ಅಕ್ಷಯ ತೃತೀಯ - ೨೦೧೪


ವೈಶಾಖ ಶುಕ್ಲ ತೃತೀಯದಂದು ಅಕ್ಷಯ ತೃತೀಯಾ ಎಂದು ಹೆಸರು. ಇದು ವರ್ಷದ ಮೂರೂವರೇ ಪುಣ್ಯ ಮುಹೂರ್ತಗಳಲ್ಲಿ ಒಂದಾಗಿದೆ. ಈ ದಿನ ಹತ್ತು ಹಲವು ಹೊಸ-ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ.

ಹಿಂದುಗಳಿಗೆ ಪವಿತ್ರವಾದ ಮೂರೂವರೆ ಶುಭ ಮುಹೂರ್ತಗಳೆಂದರೆ ಯುಗಾದಿ, ಅಕ್ಷಯ ತೃತೀಯಾ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ. ಈ ದಿವಸ ಮಾಡುವ ಶುಭಕಾರ್ಯಗಳಿಗೆ ಪಂಚಾಂಗ ಅಥವಾ ಮುಹೂರ್ತ ನೋಡುವ ಅವಶ್ಯಕತೆ ಇರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಈ ದಿವಸ ಸೂರ್ಯ ಮತ್ತು ಚಂದ್ರ ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದುವುದರಿಂದ ಈ ದಿನವಿಡೀ ಶುಭದಾಯಕ ಆಗಿರುತ್ತದೆ. ಈ ದಿವಸ ಸೂರ್ಯೋದಯಕ್ಕೆ ತೃಥಿಯ ತಿಥಿಯಿದ್ದು ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಉತ್ತಮ. ಅಲ್ಲದೇ ಅಂದು ಬುಧವಾರವಾಗಿದ್ದರೆ ಅತ್ಯಂತ ಶುಭವಾಗಿರುತ್ತದೆ. ನಮ್ಮ ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತು-ಬಿತ್ತುವುದಕ್ಕೂ ಅಕ್ಷಯ ತದಿಗೆ ಪುಣ್ಯ ಮುಹೂರ್ತ. ಈ ದಿನದಂದು ಯಾವುದೇ ಕೆಲಸ ಪ್ರಾರಂಭ ಮಾಡಿದರೂ ಅಥವಾ ಹೊಸದನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎಂದು ನಂಬಿಕೆ.

ವೈಶಾಖೇ ಶುಕ್ಲ ಪಕ್ಷೇತು ತೃತೀಯಾ ರೋಹಿಣೀಯುತಾ
ವಿನಾಪಿ ರೋಹಿಣೀ ಯೋಗಾತ್ ಪುಣ್ಯಕೋಟಿಪ್ರದಾ ಸದಾ
ಎಂಬ ನಿರ್ಣಯ ಸಿಂಧುವಿನ ಮಾತು ಗಮನಾರ್ಹ.

ಈ ದಿನದಂದು ಜನರು ಚಿನ್ನಾಭರಣಗಳನ್ನು, ವಾಹನಗಳನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಂಪ್ರದಾಯ. ಈ ದಿನ ನಾವು ಏನೇ ಖರೀದಿಸಿದರೂ ಅದು ನಮಗೆ ಬಹಳ ಅದೃಷ್ಟ ಹಾಗೂ ಮತ್ತಷ್ಟು ಖರೀದಿಸುವ ಯೋಗ ಹಾಗೂ ಅವಕಾಶವನ್ನು ತರುತ್ತದೆ. ಈ ದಿನವು ಗೃಹ ಪ್ರವೇಶಕ್ಕೆ ಬಹಳ ಸೂಕ್ತವಾಗಿದೆ. ಈ ಮುಹೂರ್ತದಲ್ಲಿ ಮದುವೆಯಾದರೆ ಅದು ಸಂಸಾರದಲ್ಲಿ ಒಳ್ಳೆಯ ಹೊಂದಾಣಿಕೆ ಹಾಗೂ ಅದೃಷ್ಟವನ್ನು ತರುತ್ತದೆ.

ಭಾರತೀಯರು ಆಚರಿಸುವ ಹಿಂದೂ ಹಬ್ಬಗಳಲ್ಲಿ ಯುಗಾದಿ ನಂತರದ ಸ್ಥಾನ ಅಕ್ಷಯ ತೃತೀಯಕ್ಕೆ ಸಲ್ಲುತ್ತದೆ. ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ ಕುರಿತು ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾ ಸುದಿನವಾಗಿದೆ. 

ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನತೆಯಿಲ್ಲದ್ದು, ಸಮೃದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರೆಯ ಪ್ರತೀಕ ಎಂಬೆಲ್ಲ ಅರ್ಥಗಳಿವೆ. ಆದ್ದರಿಂದಲೇ ಈ ದಿನವಸ ಹೊಸ ಶುಭಕಾರ್ಯಗಳ ಪ್ರಾರಂಭ, ಗೃಹಪ್ರವೇಶ, ಅಕ್ಷರಾಭ್ಯಾಸ, ಹೊಸ ಉದ್ಯಮ, ವ್ಯಾಪಾರ, ವ್ಯವಹಾರಗಳ ಪ್ರಾರಂಭ ಉಪನಯನ, ವಿವಾಹ, ಹಣ ಹೂಡಿಕೆ, ಬಂಗಾರದ ಖರೀದಿ, ದಾನಕಾರ್ಯ, ಪೂಜೆ, ಪುನಸ್ಕಾರಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.

ಈ ದಿವಸ ಮಾಡಿದ ಯಾವುದೇ ಸತ್ಕಾರ್ಯ, ಸಮಾರಂಭ, ಖರೀದಿಸಿದ ಬಂಗಾರ, ಆಚರಿಸಿದ ಪೂಜೆ-ಪುನಸ್ಕಾರ, ಜಪ-ತಪ, ದಾನ-ಧರ್ಮಗಳಿಗೆ ಅಕ್ಷಯಫಲ ಪ್ರಾಪ್ತಿ ಎಂದು ಹೇಳಲಾಗಿದೆ. ಅಂದು ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯಾ ತಿಥಿಯ ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂದು ಶಾಸ್ತ್ರಗಳು ಹೇಳುತ್ತವೆ.

ಸನಾತನ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳಿಗೆ ಬಹಳ ಮಹತ್ವವಿದೆ. ಧರ್ಮವು ಕರ್ತವ್ಯ, ಆಧ್ಯಾತ್ಮಿಕತೆಯನ್ನು, ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷ, ಆಕಾಂಕ್ಷೆಗಳನ್ನು, ಮೋಕ್ಷ ಈ ಭೌಮ ಬಂಧನದಿಂದ ಮುಕ್ತನಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೂ ಒಂದರ ಪ್ರಾರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲಾ ರೀತಿಯಿಂದಲೂ ಅನುಕೂಲಕರವಾದ ಶುಭದಿವಸ ಈ ಅಕ್ಷಯ ತೃತೀಯ.
ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗೂ ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ. ಈ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗು ಸಮೃದ್ಧಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತದೆ.

ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.


ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ. ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.

ಮಹತ್ವ
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ|
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ|
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ|
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ||

- ಮದನರತ್ನ ಅರ್ಥ: (ಶ್ರೀಕೃಷ್ಣನು ಹೇಳುತ್ತಾನೆ)

ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ. ಆದುದರಿಂದ ಋಷಿಗಳು ಇದನ್ನು ಅಕ್ಷಯ ತೃತೀಯಾ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ. 

ಹಬ್ಬವನ್ನು ಆಚರಿಸುವ ಪದ್ಧತಿ.
ಸ್ನಾನದಾನಾದಿ ಧರ್ಮಕಾರ್ಯಗಳು: ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಯಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆ ಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ಸತ್ಪಾತ್ರೇ ದಾನವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ಸತ್ಪಾತ್ರೇ ದಾನವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮ ಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.

ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?
ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭೂಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭೂಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.

ಎಳ್ಳು ತರ್ಪಣೆ ಮಾಡುವ ಪದ್ಧತಿ:
ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.

ಅಕ್ಷಯತೃತೀಯಾ ಪರಮ ಮಂಗಳಕರವಾದ ದಿನ.

ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯಾ ದಿವಸ ಅಕ್ಷಯ ತೃತೀಯಾ. ಈದಿನದಲ್ಲಿ ಮಾಡುವ ಪುಣ್ಯಕೆಲಸಗಳೆಲ್ಲ ಹೆಚ್ಚು ಫಲ ಕೊಡುತ್ತವೆ. ಅನಂತ ಕೋಟಿ ಬ್ರಹ್ಮಾಂಡದೊಡೆಯ ಶ್ರೀ ಕೃಷ್ಣನಿಗೆ ಗಂಧಲೇಪನ ಮಾಡಿದರೆ ದರ್ಶನ ಮಾಡಿದರೆ ಅನಂತಕೋಟಿ ಪುಣ್ಯ ಅಕ್ಷಯವಾಗುತ್ತದೆ. ಪಾಪ ಕಾರ್ಯ ಮಾಡಿದರೆ ಬರುವ ಪಾಪವೂ ಅಕ್ಷಯವಾಗುತ್ತದೆ. ವಾಸ್ತವಿಕವಾಗಿ ಚೈತ್ರ ಹಾಗೂ ಭಾದ್ರಪದ ಮಾಸಗಳ ಶುದ್ಧ ತೃತೀಯಗಳೂ ಕೂಡಾ ಅಕ್ಷಯ ತೃತೀಯಾಗಳೇ.

ಚೈತ್ರ-ವೈಶಾಖ-ಮಾಘಾನಾಂ ಶುಕ್ಲ ಭಾದ್ರಪದಸ್ಯ ಚ|
ತೃತೀಯಾ ತು ಭವೇತ್ಪುಷ್ಯಾ ದತ್ತಕ್ಷಯ್ಯಫಲಪ್ರದಾ||
ಬುಧವಾರೋ ಯದಾಸ್ಯಾಂ ಸ್ಯಾತು ರೋಹಿಣ್ಯಾ ಶ್ರವಣೇನ ವಾ|
ಯುಕ್ತಾ ಭೂರೀಫಲಃ ಪ್ರೋಕ್ತಃ ಪರ್ವಕಾಲಃ ಸುಯೋಗಜಃ||

ಎಂಬಂತೆ ಚೈತ್ರ ವೈಶಾಖ ಮಾಘ ಭಾದ್ರಪದ ಮಾಸಗಳ ಶುದ್ಧ ತೃತೀಯಾ ತಿಥಿಗಳು ಅಕ್ಷಯ ತೃತೀಯಾ ಎನಿಸಿ ಅಕ್ಷಯ ಫಲವನ್ನು ಕೊಡುತ್ತವಾದರೂ ಬುಧವಾರ, ಶ್ರವಣಾ, ರೋಹಿಣಿ ನಕ್ಷತ್ರ ಇದ್ದ ದಿನದಲ್ಲಿ ಬರುವ ತೃತೀಯಾ ತಿಥಿ ಪರ್ವಕಾಲ ಎನಿಸುತ್ತದೆ. ಈ ದಿನದಲ್ಲಿ ಮಾಡುವ ಸ್ನಾನದಾನಾದಿಗಳು ಅಕ್ಷಯ ಫಲ ಕೊಡುತ್ತವೆ. ಸರ್ವೇಸಾಮಾನ್ಯವಾಗಿ ವೈಶಾಖ ಶುದ್ಧ ತೃತೀಯಾ ತಿಥಿಯು ರೋಹಿಣಿ ಯಾ ಶ್ರವಣಾದಲ್ಲಿ ಬರುವುದರಿಂದ ಹಾಗೂ ಬೇಸಿಗೆಯಲ್ಲಿ ಗಂಧಲೇಪನ ವಿಹಿತವಾದ್ದರಿಂದ ಈ ಮಾಸದ ಅಕ್ಷಯ ತದಿಗೆ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ವೈಶಾಖ ಅಕ್ಷಯ ತದಿಗೆಯ ದಿನದಲ್ಲಿ ಉತ್ತಮ ಕಾರ್ಯಮಾಡಿ ಅನಂತ ಫಲ ಪಡೆದುಕೊಂಡ ಸಾಕಷ್ಟು ನಿದರ್ಶನಗಳು ಪುರಾಣಗಳಲ್ಲಿ ಉಲ್ಲೇಖಗೊಂಡಿವೆಯಾದ್ದರಿಂದ ಇದಕ್ಕೆ ಪ್ರಾಶಸ್ತ್ಯ.

ಇಂದ್ರ ಉವಾಚ

ಪರಸ್ತ್ರೀಸಂಗದೋಷೇಣ ಬಲಂ ವೀರ್ಯಂ ಯಶೋ ಮಮ|
ಅಭವಂ ನಷ್ಟವೀರ್ಯೋಽಹಂ ತೋಷ್ಣಿ ತೇನ ವಸಾಮ್ಯಹಮ್|
ಭವಿಷ್ಯತಿ ಚ ಸಾ ಶಕ್ತಿರ್ವಿದ್ಯಾಯಾಂ ಮಂತ್ರ ಶಾಸ್ತ್ರಯೋಃ|
ಬಲಂ ಧೈರ್ಯಂ ಯಶಶ್ಚೈವ ಯಥಾ ಪೂರ್ವಂ ಭವಿಷ್ಯತಿ||
ತೃತೀಯಾಯಾಶ್ಚ ಮಾಹಾತ್ಯಾತ್ ಭಾಗ್ಯಯುಕ್ತೋಽಮರಾವತೀಮ್|
ವಿವೇಶ ವಿಭವೈಃ ಸಾರ್ಧಂ ಶಂಖತೂರ್ಯಾದಿ ನಿಸ್ವನೈಃ||

ಹೀಗೆ ಸ್ವರ್ಗಾಧಿಪತಿಯಾದ ಸಾಕ್ಷಾತ್ ಇಂದ್ರದೇವರೇ ಕಳೆದು ಕೊಂಡ ತನ್ನ ಇಂದ್ರಪದವಿ ಮತ್ತೆಲ್ಲಾ ವೈಬೋಗಗಳನ್ನು ವೈಶಾಖಾ ಶುದ್ಧ ತೃತೀಯಾದಿವಸ ಪಡೆದುಕೊಂಡು ನನ್ನ ರಾಜಧಾನಿಯಾದ ಅಮರಾವತಿಯನ್ನು ಪ್ರವೇಶಿಸಿದೆ ಎಂಬುದಾಗಿ ಹೇಳಿದ್ದಾರೆ. ವೈಶಾಖ ಮಾಸ ಮಹಾತ್ಮೆಯಲ್ಲಿ ಹೇಳಿರುವ ಹಾಗೆ,

ಸರ್ವಾಶ್ಚ ತಿಥಯಃ ಪುಣ್ಯಾಃ ಮಾಸೇಸ್ಮಿನ್ ಮಾಧವ ಪ್ರಿಯೇ|
ತತ್ರಾಪಿ ಚ ಸಿತೇ ಪಕ್ಷೇ ತೃತೀಯಾ ಚಾಕ್ಷಯಾಹ್ವಯಾ||
ಯಸ್ತಸ್ಯಾಂ ಸ್ನಾನದಾನಾದಿ ಶ್ರದ್ಧಯಾ ಚ ಕರೋತಿ ಚ
ತಸ್ಯ ಪಾಪಸಹಸ್ರಾಣಿ ನಶ್ಯಂತ್ಯೇವ ನ ಸಂಶಯಃ
ಯಸ್ಯಾಂ ಸ್ನಾನಂ ಜಪೋಹೋಮಃ ಸ್ವಾಧ್ಯಾಯಃ ಪಿತೃತರ್ಪಣಂ|
ದಾನಂ ಚ ಕ್ರಿಯತೇ ಕಿಂಚಿತ್ ತತ್ಸರ್ವಂ ಸ್ಯಾದಿಹಾಕ್ಷಯಂ||
ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನಭೂಷಿತಂ |
ವೈಶಾಖಸ್ಯ ಸಿತೇ ಪಕ್ಷೇ ಸಯಾತ್ಯಚ್ಯುತ ಮಂದಿರಮ್ ||
ಗಂಗಾತೋಯೈಃ ನರಃ ಸ್ನಾತ್ವಾ ಮುಚ್ಯತೇ ಸರಕಿಲ್ಬಿಷೈಃ ||

