ವೈಶಾಖ ಶುಕ್ಲ ತೃತೀಯದಂದು ಅಕ್ಷಯ ತೃತೀಯಾ ಎಂದು ಹೆಸರು. ಇದು ವರ್ಷದ ಮೂರೂವರೇ ಪುಣ್ಯ ಮುಹೂರ್ತಗಳಲ್ಲಿ ಒಂದಾಗಿದೆ. ಈ ದಿನ ಹತ್ತು ಹಲವು ಹೊಸ-ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ.
ಹಿಂದುಗಳಿಗೆ ಪವಿತ್ರವಾದ ಮೂರೂವರೆ ಶುಭ ಮುಹೂರ್ತಗಳೆಂದರೆ ಯುಗಾದಿ, ಅಕ್ಷಯ ತೃತೀಯಾ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ. ಈ ದಿವಸ ಮಾಡುವ ಶುಭಕಾರ್ಯಗಳಿಗೆ ಪಂಚಾಂಗ ಅಥವಾ ಮುಹೂರ್ತ ನೋಡುವ ಅವಶ್ಯಕತೆ ಇರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಈ ದಿವಸ ಸೂರ್ಯ ಮತ್ತು ಚಂದ್ರ ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದುವುದರಿಂದ ಈ ದಿನವಿಡೀ ಶುಭದಾಯಕ ಆಗಿರುತ್ತದೆ. ಈ ದಿವಸ ಸೂರ್ಯೋದಯಕ್ಕೆ ತೃಥಿಯ ತಿಥಿಯಿದ್ದು ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಉತ್ತಮ. ಅಲ್ಲದೇ ಅಂದು ಬುಧವಾರವಾಗಿದ್ದರೆ ಅತ್ಯಂತ ಶುಭವಾಗಿರುತ್ತದೆ. ನಮ್ಮ ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತು-ಬಿತ್ತುವುದಕ್ಕೂ ಅಕ್ಷಯ ತದಿಗೆ ಪುಣ್ಯ ಮುಹೂರ್ತ. ಈ ದಿನದಂದು ಯಾವುದೇ ಕೆಲಸ ಪ್ರಾರಂಭ ಮಾಡಿದರೂ ಅಥವಾ ಹೊಸದನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎಂದು ನಂಬಿಕೆ.
ವೈಶಾಖೇ ಶುಕ್ಲ ಪಕ್ಷೇತು ತೃತೀಯಾ ರೋಹಿಣೀಯುತಾ
ವಿನಾಪಿ ರೋಹಿಣೀ ಯೋಗಾತ್ ಪುಣ್ಯಕೋಟಿಪ್ರದಾ ಸದಾ
ಎಂಬ ನಿರ್ಣಯ ಸಿಂಧುವಿನ ಮಾತು ಗಮನಾರ್ಹ.
ಈ ದಿನದಂದು ಜನರು ಚಿನ್ನಾಭರಣಗಳನ್ನು, ವಾಹನಗಳನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಂಪ್ರದಾಯ. ಈ ದಿನ ನಾವು ಏನೇ ಖರೀದಿಸಿದರೂ ಅದು ನಮಗೆ ಬಹಳ ಅದೃಷ್ಟ ಹಾಗೂ ಮತ್ತಷ್ಟು ಖರೀದಿಸುವ ಯೋಗ ಹಾಗೂ ಅವಕಾಶವನ್ನು ತರುತ್ತದೆ. ಈ ದಿನವು ಗೃಹ ಪ್ರವೇಶಕ್ಕೆ ಬಹಳ ಸೂಕ್ತವಾಗಿದೆ. ಈ ಮುಹೂರ್ತದಲ್ಲಿ ಮದುವೆಯಾದರೆ ಅದು ಸಂಸಾರದಲ್ಲಿ ಒಳ್ಳೆಯ ಹೊಂದಾಣಿಕೆ ಹಾಗೂ ಅದೃಷ್ಟವನ್ನು ತರುತ್ತದೆ.
ಭಾರತೀಯರು ಆಚರಿಸುವ ಹಿಂದೂ ಹಬ್ಬಗಳಲ್ಲಿ ಯುಗಾದಿ ನಂತರದ ಸ್ಥಾನ ಅಕ್ಷಯ ತೃತೀಯಕ್ಕೆ ಸಲ್ಲುತ್ತದೆ. ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ ಕುರಿತು ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾ ಸುದಿನವಾಗಿದೆ.
ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನತೆಯಿಲ್ಲದ್ದು, ಸಮೃದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರೆಯ ಪ್ರತೀಕ ಎಂಬೆಲ್ಲ ಅರ್ಥಗಳಿವೆ. ಆದ್ದರಿಂದಲೇ ಈ ದಿನವಸ ಹೊಸ ಶುಭಕಾರ್ಯಗಳ ಪ್ರಾರಂಭ, ಗೃಹಪ್ರವೇಶ, ಅಕ್ಷರಾಭ್ಯಾಸ, ಹೊಸ ಉದ್ಯಮ, ವ್ಯಾಪಾರ, ವ್ಯವಹಾರಗಳ ಪ್ರಾರಂಭ ಉಪನಯನ, ವಿವಾಹ, ಹಣ ಹೂಡಿಕೆ, ಬಂಗಾರದ ಖರೀದಿ, ದಾನಕಾರ್ಯ, ಪೂಜೆ, ಪುನಸ್ಕಾರಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.
ಈ ದಿವಸ ಮಾಡಿದ ಯಾವುದೇ ಸತ್ಕಾರ್ಯ, ಸಮಾರಂಭ, ಖರೀದಿಸಿದ ಬಂಗಾರ, ಆಚರಿಸಿದ ಪೂಜೆ-ಪುನಸ್ಕಾರ, ಜಪ-ತಪ, ದಾನ-ಧರ್ಮಗಳಿಗೆ ಅಕ್ಷಯಫಲ ಪ್ರಾಪ್ತಿ ಎಂದು ಹೇಳಲಾಗಿದೆ. ಅಂದು ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯಾ ತಿಥಿಯ ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂದು ಶಾಸ್ತ್ರಗಳು ಹೇಳುತ್ತವೆ.
ಸನಾತನ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳಿಗೆ ಬಹಳ ಮಹತ್ವವಿದೆ. ಧರ್ಮವು ಕರ್ತವ್ಯ, ಆಧ್ಯಾತ್ಮಿಕತೆಯನ್ನು, ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷ, ಆಕಾಂಕ್ಷೆಗಳನ್ನು, ಮೋಕ್ಷ ಈ ಭೌಮ ಬಂಧನದಿಂದ ಮುಕ್ತನಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೂ ಒಂದರ ಪ್ರಾರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲಾ ರೀತಿಯಿಂದಲೂ ಅನುಕೂಲಕರವಾದ ಶುಭದಿವಸ ಈ ಅಕ್ಷಯ ತೃತೀಯ.
ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗೂ ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ. ಈ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗು ಸಮೃದ್ಧಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತದೆ.
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ. ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ|
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ|
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ|
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ||
ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ. ಆದುದರಿಂದ ಋಷಿಗಳು ಇದನ್ನು ಅಕ್ಷಯ ತೃತೀಯಾ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ.
ಸ್ನಾನದಾನಾದಿ ಧರ್ಮಕಾರ್ಯಗಳು: ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಯಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆ ಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ಸತ್ಪಾತ್ರೇ ದಾನವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ಸತ್ಪಾತ್ರೇ ದಾನವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮ ಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.
ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭೂಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭೂಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
ಅಕ್ಷಯತೃತೀಯಾ ಪರಮ ಮಂಗಳಕರವಾದ ದಿನ.
ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯಾ ದಿವಸ ಅಕ್ಷಯ ತೃತೀಯಾ. ಈದಿನದಲ್ಲಿ ಮಾಡುವ ಪುಣ್ಯಕೆಲಸಗಳೆಲ್ಲ ಹೆಚ್ಚು ಫಲ ಕೊಡುತ್ತವೆ. ಅನಂತ ಕೋಟಿ ಬ್ರಹ್ಮಾಂಡದೊಡೆಯ ಶ್ರೀ ಕೃಷ್ಣನಿಗೆ ಗಂಧಲೇಪನ ಮಾಡಿದರೆ ದರ್ಶನ ಮಾಡಿದರೆ ಅನಂತಕೋಟಿ ಪುಣ್ಯ ಅಕ್ಷಯವಾಗುತ್ತದೆ. ಪಾಪ ಕಾರ್ಯ ಮಾಡಿದರೆ ಬರುವ ಪಾಪವೂ ಅಕ್ಷಯವಾಗುತ್ತದೆ. ವಾಸ್ತವಿಕವಾಗಿ ಚೈತ್ರ ಹಾಗೂ ಭಾದ್ರಪದ ಮಾಸಗಳ ಶುದ್ಧ ತೃತೀಯಗಳೂ ಕೂಡಾ ಅಕ್ಷಯ ತೃತೀಯಾಗಳೇ.
