತಿಯರಲ್ಲಿ ವಿನಿಯೋಗಿಸಿಕೊಳ್ಳವಲ್ಲಿ ಇದೊಂದು ಉತ್ತಮ ಅವಕಾಶ.
ನಾಗರ ಪಂಚಮಿ ಹಬ್ಬ ಮುಗಿಸಿ ಹೆಣ್ಣು ಮಕ್ಕಳು ಗಂಡನ ಮನೆಗೆ ತೆರಳಬೇಕೆಂದರೆ ಮನಸ್ಸಿಲ್ಲ. ಗೆಳತಿಯರು ಅವಳನ್ನು `ಸಣ್ಣ ಸೋಮವಾರ ತನಕ ಅಣ್ಣ ಹೇಳಿದಂಗ ಕೇಳು~ ಎಂದು ಬುದ್ದವಾದ ಹೇಳಿದರೆ, ಗಂಡನ ಮನೆಯ ಕಟ್ಟುಕರಾರಿನ ಮೂಲಕ ಹಬ್ಬಕ್ಕಾಗಿ ತಂಗಿಯನ್ನು ಕೆರೆತಂದ ಅಣ್ಣ ಅವಳನ್ನು ಸಕಾಲಕ್ಕೆ ಮರಳಿ ಕಳಿಸಬೇಕಲ್ಲವೆ. ತವರಿಗೆ ಬಂದ ಹೆಣ್ಣು ಮಕ್ಕಳಿಗೆ ಕೊಡುಗೆಯಾಗಿ ಸೀರೆ ಮುಂತಾದವುಗಳನ್ನು ಉಡುಗೊರೆಯಾಗಿ ಕೊಟ್ಟು ಅಣ್ಣ ಅವಳನ್ನು ಮರಳಿ ಕಳಿಸಿ ಬರುವ ಸಂಪ್ರದಾಯವಿದೆ. ನಾಗಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂಬ ಭಾವನೆ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ. ಹೀಗೆ ಜಾನಪದ ಹಬ್ಬಗಳು ಹಳ್ಳಿಗರ ಬದುಕಿಗೆ ಹೊಸ ಪ್ರೇರಣೆಯನ್ನೋದಗಿಸುವ ಶಕ್ತಿಗಳಾಗಿವೆ.
ತುಳುನಾಡಿನ ನಾಗಾರಾಧನೆ. ತುಳುನಾಡಿನಲ್ಲಿ ನಾಗನಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇಲ್ಲಿ ತಿಂಗಳಿಗೊಮ್ಮೆ, ಪಂಚಮಿ ದಿವಸದಂದು ತಂಬಿಲ ಸೇವೆ ನಡೆಸುತ್ತಾರೆ. ಅಂತೆಯೇ ವರ್ಷಕ್ಕೊಮ್ಮೆ ನಾಗರಪಂಚಮಿಯ ದಿನದಂದು ಬಹಳ ವಿಜೃಂಬಣೆಯಿಂದ ಆಚರಿಸುವುದು ಇಲ್ಲಿನ ರೂಡಿ. ಅಂತೆಯೇ ಇಲ್ಲಿ ಪ್ರತೀ ಮನೆ/ಕುಟುಂಬಕ್ಕೊಂದು ನಾಗನ ಗುಡಿ (ನಾಗನ ಕಟ್ಟೆ)ಗಳಿರುವುದನ್ನು ಕಾಣಬಹುದು. ಪಂಚಮಿಯ ದಿನದಂದು ಕಟ್ಟೆಯನ್ನು ಶೃಂಗರಿಸಿ ನಾಗನ ಮೂರ್ತಿಯನ್ನು ಶುಚಿಗೊಳಿಸಿ, ಇದಕ್ಕೆ ಹಾಲಾಭಿಷೇಕ, ಸೀಯಾಳಾಭಿಷೇಕ, ಅರಶಿನಾಭಿಷೇಕ, ಕೊನೆಗೆ ಕಳಸಾಭಿಷೇಕ ಮಾಡುತ್ತಾರೆ. ಬಳಿಕ ನಾಗಪ್ರಿಯವಾದ ಹಿಂಗಾರವನ್ನಿಟ್ಟು ಜೊತೆಗೆ ಅರಶಿನದ ಉಂಡೆಯನ್ನು ನಾಗ ಪ್ರತಿಮೆಯ ಹೆಡೆಯ ಮೇಲಿರಿಸಿ ಪೂಜಿಸುವುದು ಇಲ್ಲಿನ ಪ್ರತೀತಿ. ಪೂಜೆಯ ಬಳಿಕ ಮನೆಯಲ್ಲಿ ವಿವಿಧ ಖಾಧ್ಯದೊಂದಿಗೆ, ತುಳುನಾಡ ಮಂಜಲ್ದ ಇರೆತ್ತ ಅಡ್ಯೆ(ಅರಶಿನ ಗಟ್ಟಿ) ತುಂಬಾನೇ ಫೇಮಸ್. ಈ ವೇಳೆ ಜೀವಂತ ನಾಗ ಕಾಣಿಸಿಕೊಡರೆ, ಸಾಕ್ಷಾತ್ ನಾಗ ದೇವರು ಭಕ್ತಿಗೆ ಪ್ರತ್ಯಕ್ಷರಾದರೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ತುಳುನಾಡು ನಾಗಾರಾಧನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತದೆ. ನಾಗದೋಷಗಳ ನಂಬಿಕೆ ನಾಗ ಸಂತತಿಗಳ ನಾಶ ಮಾಡಿದರೆ, ಅವುಗಳ ಶಾಪದಿಂದ ನಾಶಗೈದ ವ್ಯಕ್ತಿಗೆ ಸಂತಾನ ಪ್ರಾಪ್ತಿಯಾಗದು. ಸಂತಾನ ವೃದ್ಧಿಸಿದರೂ ಅವರು ಸರಿ ಇಲ್ಲದಿರುವರು. ಕೌಟುಂಬಿಕ ಕಲಹದಿಂದ ನೆಮ್ಮದಿ ಶಾಂತಿ ಲಭಿಸದು. ಇದನ್ನು ಕಾಳಸರ್ಪದೋಷವೆನ್ನುತ್ತಾರೆ. ಇದು ನಾಗ ಕುಟುಂಬಕ್ಕೆ ಕೊಟ್ಟ ತೊಂದರೆಯಿಂದ, ನಮ್ಮ ಕುಟುಂಬಕ್ಕೆ ತಗಲುವ ಶಾಪ. ಇನ್ನೂ ಚರ್ಮ ಸಂಬಂಧಿ ಖಾಯಿಲೆಗಳು ಈ ದೋಷದಿಂದ ಬರುವುದು.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ಹೆಚ್ಚಿನ ಆದ್ಯತೆ ಹಾಗೂ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಇನ್ನು ಹಬ್ಬವೆಂದರೆ ಭಕ್ಷ್ಯ, ಭೋಜನಕ್ಕೇನು ಕಡಿಮೆಯೇ. ರೊಟ್ಟಿಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ಜನ ಹಬ್ಬಕ್ಕೆಂದು ಹಿಂದಿನ ದಿನವೇ ವಿಶೇಷವಾಗಿ ಸಜ್ಜೆ ಹಾಗೂ ಕಡಕ್ ರೊಟ್ಟಿಗಳನ್ನು ಮಾಡುತ್ತಾರೆ (ಹಬ್ಬದ ದಿನ ರೊಟ್ಟಿ ಸುಡುವಂತಿಲ್ಲ). ಜತೆಗೆ ಬದನೆ ಎಣಗಾಯಿ, ಕಾಳು ಪಲ್ಯ, ಉಸುಳಿ, ಪಂಚಮಿ ಉಂಡೆ, ಬಾಣದೊಂದಿಗೆ ವಿವಿಧ ಬಗೆಯ ಚಟ್ಟಿಗಳ ಸಾಲೇ ತಯಾರು. ತಂಬಿಟ್ಟು, ಶೇಂಗಾ, ಎಳ್ಳು, ಪುಠಾಣಿ, ಚುರುಮುರಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್, ಲಡಗಿ, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪೊಳೆ, ಬಾದುಷಾ, ಮಾದ್ಲಿ, ಮಂಡಗಿ ಹೀಗೆ ಅನೇಕ ಸಿಹಿ ಇರಲೇಬೇಕು. ಸಿಹಿ ತಿಂದು ಬೇಸರವಾದರೆ ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿ, ಬಡಂಗ, ಖಾರದಾಣಿ, ಖಾರದ ಉಸುಳಿ, ಖಾರದ ಎಳ್ಳು, ಅರಳಿಟ್ಟು, ಅರಳಿನ ಜೋಳವು ಸಿದ್ಧವಾಗಿರುತ್ತದೆ.