ಹೀಗೆ ಅಕ್ಷಯ ತೃತೀಯಾ ದಿನದಂದು ಮಾಡುವ ಪುಣ್ಯಕಾರ್ಯ, ಸ್ನಾನದಾನಾದಿಗಳು ಅನಂತ ಫಲದಾಯಕವಷ್ಟೇ ಅಲ್ಲದೇ ವಿಷ್ಣುಪ್ರೀತ್ಯರ್ಥವಾಗಿ ಜಪತಪಾದಿ ಹೋಮಗಳಲ್ಲಿ ಯಾವುದಾದರೊಂದನ್ನು ಮಾಡದೇ ಇದ್ದರೂ ಸಹ ಪಾಪ ಸಹಸ್ರಪಟ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಪರ್ವಕಾಲವಾದ್ದರಿಂದ ಪಿತೃಗಳ ಪ್ರೀತ್ಯರ್ಥವಾಗಿ ತಿಲತರ್ಪಣವನ್ನು ಕೊಡುವದರಿಂದ ಪಿತೃಗಳ ಮೋಕ್ಷಕ್ಕೆ ಕಾರಣವಾಗುತ್ತೇವೆ. ವೈಶಾಖ ಮಾಸ ಪರ್ಯಂತರವೂ ಶಾಲಿಗ್ರಾಮಾದಿ ಪರಮಾತ್ಮನ ಪ್ರತಿಮೆಗಳಿಗೆ ಗಂಧಲೇಪನವನ್ನು ಮಾಡಬೇಕು, ಇದು ಸಾಧ್ಯವಾಗದಿದ್ದರೂ ಸಹ ಅಕ್ಷಯ ತೃತೀಯಾದಂದು ಪರಮಾತ್ಮನಿಗೆ ಗಂಧಲೇಪನ ಮಾಡುವುದು ಅಕ್ಷಯವಾಗುವುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನಗಳನ್ನು ಓದಿ


ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮೋತ್ಸವ

ವಸಂತ ಋತುವಿನ ಆಗಮನದೊಂದಿಗೆ ಆರಂಭವಾಗುವ ಚೈತ್ರ ನವರಾತ್ರಿ ಅಥವಾ ವಸಂತೋತ್ಸವ 9 ದಿನಗಳ ಹಬ್ಬ. ಶ್ರೀರಾಮ ನವರಾತ್ರಿ ಅಥವಾ ರಾಮೋತ್ಸವ ಎಂದೇ ಇದು ಪ್ರಸಿದ್ಧಿ. ಚೈತ್ರ ಶುಕ್ಲಪಕ್ಷ ಪಾಡ್ಯ ಯುಗಾದಿಯಿಂದ ಆರಂಭಗೊಳ್ಳುವ ಹಬ್ಬದ ಆಚರಣೆ ರಾಮನವಮಿಯಂದು ಮುಕ್ತಾಯಗೊಳ್ಳುತ್ತದೆ. ರಾಮನವಮಿ, ಆದರ್ಶ ಪುರುಷೋತ್ತಮ ಶ್ರೀರಾಮಚಂದ್ರನ ಜನುಮದಿನ.

ಶ್ರೀರಾಮನ ಅವತಾರ, ಮಹಾವಿಷ್ಣುವಿನ ದಶಾವತಾರಗಳ ಪೈಕಿ 7ನೆಯದು ಎನ್ನುತ್ತವೆ ಪುರಾಣ ಗ್ರಂಥಗಳು. ರಘುವಂಶದ ರಾಜ ದಶರಥನಿಗೆ ಮೂವರು ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಠಿಯಾಗ ಮಾಡುವಂತೆ ಋಷಿ ವಸಿಷ್ಠರು ಸಲಹೆ ನೀಡಿದರು. ಅವರ ಸಲಹೆಯಂತೆ ರಾಜ ಯಾಗ ಮಾಡಿದ. ಯಾಗದಿಂದ ಸಂಪ್ರೀತನಾದ ಸೂರ್ಯದೇವ ಪ್ರತ್ಯಕ್ಷನಾಗಿ ಪಾಯಸವನ್ನು ಪ್ರಸಾದವನ್ನಾಗಿ ನೀಡಿದ. ಈ ಪ್ರಸಾದ ಸ್ವೀಕರಿಸಿದ ದಶರಥನ ಮಡದಿಯರು ನಾಲ್ವರು ಪುತ್ರರಿಗೆ ಜನ್ಮ ನೀಡಿದರು. ಕೌಸಲ್ಯೆಯ ಜ್ಯೇಷ್ಠ ಪುತ್ರನಾಗಿ ಶ್ರೀರಾಮ ಜನಿಸಿದ. ಚೈತ್ರ ಶುಕ್ಲಪಕ್ಷದ ನವಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀರಾಮನ ಜನನವಾಯಿತು ಎನ್ನುತ್ತದೆ ರಾಮಾಯಣ. ಹಾಗಾಗಿ, ರಾಮನ ಜನ್ಮದಿನವನ್ನಾಗಿ ರಾಮನವಮಿಯನ್ನು ಆಚರಿಸುವ ಪದ್ಧತಿ ಬೆಳೆದು ಬಂದಿದೆ.

ರಾಮ ಬೆಳಕಿನ, ಜ್ಞಾನದ ಸಂಕೇತ. ರಾಮನ ಮೊದಲ ಅಕ್ಷರ 'ರಾ'ಗೂ ಸೂರ್ಯನಿಗೂ ಅವಿನಾಭಾವ ಸಂಬಂಧವಿದೆ. ರಾಮ ಎಂಬ ಪದ ಸೂರ್ಯನ ಸಾಕ್ಷಾತ್ ರೂಪ ಎನ್ನುವ ಮಾತಿದೆ. ರಾಮನ ವಂಶ ಸೂರ್ಯವಂಶ ಅಂದರೆ ರಘುವಂಶ ಎಂಬುದು ಈ ವಾದಕ್ಕೆ ಪೂರಕ. ಕಾಕತಾಳೀಯವೆಂಬಂತೆ ಸೂರ್ಯ ಉತ್ತರ ಧ್ರುವದತ್ತ ತನ್ನ ಚಲನೆ ಆರಂಭಿಸಿದ ಫಲವಾಗಿ ಆರಂಭವಾಗುವ ಬೇಸಿಗೆ ಕಾಲದಲ್ಲಿಯೇ ರಾಮೋತ್ಸವ ಜರುಗುತ್ತದೆ. ಹಲವು ಭಾಷೆಗಳಲ್ಲಿ 'ರಾ' ಅಕ್ಷರ ಬೆಳಕು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಪುರಾತನ ಈಜೀಪ್ತಿಯನ್ನರು ಸೂರ್ಯನನ್ನು 'ಅಮೋನ್ ರಾ' ಅಥವಾ 'ರಾ' ಎಂದು ಸಂಬೋಧಿಸುತ್ತಿದ್ದರು. ಲ್ಯಾಟಿನ್ನಲ್ಲಿ 'ರಾ' ಎಂಬುದು ಬೆಳಕಿಗೆ ಪರ್ಯಾಯ ಪದ. ಇಂಗ್ಲೀಷ್ನಲ್ಲಿ ರೇಡಿಯನ್ಸ್, ರೇ, ರೇಡಿಯಂ ಎಂಬ ಪದಗಳು ಬೆಳಕಿನ ಕಿರಣದ ಹೊರಸೂಸುವಿಕೆ ಎಂಬರ್ಥ ನೀಡುತ್ತವೆ. 'ರಾಬಿ' ಎನ್ನುವುದಕ್ಕೆ ಸಂಸ್ಕೃತದಲ್ಲಿ ಸೂರ್ಯ ಎಂಬ ಅರ್ಥವಿದೆ.

ಅಯೋಧ್ಯೆಯಲ್ಲಿ ಭಕ್ತರ ಸಡಗರ, ಸಂಭ್ರಮ:
ಹಬ್ಬದ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಶೃಂಗರಿಸುವುದು ಸಾಮಾನ್ಯ. ಮನೆಯ ಹಿರಿಯರು ಬೆಳಗ್ಗೆಯೇ ಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿದರೆ, ಕಿರಿಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ನೀರು ಮಜ್ಜಿಗೆ, ಕೋಸಂಬರಿ ಪಾನಕಗಳನ್ನು ರಾಮನಿಗೆ ನೈವೇದ್ಯ ಮಾಡಿ, ಪ್ರಸಾದವಾಗಿ ವಿತರಿಸುವುದು ಹಬ್ಬದ ಆಚರಣೆಗಳಲ್ಲೊಂದು. ಕೆಲವೆಡೆ ಹೋಳಿಗೆ, ಗುಳಪಾಟಿಗಳನ್ನೂ ಖಾದ್ಯವಾಗಿ ತಯಾರಿಸುತ್ತಾರೆ. 

ರಾಮಭಕ್ತರಿಗಿದು ಪರ್ವಕಾಲ. ಒಂಬತ್ತು ದಿನಗಳ ಕಾಲ 'ರಾಮಚರಿತಮಾನಸ'ದ ಪಠಣ, ರಾಮ ನಾಮ ಜಪ, ರಾಮನ ಕುರಿತಾದ ಭಜನೆ, ಪೂಜೆಗಳ ಮೂಲಕ ರಾಮನ ಅನುಗ್ರಹಕ್ಕೆ ಮೊರೆ ಹೋಗುತ್ತಾರೆ. ರಾಮನವಮಿಯಂದು ಶ್ರೀರಾಮನ ದೇವಾಲಯಗಳಿಗೆ ತೆರಳುವ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಕೆಲವೆಡೆ ರಾಮ, ಸೀತೆ, ಲಕ್ಷ್ಮಣ ಹಾಗೂ ರಾಮಭಕ್ತ ಹನುಮನ ಶೋಭಾಯಾತ್ರೆಯೂ ಜರುಗುತ್ತದೆ.