ಚೈತ್ರ-ವೈಶಾಖ-ಮಾಘಾನಾಂ ಶುಕ್ಲ ಭಾದ್ರಪದಸ್ಯ ಚ|
ತೃತೀಯಾ ತು ಭವೇತ್ಪುಷ್ಯಾ ದತ್ತಕ್ಷಯ್ಯಫಲಪ್ರದಾ||
ಬುಧವಾರೋ ಯದಾಸ್ಯಾಂ ಸ್ಯಾತು ರೋಹಿಣ್ಯಾ ಶ್ರವಣೇನ ವಾ|
ಯುಕ್ತಾ ಭೂರೀಫಲಃ ಪ್ರೋಕ್ತಃ ಪರ್ವಕಾಲಃ ಸುಯೋಗಜಃ||
ಎಂಬಂತೆ ಚೈತ್ರ ವೈಶಾಖ ಮಾಘ ಭಾದ್ರಪದ ಮಾಸಗಳ ಶುದ್ಧ ತೃತೀಯಾ ತಿಥಿಗಳು ಅಕ್ಷಯ ತೃತೀಯಾ ಎನಿಸಿ ಅಕ್ಷಯ ಫಲವನ್ನು ಕೊಡುತ್ತವಾದರೂ ಬುಧವಾರ, ಶ್ರವಣಾ, ರೋಹಿಣಿ ನಕ್ಷತ್ರ ಇದ್ದ ದಿನದಲ್ಲಿ ಬರುವ ತೃತೀಯಾ ತಿಥಿ ಪರ್ವಕಾಲ ಎನಿಸುತ್ತದೆ. ಈ ದಿನದಲ್ಲಿ ಮಾಡುವ ಸ್ನಾನದಾನಾದಿಗಳು ಅಕ್ಷಯ ಫಲ ಕೊಡುತ್ತವೆ. ಸರ್ವೇಸಾಮಾನ್ಯವಾಗಿ ವೈಶಾಖ ಶುದ್ಧ ತೃತೀಯಾ ತಿಥಿಯು ರೋಹಿಣಿ ಯಾ ಶ್ರವಣಾದಲ್ಲಿ ಬರುವುದರಿಂದ ಹಾಗೂ ಬೇಸಿಗೆಯಲ್ಲಿ ಗಂಧಲೇಪನ ವಿಹಿತವಾದ್ದರಿಂದ ಈ ಮಾಸದ ಅಕ್ಷಯ ತದಿಗೆ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ವೈಶಾಖ ಅಕ್ಷಯ ತದಿಗೆಯ ದಿನದಲ್ಲಿ ಉತ್ತಮ ಕಾರ್ಯಮಾಡಿ ಅನಂತ ಫಲ ಪಡೆದುಕೊಂಡ ಸಾಕಷ್ಟು ನಿದರ್ಶನಗಳು ಪುರಾಣಗಳಲ್ಲಿ ಉಲ್ಲೇಖಗೊಂಡಿವೆಯಾದ್ದರಿಂದ ಇದಕ್ಕೆ ಪ್ರಾಶಸ್ತ್ಯ.