ಶ್ರೀರಾಮ ಜನಿಸಿದನೆನ್ನಲಾದ ಅಯೋಧ್ಯೆಯಲ್ಲಿ ಈ ದಿನ ಭಕ್ತರ ಸಡಗರ, ಸಂಭ್ರಮ ಎಲ್ಲೆ ಮೀರಿರುತ್ತದೆ. ಇಲ್ಲಿನ ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡುವ ಭಕ್ತರು, ಶ್ರೀರಾಮನ ದರ್ಶನ ಮಾಡಿ ಪುನೀತರಾಗುತ್ತಾರೆ. ಆಂಧ್ರದ ಭದ್ರಾಚಲಂನಲ್ಲಿ ರಾಮನವಮಿಯಂದು ನಡೆಯುವ 'ಸೀತಾಕಲ್ಯಾಣ ಉತ್ಸವ' ಜಗದ್ವಿಖ್ಯಾತ. ರಾಮ-ಸೀತೆಯರ ವಿವಾಹ ವಾರ್ಷಿಕೋತ್ಸವ ನಿಮಿತ್ತ ಇಲ್ಲಿ ಉತ್ಸವ ಜರುಗುತ್ತದೆ. ಆದರೆ, ಮಿಥಿಲಾ ಹಾಗೂ ಅಯೋಧ್ಯೆಯಲ್ಲಿ 'ಸೀತಾಕಲ್ಯಾಣ ಮಹೋತ್ಸವ' ಜರುಗುವುದು ವಿವಾಹ ಪಂಚಮಿಯಂದು. ಅಂದರೆ ಮಾರ್ಗಶೀರ್ಷ ಶುಕ್ಲ ಪಂಚಮಿಯಂದು. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾ-ರಾಮರ ವಿವಾಹ ನಡೆದುದು ವಿವಾಹ ಪಂಚಮಿಯಂದು ಎಂಬುದು ಇದಕ್ಕೆ ಆಧಾರ.

ರಜಪೂತರಿಂದ ಶಸ್ತ್ರಾಸ್ತ್ರ ಪೂಜೆ:
ರಾವಣನ ವಿರುದ್ಧ ರಾಮ ಜಯ ಸಾಧಿಸಿದ ಕುರುಹಾಗಿ ರಜಪೂತರು ರಾಮನವಮಿಯಂದು ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳ ಪೂಜೆ ಮಾಡುತ್ತಾರೆ. ಯುದ್ಧದಲ್ಲಿ ಬಳಸಲಾಗುವ ಕುದುರೆಗಳು, ಆನೆಗಳ ಪೂಜೆಯೂ ನಡೆಯುತ್ತದೆ. ಚೈತ್ರ ನವರಾತ್ರಿ ಎಂಬ ಹೆಸರಿನಿಂದ ಆಚರಿಸಲ್ಪಡುವ ಮಹಾರಾಷ್ಟ್ರದಲ್ಲಿ ಈ ದಿನ ದೇವಿಯ ವಿಶೇಷ ಆರಾಧನೆ ಕೂಡ ನಡೆಯುತ್ತದೆ. ಕಾಂಗ್ರಾ ಜಿಲ್ಲೆಯಲ್ಲಿ ರಾಮನವಮಿ ದಿನ 'ರಾಲಿ ಮೇಳ' ಅಥವಾ 'ರಾಲಿ-ಕಾ-ಮೇಳ' ಎಂಬ ಹೆಸರಿನಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಜೇಡಿಮಣ್ಣಿನಿಂದ 'ರಾಲಿ' ಪ್ರತಿಮೆ ತಯಾರಿಸಿ, ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು ಅನುರೂಪ ವರನಿಗಾಗಿ ರಾಮನಲ್ಲಿ ಪ್ರಾರ್ಥಿಸುತ್ತಾರೆ. ಉಜ್ಜಯಿನಿ, ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯಗಳಲ್ಲಿ ಭಕ್ತರು ಈ ದಿನ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಭಕ್ತರು ಸತ್ಸಂಗಗಳಲ್ಲಿ ಪಾಲ್ಗೊಳ್ಳುತ್ತಾರೆ. 

ಮೈಸೂರಿನ ಸಿದ್ಧರಾಮನ ಹುಂಡಿಯಲ್ಲಿ ಊರಿನ ಪ್ರತಿ ಮನೆಯ ಮುಂದೆ ಗ್ರಾಮಸ್ಥರು ಓಕುಳಿಯಾಟ ಆಡುತ್ತಾರೆ. ಈ ಊರಿನಲ್ಲಿ 9 ಬುಡಕಟ್ಟು ಜನಾಂಗಗಳಿದ್ದು, ರಾಮನವಮಿ ಉತ್ಸವದ ಒಂದೊಂದು ದಿನ ಒಂದೊಂದು ಜನಾಂಗದ ಸದಸ್ಯರು ಪೂಜೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಹಬ್ಬದ ದಿನ ಊರಿನಾಚೆ 2 ಕಿ.ಮೀ. ದೂರವಿರುವ ನದಿಯಿಂದ ನಾಲ್ವರು ಬಾಲಕರು ಮಡಿ ನೀರು ತರುತ್ತಾರೆ. ಇವರಿಗೆ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ವೇಷ ಹಾಕಲಾಗುತ್ತದೆ. ಈ ನೀರಿನಿಂದಲೇ ಊರಿನ ಶ್ರೀರಾಮನಿಗೆ ಅಭಿಷೇಕ ಮಾಡಲಾಗುತ್ತದೆ.

ರಾಮನವಮಿ ಪ್ರಯುಕ್ತ ನಾಡಿನ ವಿವಿಧೆಡೆ ಸಂಗೀತೋತ್ಸವಗಳು ಜರುಗುವುದು ಮತ್ತೊಂದು ವಿಶೇಷ. ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಪ್ರೌಢಶಾಲಾ ಆವರಣದಲ್ಲಿ ಪ್ರತಿವರ್ಷ ನಡೆಯುವ 'ರಾಮನವಮಿ ಸಂಗೀತೋತ್ಸವ' ಸಂಗೀತಾಸಕ್ತರ ಪಾಲಿಗೆ ರಸದೂಟವಿದ್ದಂತೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಖ್ಯಾತ ಕಲಾವಿದರಿಗೂ ಪ್ರತಿಷ್ಠೆಯ ಸಂಕೇತ. 

ಆದರ್ಶ ಪುರುಷೋತ್ತಮ ಎಂದೇ ಬಿಂಬಿತನಾಗಿರುವ ಶ್ರೀರಾಮ, ಏಕಪತ್ನಿ ವ್ರತಸ್ಥ. ಪಿತೃವಾಕ್ಯ ಪರಿಪಾಲಕ. ತಂದೆಯ ವಚನ ಪಾಲನೆಗಾಗಿ ಒಲಿದು ಬಂದಿದ್ದ ರಾಜ್ಯವನ್ನೇ ತೊರೆದು, ವನವಾಸಗೈದ ಆದರ್ಶ ವ್ಯಕ್ತಿ. ಪತ್ನಿಯ ಶೀಲದ ಬಗ್ಗೆ ಅಪನಿಂದೆ ಕೇಳಿ ಬಂದಾಗ ಕೈಹಿಡಿದ ಪತ್ನಿಯನ್ನು ತುಂಬು ಗರ್ಭಿಣಿಯಿದ್ದಾಗಲೇ ಕಾಡಿಗೆ ಕಳುಹಿಸಿದ ಮಾನವಂತ. ಪ್ರಜೆಗಳನ್ನು ತನ್ನ ಮಕ್ಕಳಂತೆ ಪರಿಪಾಲಿಸಿದ ರಾಜಧರ್ಮ ಪರಿಪಾಲಕ. ಮಾನವೀಯ, ಕೌಟುಂಬಿಕ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಆತನ ಆದರ್ಶ ಅನುಕರಣೀಯ. 

ಸುಖ, ಸಂಪತ್ತು, ನೆಮ್ಮದಿಗಳಿಂದ ಕೂಡಿದ್ದ ರಾಮರಾಜ್ಯ ಧರ್ಮದ ಬೀಡಾಗಿತ್ತು ಎನ್ನುತ್ತದೆ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ಶಾಂತಿ, ಸೌಹಾರ್ದತೆಯ ಬೀಜ ಬಿತ್ತಿದ್ದರು. ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಲಿ, ನಾಡು ಸುಭೀಕ್ಷವಾಗಲಿ ಎಂದು ಆಶಿಸೋಣ.

ಯುಗಾದಿ ಹೊಸ ವರುಷ ಹೊಸ ಹರುಷ

ಭಾರತೀಯ ಸನಾತನ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜೊತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜೊತೆ ಅವಿನಾಭಾವ ಸಂಭಂದ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ಯುಗಾದಿ.

ಯುಗವೆಂದರೆ ಸೃಷ್ಟಿಯ ಕಾಲಮಾನ ಅಥವಾ ಹೊಸವರ್ಷ ಆದಿ ಎಂದರೆ ವರ್ಷದ ಪ್ರಾರಂಭ ದಿನ. ಅಂದರೆ ಹೊಸ ವರ್ಷದ ಪ್ರಾರಂಭ ದಿನವೇ ಯುಗಾದಿ. ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡು ರೀತಿಯಿಂದ ಆಚರಿಸುವ ಪದ್ಧತಿಯಿದೆ. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧರಿಸಿ, ಅಮಾವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು ಬಂದಿದೆ. ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿಗದಿತ ಸಮಯದಲ್ಲಿ ಬರುವುದಿಲ್ಲ. ಮೇಷರಾಶಿಗೆ ಸೂರ್ಯನು ಪ್ರವೇಶಿಸುವ ದಿವಸ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಏಪ್ರಿಲ್-14ರಂದು ಸೌರಮಾನ ಯುಗಾದಿ ಬರುತ್ತದೆ.

ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. 

ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ 00-ಭಾಗ (ಡಿಗ್ರಿ)ಯಲ್ಲಿ ಸೂರ್ಯ ಬಂದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬರುತ್ತಿರುತ್ತದೆ. ಆದರೆ ಚಂದ್ರನ ಚಲನೆ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಂದ್ರಮಾನ ಸಂವತ್ಸರವಾಗುತ್ತದೆ.

ಈ ಸೃಷ್ಟಿಯು ಜನಿಸಿ ಇಂದಿಗೆ 1,95,58,85113 ವರ್ಷಗಳು ಮುಗಿದಿದೆ. ಚತುರ್ದಶ ಮನುಗಳಲ್ಲಿ ಸ್ವಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮನ್ವಂತರಗಳು ಕಳೆದಿದ್ದು, ಏಳನೇ ವೈವಸ್ವತ ಮನ್ವಂತರಗಳಲ್ಲಿ, ಇಪ್ಪತ್ತೇಳು ಮಹಾ ಯುಗಗಳು ಕಳೆದು, ಇಪ್ಪತ್ತೆಂಟನೇ ಮಹಾಯುಗಗಳಲ್ಲಿ ಕೃತಯುಗ, ತ್ರೇತಾಯುಗ, ದ್ವಾಪರಾಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ. ಈ ಕಲಿಯುಗ 4,32,000 ವರ್ಷಗಳಲ್ಲಿ 5113 ವರ್ಷಗಳು ಕಳೆದು, 5114 ನೆಯ ವರ್ಷ ಆರಂಭವಾಗುತ್ತದೆ. ಶಾಲಿವಾಹನಶಕ 1934 ಕಳೆದು 1935 ಪ್ರಾರಂಭವಾಗುತ್ತದೆ. 60 ಸಂವತ್ಸರಗಳಲ್ಲಿ 26ನೇಯ ನಂದನ ಸಂವತ್ಸರದ ಪ್ರಾರಂಭ.

ಈ ಯುಗಾದಿಯಂದು ಶಾಲಿವಾಹನ ಶಕೆ 1934 ಮುಗಿಯುತ್ತದೆ. ಈ ಶಾಲಿವಾಹನ ಶಕೆ 1934 ಕ್ಕೆ 12 ಸಂಖ್ಯೆ ಕೂಡಿಸಿ, 60 ಸಂಖ್ಯೆಯಿಂದ ಭಾಗಿಸಿದಾಗ ಉಳಿಯುವ ಶೇಷವೇ 26. ಪ್ರಭವ ಸಂವತ್ಸರದಿಂಧ 26 ನೇ ಸಂವತ್ಸರವೇ ನಂದನ ಸಂವತ್ಸರ. ಇದೇ ರೀತಿ ಪ್ರತಿ ವರ್ಷದ ಸಂವತ್ಸರವನ್ನು ಕಂಡು ಹಿಡಿಯಬಹುದು. ಕ್ರೈಸ್ತ ವರ್ಷಕ್ಕೂ ಶಾಲಿವಾಹನ ಶಕೆ ವರ್ಷಕ್ಕೂ 78 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆ ವರ್ಷಕ್ಕೆ 78 ವರ್ಷ ಕೂಡಿದರೆ ಕ್ರೈಸ್ತವರ್ಷ ಬರುತ್ತದೆ. (1934 + 78 = 2012)

ವರ್ಷದ ಮೂರೂವರೆ ಶುಭ ಮುಹೂರ್ತಗಳು, ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧದಿವಸ, ಈ ಮೂರೂವರೆ ಶುಭ ಮುಹೂರ್ತಗಳಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭ ಅತ್ಯಂತ ಶುಭ ದಿವಸವಾಗಿದೆ. ಈ ದಿವಸ ಉತ್ಸವಗಳು ವರ್ಷದುದ್ದಕ್ಕೂ ಬಾಳಿನ ಬೆಂಬಲ, ಮುಂಬಲವಾಗಿ ಬರುತ್ತಿವೆ ಎಂದು ನಂಬಿಕೆ. ಕೆಲವರು ಈ ಶುಭ ಮುಹೂರ್ತದಲ್ಲಿ ಹೊಸ ಹೊಸ ಜೀವನೋಪಾಯಗಳನ್ನೂ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವರು. ಏಕೆಂದರೆ ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.

ಯುಗಾದಿಯು ಹಲವು ಪರಂಪರೆಗಳ ಪ್ರಾರಂಭ ದಿನ. ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಶ್ರೀ ರಾಮನು, ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಈ ಯುಗಾದಿ ದಿವಸವೇ. ವಿಷ್ಣು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ, ವಿಕ್ರಮಾದಿತ್ಯನನ್ನು ಜಯಸಿದ್ದರಿಂದ ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೆ. ವೇದವ್ಯಾಸರು ಕಲಿಯುಗ ಪ್ರಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಯುಗಾದಿ ದಿನದಿಂದ ಹೊಸವರ್ಷ ಪ್ರಾರಂಭವಾಗುವುದರಿಂದ ಹಿಂದೂ ಪಂಚಾಂಗ ಮತ್ತು ಕ್ಯಾಲೆಂಡರ್ ಸಹಾ ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಯುಗಾದಿ ದಿವಸ ಬೆಳಗಿನ ಜಾವ, ಬೇಗ ಎದ್ದು, ಮಂಗಳ ಸ್ನಾನ ಮಾಡಿ (ತೈಲಾಭ್ಯಂಗ) ಹೊಸ ಬಟ್ಟೆ ಧರಿಸಿಕೊಂಡು ಮನೆಯನ್ನೆಲ್ಲಾ ಮಾವು-ಬೇವು ಎಲೆಗಳಿಂದ ಶೃಂಗರಿಸಿ, ಹೊಸ ವರ್ಷವನ್ನು ಬರಮಾಡಿಕೊಂಡು, ವಿಶೇಷವಾಗಿ ವರ್ಷವೆಲ್ಲಾ ಹರ್ಷದಾಯಕವಾಗಲಿ, ಸಿಹಿಯೊಂದಿಗೆ ಕಹಿಯನ್ನು ಬರಮಾಡಿಕೊಂಡು, ಇದನ್ನು ಸಹಿಸುವ ಶಕ್ತಿ ಬರಲಿ ಎಂದು ಬೇವು-ಬೆಲ್ಲ ಸವಿಯಲಾಗುತ್ತದೆ. ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ-ದುಃಖ, ಹಗಲು-ರಾತ್ರಿ, ನೋವು-ನಲಿವು, ಪ್ರೀತಿ-ದ್ವೇಷ, ಲಾಭ-ನಷ್ಟ ಇವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ವರ್ಷವೀಡೀ ಸಮರಸವಾಗಿರಲಿ ಎಂಬುದೇ ಇದರ ಐತಿಹ್ಯ. ಬೇವು-ಬೆಲ್ಲವನ್ನು ಸೇವಿಸುವಾಗ ಹೇಳುವ ಶ್ಲೋಕ ಹೀಗಿದೆ. 

ಶಿಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಯ ನಿಂಬಕಂದಳ ಭಕ್ಷಣಂ||

ಅಂದರೆ ನೂರು ವರ್ಷಗಳ ಆಯುಷ್ಯ ಸದೃಢ ಆರೋಗ್ಯ ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ.

ಯುಗಾದಿಯಂದು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲ ತಿಳಿದುಕೊಳ್ಳಬೇಕೆಂದು ಧರ್ಮಸಿಂಧವಿನಲ್ಲಿ ಪ್ರತಿಗೃಹಂ, ಧ್ವಜಾರೋಹಣಂ, ನಿಂಬಪತ್ರಾಶನಂ, ವತ್ಸರಾಧಿಫಲ ಶ್ರವಣಂ, ನವರಾತ್ರಾರಂಭಃ ತೈಲ ಅಭ್ಯುಂಗಾದಿಶ್ಚ ಶುದ್ಧಮಾಸ ಪ್ರತಿಪದೆ ಕಾರ್ಯಃ ಅಂದರೆ ಮನೆಯನ್ನೆಲ್ಲಾ ಮಾವು, ಬೇವು, ತಳಿರು-ತೋರಣಗಳಿಂದ ಅಲಂಕರಿಸಿ, ಧ್ವಜಾರೋಹಣ ಬೇವು-ಬೆಲ್ಲ ಸೇವಿಸುವುದು, ಪಂಚಾಂಗ ಶ್ರವಣದಲ್ಲಿ, ಯುಗಾದಿ ದಿವಸ ಸಂವತ್ಸರದ ಫಲವನ್ನು ಶ್ರವಣ ಮಾಡಬೇಕು. 

ಸೂರ್ಯನಿಂದ ಆರೋಗ್ಯವನ್ನು ಚಂದ್ರನಿಂದ ಕೀರ್ತಿಯನ್ನು ಮಂಗಳನಿಂದ ಐಶ್ವರ್ಯ, ಬುಧನಿಂದ ಬುದ್ದಿ, ಗುರುವಿನಿಂದ ಗೌರವ, ಶುಕ್ರನಿಂದ ಶುಭವಾಣಿ, ಶನಿಯಿಂದ ಸಂತೋಷ, ರಾಹುವಿನಿಂದ ಶಕ್ತಿ, ಕೇತುವಿನಿಂದ ಕುಲೋನ್ನತಿ ಉಂಟಾಗುತ್ತದೆ. ವಾರದ ಶ್ರವಣದಿಂದ ದೀರ್ಘಾಯುಷ್ಯ ಉಂಟಾಗುತ್ತದೆ. ನಕ್ಷತ್ರ ಶ್ರವಣದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಯೋಗ ಶ್ರವಣದಿಂದ ವಿಯೋಗನಾಶವಾಗುತ್ತದೆ. ಕರಣ ಶ್ರವಣದಿಂದ ಎಲ್ಲಾ ಇಷ್ಟಗಳು ಫಲಿಸುತ್ತವೆ. ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ. ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.

ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿಯ ಮಹಿಮೆ:
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಬೇಡನ ಶಿವಭಕ್ತಿ: 
ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

ಶಿವರಾತ್ರಿ ಆಚರಣೆ ಹಿನ್ನೆಲೆ:
೧. ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ.

೨. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

೩. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. 

೪. 'ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

೫. ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ
೧. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ' ಸ್ಕಂದ ಪುರಾಣ 'ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ... ' ಗರುಡ ಮತ್ತು ಅಗ್ನಿ ಪುರಾಣ ' ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. 

೨. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

೩. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

೪. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಟಕ್ಕೆ ಸಿಲುಕಿದ್ದೂ ಇದೆ.. ಆದರೆ ಎಂಥದ್ದೇ ಸಂಕಟವಿದ್ದರೂ ಶಿವನು ಭಕ್ತರನ್ನು ಸದಾ ಅನುಗ್ರಹಿಸುತ್ತಲೇ ಇರುತ್ತಾನೆ.. ಅದಕ್ಕೆ “ಶಿವ ಭಕ್ತನಿಗೆ ನರಕಾ ಇಲ್ಲ” ಅನ್ನೋ ಮಾತಿದೆ.

೫. ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು... ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ
ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. 

ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. 

ವೇದೋಕ್ತ ಪೂಜೆ ಮತ್ತು ಆಚರಣೆ
ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. 

ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.

ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. 

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

ಜಾಗರಣೆ, ಹಬ್ಬದ ವಿಶೇಷ ಆಚರಣೆ:
ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ.

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.

ರಥಸಪ್ತಮಿ ವಿಶೇಷಾಂಕ

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಇಂದು ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ.

ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.

ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.

ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.

ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.

ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.

ದ್ವಾಪರಾಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ 'ಆದಿತ್ಯ ಹೃದಯ' ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ 'ಶಮಂಥಕಮಣಿ' ಪಡೆದ ಸತ್ರಾಜಿತ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ 'ಸೂರ್ಯಶತಕ'ವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ.

ರಥ ಸಪ್ತಮೀಯು ಯಾವಾಗಲೂ ಅರುಣುದೋಯವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಎಕ್ಕೆ ಎಲೆಯನ್ನು ತಲೆ ಮತ್ತು ಹೆಗಲ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು | 
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ || 
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ | 
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ || 
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ | 
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ || 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನೀಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ | 
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || 
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ | 
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || 
ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.

ಮಕರ ಸಂಕ್ರಾಂತಿಯ ಶುಭಾಷಯಗಳು

ಉತ್ತರಾಯಣ ಪುಣ್ಯಕಾಲದ ಶುಭದಿನ- ಮಕರ ಸಂಕ್ರಾಂತಿ

ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.

ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧೀಕರಿಸುತ್ತವೆ.

ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಆದುದರಿಂದಲೇ ಮಹಾಭಾರತದ ಕಥೆಯಲ್ಲಿ ಭೀಷ್ಮ ಇಹಲೋಕ ತ್ಯಜಿಸಲು ಈ ಕಾಲದ ನಿರೀಕ್ಷೆಯಲ್ಲಿದ್ದದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕಾಲದಲ್ಲಿ ಇರುಳಿನ ಅವಧಿಯು ಕಡಿಮೆಯಿದ್ದು ಸೂರ್ಯನ ಬೆಳಕು ಸದಾ ಭೂಮಿ ಮೇಲಿರುತ್ತದೆ.

ಗಡಗಡ ನಡುಗಿಸುವ ಚಳಿಯು ದೂರವಾಗಿ, ವಸಂತನ ಆಗಮನವಾಗುತ್ತಲೇ, ಪ್ರಕೃತಿ ದೇವಿಯ ಕಣ್ಣಲ್ಲಿ ಹೊಸ ಕಳೆ, ಹೊಸ ಹೊಳಹು. ಗಿಡಮರಗಳೆಲ್ಲಾ ಹೂಬಿಟ್ಟು ತನ್ನನ್ನು ನೆಚ್ಚಿಕೊಂಡಿರುವ ಸಮಸ್ತ ಜೀವರಾಶಿಗೆ ಫಲ-ಪುಷ್ಪಗಳೊಂದಿಗೆ ಪೋಷಣೆ ನೀಡುವ ಕಾಯಕಕ್ಕೆ ಅಡಿಯಿಡುವ, ಹಚ್ಚ ಹಸಿರಿನೊಂದಿಗೆ ದಷ್ಟಪುಷ್ಟಗೊಳ್ಳುವ ಪ್ರಕೃತಿದೇವಿಯನ್ನು ಆದರಿಸುವ ಸಂಕ್ರಾಂತಿಯ ಸಡಗರವಿದು. ಹೊಸ ವರ್ಷದ ಆಚರಣೆಯ ನಂತರ ದೇಶವು ಸಂಭ್ರಮ ಪಡುವ ಸುಗ್ಗಿಯ ಪರ್ವವೇ ಈ ಮಕರ ಸಂಕ್ರಮಣ. ಭೂಮಿಯನ್ನು ಹಸನಾಗಿಸಿ ನಮ್ಮ ಜೀವನವನ್ನೂ ಹಸನಾಗಿಸುವ ಪ್ರಕೃತಿ ಮಾತೆಗೆ ನಮಿಸಿ ಸಂಭ್ರಮಿಸುವ ಪರ್ವವಿದು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆಯುಟ್ಟು, ಮೈಮನಗಳ ಕೊಳೆ ನಿವಾರಿಸಿಕೊಳ್ಳುವ ಸಂಕೇತವೂ ಅಹುದು.