ಪರಸ್ತ್ರೀಸಂಗದೋಷೇಣ ಬಲಂ ವೀರ್ಯಂ ಯಶೋ ಮಮ|
ಅಭವಂ ನಷ್ಟವೀರ್ಯೋಽಹಂ ತೋಷ್ಣಿ ತೇನ ವಸಾಮ್ಯಹಮ್|
ಭವಿಷ್ಯತಿ ಚ ಸಾ ಶಕ್ತಿರ್ವಿದ್ಯಾಯಾಂ ಮಂತ್ರ ಶಾಸ್ತ್ರಯೋಃ|
ಬಲಂ ಧೈರ್ಯಂ ಯಶಶ್ಚೈವ ಯಥಾ ಪೂರ್ವಂ ಭವಿಷ್ಯತಿ||
ತೃತೀಯಾಯಾಶ್ಚ ಮಾಹಾತ್ಯಾತ್ ಭಾಗ್ಯಯುಕ್ತೋಽಮರಾವತೀಮ್|
ವಿವೇಶ ವಿಭವೈಃ ಸಾರ್ಧಂ ಶಂಖತೂರ್ಯಾದಿ ನಿಸ್ವನೈಃ||
ಹೀಗೆ ಸ್ವರ್ಗಾಧಿಪತಿಯಾದ ಸಾಕ್ಷಾತ್ ಇಂದ್ರದೇವರೇ ಕಳೆದು ಕೊಂಡ ತನ್ನ ಇಂದ್ರಪದವಿ ಮತ್ತೆಲ್ಲಾ ವೈಬೋಗಗಳನ್ನು ವೈಶಾಖಾ ಶುದ್ಧ ತೃತೀಯಾದಿವಸ ಪಡೆದುಕೊಂಡು ನನ್ನ ರಾಜಧಾನಿಯಾದ ಅಮರಾವತಿಯನ್ನು ಪ್ರವೇಶಿಸಿದೆ ಎಂಬುದಾಗಿ ಹೇಳಿದ್ದಾರೆ. ವೈಶಾಖ ಮಾಸ ಮಹಾತ್ಮೆಯಲ್ಲಿ ಹೇಳಿರುವ ಹಾಗೆ,
ಸರ್ವಾಶ್ಚ ತಿಥಯಃ ಪುಣ್ಯಾಃ ಮಾಸೇಸ್ಮಿನ್ ಮಾಧವ ಪ್ರಿಯೇ|
ತತ್ರಾಪಿ ಚ ಸಿತೇ ಪಕ್ಷೇ ತೃತೀಯಾ ಚಾಕ್ಷಯಾಹ್ವಯಾ||
ಯಸ್ತಸ್ಯಾಂ ಸ್ನಾನದಾನಾದಿ ಶ್ರದ್ಧಯಾ ಚ ಕರೋತಿ ಚ
ತಸ್ಯ ಪಾಪಸಹಸ್ರಾಣಿ ನಶ್ಯಂತ್ಯೇವ ನ ಸಂಶಯಃ
ಯಸ್ಯಾಂ ಸ್ನಾನಂ ಜಪೋಹೋಮಃ ಸ್ವಾಧ್ಯಾಯಃ ಪಿತೃತರ್ಪಣಂ|
ದಾನಂ ಚ ಕ್ರಿಯತೇ ಕಿಂಚಿತ್ ತತ್ಸರ್ವಂ ಸ್ಯಾದಿಹಾಕ್ಷಯಂ||
ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನಭೂಷಿತಂ |
ವೈಶಾಖಸ್ಯ ಸಿತೇ ಪಕ್ಷೇ ಸಯಾತ್ಯಚ್ಯುತ ಮಂದಿರಮ್ ||
ಗಂಗಾತೋಯೈಃ ನರಃ ಸ್ನಾತ್ವಾ ಮುಚ್ಯತೇ ಸರಕಿಲ್ಬಿಷೈಃ ||
ಹೀಗೆ ಅಕ್ಷಯ ತೃತೀಯಾ ದಿನದಂದು ಮಾಡುವ ಪುಣ್ಯಕಾರ್ಯ, ಸ್ನಾನದಾನಾದಿಗಳು ಅನಂತ ಫಲದಾಯಕವಷ್ಟೇ ಅಲ್ಲದೇ ವಿಷ್ಣುಪ್ರೀತ್ಯರ್ಥವಾಗಿ ಜಪತಪಾದಿ ಹೋಮಗಳಲ್ಲಿ ಯಾವುದಾದರೊಂದನ್ನು ಮಾಡದೇ ಇದ್ದರೂ ಸಹ ಪಾಪ ಸಹಸ್ರಪಟ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಪರ್ವಕಾಲವಾದ್ದರಿಂದ ಪಿತೃಗಳ ಪ್ರೀತ್ಯರ್ಥವಾಗಿ ತಿಲತರ್ಪಣವನ್ನು ಕೊಡುವದರಿಂದ ಪಿತೃಗಳ ಮೋಕ್ಷಕ್ಕೆ ಕಾರಣವಾಗುತ್ತೇವೆ. ವೈಶಾಖ ಮಾಸ ಪರ್ಯಂತರವೂ ಶಾಲಿಗ್ರಾಮಾದಿ ಪರಮಾತ್ಮನ ಪ್ರತಿಮೆಗಳಿಗೆ ಗಂಧಲೇಪನವನ್ನು ಮಾಡಬೇಕು, ಇದು ಸಾಧ್ಯವಾಗದಿದ್ದರೂ ಸಹ ಅಕ್ಷಯ ತೃತೀಯಾದಂದು ಪರಮಾತ್ಮನಿಗೆ ಗಂಧಲೇಪನ ಮಾಡುವುದು ಅಕ್ಷಯವಾಗುವುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನಗಳನ್ನು ಓದಿ