ವಾಸ್ತವಿಕವಾಗಿ, ಸೂರ್ಯನ ಚಲನೆಯ ಆಧಾರದಲ್ಲಿರುವ ಮೇಷ-ಮೀನಾದಿ ತಿಂಗಳುಗಳನ್ನು ಸೂರ್ಯನು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಆಧಾರದಲ್ಲಿ ಗುರುತಿಸಲಾಗುತ್ತದೆಯಾದರೂ, ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನಕ್ಕೆ ಅದೇನೋ ವಿಶೇಷತೆ, ಸಡಗರ, ಸಂಭ್ರಮ. ಇತರ ೧೧ ರಾಶಿಗಳಿಗೂ ಸೂರ್ಯ ಪ್ರವೇಶಿಸುತ್ತಾನೆ. ಹೀಗಿರುವಾಗ ಧನುವಿನ ಮನೆಯನ್ನು ತೊರೆದು ಆತನ ಮಕರ ರಾಶಿ ಪ್ರವೇಶವೇ ವಿಶೇಷವಾಗುವುದೇಕೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಇದು ಮುಂಬರುವ ಪ್ರಖರ ಬೆಳಕಿನ ಬೆಚ್ಚಗಿನ ವಾತಾವರಣದ ಆರಂಭಕ್ಕೆ ಮುನ್ನುಡಿಯಿಡುವ ದಿನ. ನಮಗೆ ಹೆಚ್ಚು ಸಮಯ ದೊರೆಯುತ್ತದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಸಂದೇಶದೊಡನೆ ಅಂದಿನಿಂದ ಹಗಲು ದೀರ್ಘವಾಗುತ್ತದೆ.

ತಂದೆ-ಮಕ್ಕಳ ಬಂಧದ ಕುರುಹು
ಪುರಾಣಗಳನ್ನು ಓದುತ್ತಾ ಹೋದರೆ, ಸೂರ್ಯನಿಗೆ ಛಾಯಾ ದೇವಿಯ ಗರ್ಭದಲ್ಲಿ ಜನಿಸಿದ ಮಗ ಶನಿ. ಶನಿ ಮತ್ತು ಸೂರ್ಯ ಇಬ್ಬರ ಗುಣಗಳು ತದ್ವಿರುದ್ಧವಾದರೂ, ಸೂರ್ಯನು ವರ್ಷಕ್ಕೊಂದು ಬಾರಿ ತನ್ನ ಪುತ್ರನಾದ ಶನಿಯ ಮನೆಯಾಗಿರುವ ಮಕರ ರಾಶಿಗೆ ಬಂದೇ ಬರುತ್ತಾನೆ. ಒಂದು ರೀತಿಯಲ್ಲಿ ತಂದೆ-ಮಕ್ಕಳ ಬಾಂಧವ್ಯದ ಸಂಕೇತವಾಗಿಯೂ ಭಕ್ತಿಯ ಸಂಕೇತವಾಗಿಯೂ ಮಕರ ಸಂಕ್ರಾಂತಿಯು ಮಾನವ ಜೀವನದ ಬಾಂಧವ್ಯದ ಬೆಸುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಮೂರು ದಿನಗಳ ಸಂಕ್ರಾಂತಿ ಸಡಗರ
ಸಂಕ್ರಾಂತಿ ಎಂದ ತಕ್ಷಣ ಕರ್ನಾಟಕದಲ್ಲಿ ನೆನಪಿಗೆ ಬರುವುದು ಎಳ್ಳು-ಬೆಲ್ಲ ಮತ್ತು ಕಬ್ಬು. ವಾಸ್ತವದಲ್ಲಿ ಮಕರ ಸಂಕ್ರಮಣ ಹಬ್ಬವು ನಾಲ್ಕು ದಿನಗಳ ಪರ್ಯಂತ ನಡೆಯುತ್ತದೆ. ಭೋಗಿ ಹಬ್ಬ, ಸಂಕ್ರಾಂತಿ ಮತ್ತು ಕರೀಹಬ್ಬ . ಇದರ ಆಚರಣೆ ಭಿನ್ನವಾಗಿರುತ್ತದೆ.

ಮೊದಲನೆಯ ದಿನ ಭೋಗಿ ಹಬ್ಬ, ಅಂದು ಮನೆ-ಮನಸಿನ ಕತ್ತಲು-ಕಲ್ಮಶ ತೊಳೆಯುವ ದಿನ. ಮನೆಯನ್ನು ಶುಭ್ರವಾಗಿಸಿ, ಮನಸ್ಸನ್ನೂ ಶುಚಿಗೊಳಿಸಿ, ಇಳೆಯಲ್ಲಿ ಬೆಳೆಯ ಸಮೃದ್ಧಿಗೆ ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ-ಬೆರಣಿಯಿಂದ ಅಗ್ನಿ ರಚಿಸಿ, ಅದರಲ್ಲಿ ಬೇಡವಾದ (ಮುರಿದ ಕುರ್ಚಿ ಇತ್ಯಾದಿ ಪೀಠೋಪಕರಣ ಮತ್ತಿತರ ಹಳೆಯ, ಬೇಡವಾದ ಸಾಮಗ್ರಿ) ವಸ್ತುಗಳನ್ನು ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಆಚರಣೆ ನಡೆಯುತ್ತದೆ.

ಎರಡನೇ ದಿನ ಮಕರ ಸಂಕ್ರಾಂತಿ. ಬಾಳು ಬೆಳಗುವ ಸೂರ್ಯನ ಆರಾಧನೆಯ ದಿನ. ಮನೆಯ ಹೊರಗೆ ಒಲೆ ಹಾಕಿ ಸಿಹಿ ಪೊಂಗಲ್ ಅಥವಾ ಹುಗ್ಗಿ ತಯಾರಿಸಿ ಸೂರ್ಯನಿಗೆ ಅರ್ಪಿಸುವುದು, ಮನೆಯೆದುರು ರಂಗವಲ್ಲಿ ಹಾಕುವುದು ಕಂಡುಬರುತ್ತದೆ. ಸುಖ ಸಮೃದ್ಧಿ, ಸದಾಶಯಗಳು ಜೀವನದಲ್ಲಿ ಉಕ್ಕಿ ಬರಲಿ ಎಂಬುದನ್ನು ಪ್ರತಿನಿಧೀಕರಿಸುವ ನಿಟ್ಟಿನಲ್ಲಿ ಈ ಸಿಹಿ ಪೊಂಗಲ್ ಅಥವಾ ಹುಗ್ಗಿಯನ್ನು ಒಲೆಯಲ್ಲಿ ಉಕ್ಕಿಸಲಾಗುತ್ತದೆ. ಇದನ್ನು ಪರಸ್ಪರ ಹಂಚಿ ತಿಂದು ಸಂಭ್ರಮಿಸುವ ದಿನವೂ ಇದೇ. ಇಂದು ಮನೆ ಮನೆಗೆ ತೆರಳಿ "ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ" ಎಂದು ಹಾರೈಸುತ್ತಾ, ಎಳ್ಳು, ಬೆಲ್ಲ, ಸಕ್ಕರೆಯಚ್ಚು, ಕೊಬ್ಬರಿ, ಸಕ್ಕರೆಬೊಂಬೆ, ಜತೆಗೆ ಹುರಿಗಡಲೆ, ನೆಲಗಡಲೆ ಸೇರಿಸಿ, ಕಬ್ಬು ಕೂಡ ಪರಸ್ಪರ ವಿನಿಮಯ ಮಾಡುತ್ತಾ, ನೆರೆಕರೆಯ ಬಾಂಧವ್ಯ ವೃದ್ಧಿಯಾಗಿಸಿಕೊಳ್ಳುವ ಆಚರಣೆ. ಇದಕ್ಕೆ ಎಳ್ಳುಬೀರುವುದು ಎನ್ನುತ್ತಾರೆ. ಇಲ್ಲಿ ಎಳ್ಳು ಶನಿಯ ಪ್ರತೀಕ ಮತ್ತು ಬೆಲ್ಲ ಸೂರ್ಯನ ಪ್ರತೀಕ. ಶನಿ-ಸೂರ್ಯನ ಅಂದರೆ ತಂದೆ-ಮಕ್ಕಳ ಬಾಂಧವ್ಯದ ಸಂಕೇತವೂ ಹೌದು. ಆದರೆ, ಇತ್ತೀಚೆಗಿನ ಅವಸರದ ಯುಗದಲ್ಲಿ ಎಲ್ಲ ಆಚರಣೆಗಳೂ ಒಂದೇ ದಿನಕ್ಕೆ ಸೀಮಿತವಾಗುತ್ತಿರುವುದು ನಾವು ಕಾಣುತ್ತಿರುವ ಸತ್ಯ.

ಸಂಕ್ರಾಂತಿಯ ಮೂರನೇ ದಿನ ಗೋವುಗಳನ್ನು ಆರಾಧಿಸುವ ದಿನ. ಗದ್ದೆ ಉಳುಮೆಗೆ ನೆರವಾಗುವ ಎತ್ತುಗಳು, ಕೃಷಿಕನಿಗೆ ನೆರವಾಗುವ ಹಸುಗಳನ್ನು ಸಿಂಗರಿಸಿ, ಆರತಿ ಮಾಡಿ, ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಹಲವೆಡೆ ನಾವು ಕಾಣಬಹುದು. ಅಂದು ತಾವು ಸಾಕಿರುವ ಜಾನುವಾರುಗಳಿಗೆ ರೈತರು ಬೆಚ್ಚನೆ ನೀರಿನ ಸ್ನಾನ ಮಾಡಿಸಿ, ಶೃಂಗಾರ ಮಾಡುತ್ತಾರೆ. ಸ್ವಲ್ಪ ಸಿರಿವಂತರಾದರೆ ಅವುಗಳಿಗೆ ಸುಗಂಧ ದ್ರವ್ಯ ಲೇಪನ ಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಶೃಂಗರಿಸುತ್ತಾರೆ. ಬೇಕಾದಷ್ಟು ಮೇವು ಕೊಟ್ಟು ಸಾಧು ಪ್ರಾಣಿಗಳನ್ನು ತಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ನೋವು ನೀಡಬಾರದೆಂಬ ಕಾರಣದಿಂದ ಆ ದಿನದಂದು ಪ್ರಾಣಿಗಳಿಗೆ ಕೆಲಸವಿಲ್ಲ. 

ವಿವಿಧತೆಯಲ್ಲಿ ಏಕತೆ 
ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಯಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವೆಂದು ಕರೆಸಿಕೊಳ್ಳುವ ಇದು ಈ ವರ್ಷದಿಂದ ತಮಿಳು ಹೊಸ ವರ್ಷಾರಂಭ ದಿನವಾಗಿಯೂ ಅಧಿಕೃತವಾಗಿ ಮಾನ್ಯವಾಗಿದೆ. ಸಿಹಿ ಪೊಂಗಲ್ ಈ ದಿನದ ವಿಶೇಷ. ಕೇರಳ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಮಹಾರಾಷ್ಟ್ರದಲ್ಲಿ ತಿಲ-ಗುಳ್ (ಎಳ್ಳುಂಡೆ) ಹಬ್ಬವಾಗಿ, ಆಂಧ್ರ ಪ್ರದೇಶದಲ್ಲಿ ಪೆದ್ದ ಪಂಡುಗ (ದೊಡ್ಡ ಹಬ್ಬ), ಅಸ್ಸಾಂನಲ್ಲಿ ಭೋಗಲಿ ಬಿಹು/ಮಾಘ ಬಿಹು, ಬಿಹಾರದಲ್ಲಿ ತಿಲ ಸಂಕ್ರಾಂತಿ, ಗುಜರಾತಿನಲ್ಲಿ ಗಾಳಿಪಟ ಉತ್ಸವವನ್ನೊಳಗೊಂಡ ಉತ್ತರಾಯಣ, ಮಧ್ಯಪ್ರದೇಶದಲ್ಲಿ ಸುಕಾರತ್/ಸಕಾರತ್, ಪಂಜಾಬ್ ಮತ್ತು ಹರ್ಯಾಣದಲ್ಲಿ ಲೋಹ್ರಿ, ಉತ್ತರ ಪ್ರದೇಶದಲ್ಲಿ ಕಿಚಿಡಿ/ಕಿಚಿರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳದ ಮೂಲಕ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತದೆ.

ಉತ್ತರಾಯಣ ಪುಣ್ಯಕಾಲವೇ ಇದು? 
ಉತ್ತರಾಯಣ ಪುಣ್ಯಕಾಲಕ್ಕೂ ಮಕರ ಸಂಕ್ರಾಂತಿಗೂ ಸಂಬಂಧ ಕಲ್ಪಿಸಲಾಗುತ್ತದೆಯಾದರೂ, ಅದರ ಬಗೆಗಿನ್ನೂ ವಾದ-ವಿವಾದಗಳಿವೆ. ನಮ್ಮ ದೇಶದಲ್ಲಿ ಚಾಂದ್ರಮಾನ (ಚಂದ್ರನ ಚಲನೆ ಆಧರಿಸಿದ) ಮತ್ತು ಸೌರಮಾನ (ಸೂರ್ಯನ ಚಲನೆ ಆಧರಿಸಿದ) ಎರಡು ಪಂಚಾಂಗಗಳನ್ನು ಅನುಸರಿಸಲಾಗುತ್ತದೆ. ಹೆಚ್ಚಾಗಿ ಹಬ್ಬ ಹರಿದಿನಗಳ ದಿನಗಳನ್ನು ನಿರ್ಣಯಿಸುವುದು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ. ಆದರೆ, ಮಕರ ಸಂಕ್ರಾಂತಿ ಮಾತ್ರ ಇದಕ್ಕೆ ಹೊರತಾಗಿದೆ. ಅದು ಸೂರ್ಯನ ಪರಿಭ್ರಮಣೆಯ ಆಧಾರದ ಸೌರಮಾನ ಅಥವಾ ಸಾಯನ ಪಂಚಾಗ ಆಧರಿತವಾಗಿದೆ. ಯಾಕೆಂದರೆ ಚಂದ್ರನ ಚಲನೆಯನ್ನು ಆಧರಿಸಿ (ಚಾಂದ್ರಮಾನ ಪದ್ಧತಿ ಪ್ರಕಾರದ ಪಂಚಾಂಗ ಅನುಸರಿಸಿ) ನೋಡಿದರೆ, ಉತ್ತರಾಯನ ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆ ಆರಂಭವಾಗುವುದು ಡಿಸೆಂಬರ್ ೨೨ರ ಆಸುಪಾಸಿನಲ್ಲಿ ಬರುವ ವೈಕುಂಠ ಏಕಾದಶಿಯಂದು. ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಕಾರಣಕ್ಕೇ ಶರಶಯ್ಯೆಯಲ್ಲಿದ್ದ ’ಇಚ್ಛಾಮರಣಿ’ ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗಕ್ಕಾಗಿ ಕಾದರು.

ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಣ ನಡೆಸುವ ಈ ಉತ್ತರಾಯಣದ ಆರು ತಿಂಗಳ ಕಾಲವು ಅತ್ಯಂತ ಶ್ರೇಷ್ಠವಾದ ಶುಭ ದಿನಗಳನ್ನು ಹೊಂದಿರುತ್ತವೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ವಿವಾಹವೇ ಮೊದಲಾದ ಮಂಗಳ ಕಾರ್ಯಗಳು ಜರುಗುತ್ತವೆ.

ನಮಗೆ ಹಿರಿಯರು ಹೇಳಿದ್ದಿದೆ- ಮಗೂ... ನಮಗೆ ಒಂದು ವರ್ಷ ಎಂದರೆ, ದೇವ ದೇವತೆಗಳಿಗೆ ಒಂದು ದಿನ ಇದ್ದ ಹಾಗೆ ಎಂಬುದಾಗಿ. ಅದನ್ನೇ ನೆನಪಿಸಿಕೊಂಡು ಹೇಳಬಹುದಾದರೆ, ಆ ದೇವ ದೇವತೆಗಳ ಒಂದು ದಿನದಲ್ಲಿ ಆರು ತಿಂಗಳ ಹಗಲು ಆರಂಭವಾಗುವುದು ಉತ್ತರಾಯನ (ಉತ್ತರಾಯಣ) ಪುಣ್ಯಕಾಲದಲ್ಲಿ. ಕೊನೆಗೊಳ್ಳುವುದು ದಕ್ಷಿಣಾಯನದಲ್ಲಿ (ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ - ಕರ್ಕ ಸಂಕ್ರಮಣ). ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ದಿನ ಈ ಮಕರ ಸಂಕ್ರಮಣ. ಅದೇ ರೀತಿ ನಮ್ಮ ಜೀವನದಲ್ಲೂ ಕತ್ತಲು ಕಳೆಯಲಿ, ಬೆಳಕು ಮೆರೆಯಲಿ... ಎಳ್ಳು ಬೆಲ್ಲವ ತಿಂದು ನಾಲ್ಕು ಒಳ್ಳೆಯ ಮಾತಾಡುವಂತಾಗಲಿ.